ಕೇಂದ್ರದ ಜತೆ ಸಮನ್ವಯ, ನೆರೆ ರಾಜ್ಯಗಳೊಂದಿಗೆ ಸ್ನೇಹ!

Published : Sep 12, 2026, 12:03 PM IST
DK Shivakumar

ಸಾರಾಂಶ

ಬಹಳ ತಾಳ್ಮೆ, ಸಂಯಮದಿಂದಲೇ ಕೊಂಚ ತಡವಾದರೂ ತಮ್ಮ ಕನಸಿನ ಮುಖ್ಯಮಂತ್ರಿ ಗಾದಿ ಅಲಂಕರಿಸಿದ ಡಿ.ಕೆ. ಶಿವಕುಮಾರ್ ಅವರು ಯಶಸ್ವಿಯಾಗಿ 100 ದಿನಗಳ ಆಡಳಿತ ಪೂರ್ಣಗೊಳಿಸಿದ್ದಾರೆ.ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ನಡೆಸದೆ ಸಹಕಾರ ಮತ್ತು ಸಮನ್ವಯದೊಂದಿಗೆ ಸಾಗಿ ಕೆಲಸ ಗೆಲ್ಲುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ಬೆಂಗಳೂರು : ಬಹಳ ತಾಳ್ಮೆ, ಸಂಯಮದಿಂದಲೇ ಕೊಂಚ ತಡವಾದರೂ ತಮ್ಮ ಕನಸಿನ ಮುಖ್ಯಮಂತ್ರಿ ಗಾದಿ ಅಲಂಕರಿಸಿದ ಡಿ.ಕೆ. ಶಿವಕುಮಾರ್ ಅವರು ಯಶಸ್ವಿಯಾಗಿ 100 ದಿನಗಳ ಆಡಳಿತ ಪೂರ್ಣಗೊಳಿಸಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ನೀರಾವರಿ, ಹೆದ್ದಾರಿ, ರೈಲ್ವೆ, ಮೆಟ್ರೋ ಸೇರಿ ಇನ್ನಿತರೆ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ನಡೆಸದೆ ಸಹಕಾರ ಮತ್ತು ಸಮನ್ವಯದೊಂದಿಗೆ ಸಾಗಿ ಕೆಲಸ ಗೆಲ್ಲುವ ಹಾದಿಯಲ್ಲಿ ಸಾಗುತ್ತಿದ್ದಾರೆ.

ಅದೇ ರೀತಿ, ರಾಜ್ಯದ ಜಲ ವಿವಾದಗಳ ವಿಚಾರದಲ್ಲಿಯೂ ನೆರೆ ರಾಜ್ಯಗಳೊಂದಿಗೂ ಯಾವುದೇ ವೈಮನಸ್ಯಗಳಿಗೆ ಅವಕಾಶ ನೀಡದೆ ಸ್ನೇಹ ಪ್ರೀತಿಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಮೈಸೂರಿಗೆ ಬಂದಾಗ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಯಾವಾಗಲೂ ನಿಮ್ಮ ಜೊತೆ ಇರುತ್ತದೆ ಎಂದು ಸಿಎಂ ತಮ್ಮ ಭಾಷಣದಲ್ಲಿ ಸಂದೇಶ ನೀಡಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದರೂ, ಜನರ ಹಿತದೃಷ್ಟಿಯಿಂದ ಎರಡೂ ಸರ್ಕಾರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂಬ ನಿಲುವು ಅವರ ರಾಜಕೀಯ ಕಾರ್ಯಶೈಲಿಯಲ್ಲಿ ಕಾಣಿಸುತ್ತದೆ.

30,000 ಕೋಟಿ ಅನುದಾನ ತರಲು ಯತ್ನ:

ಸಿಎಂ ಗಾದಿಗೇರಿದ ಬೆನ್ನಲ್ಲೇ ಪ್ರಧಾನಿ ಮೋದಿ ಆದಿಯಾಗಿ ಕೇಂದ್ರದ ರೈಲ್ವೆ, ನೀರಾವರಿ, ಹೆದ್ದಾರಿ, ಅರಣ್ಯ ಸೇರಿ ಎಲ್ಲ ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ರಾಜ್ಯದ ಬಾಕಿ ಇರುವ ಯೋಜನೆಗಳಿಗೆ ಸೂಕ್ತ ಅನುದಾನ ನೀಡಲು ಕೋರಿದ್ದಾರೆ. ಬೆಂಗಳೂರಿನ ಟನಲ್‌ ರಸ್ತೆ, ಮೆಟ್ರೋ ಹಂತ 3 ಮತ್ತು 3ಎ, ಉಪನಗರ ರೈಲು ವಿಸ್ತರಣೆ ಯೋಜನೆಗಳಿಗೆ ನೆರವು ಕೋರಿದ್ದಾರೆ. ಒಟ್ಟಾರೆ ಕೇಂದ್ರದಿಂದ 30,000 ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ತರುವ ಪ್ರಯತ್ನ ನಡೆಸಿದ್ದಾರೆ.

ನೆರೆ ರಾಜ್ಯಗಳ ಜತೆ ಸ್ನೇಹದಿಂದ ಸಮಸ್ಯೆ ಪರಿಹಾರ:

ಸಿಎಂ ಡಿ.ಕೆ.ಶಿವಕುಮಾರ್ ಅವರು ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ರಾಜ್ಯಗಳೊಂದಿಗೆ ಜಲ ವಿವಾದ ಸೇರಿ ವಿವಿಧ ವಿಷಯಗಳಲ್ಲಿ ಸಂಘರ್ಷದ ಹಾದಿ ಬಿಟ್ಟು ಮಾತುಕತೆ ಮತ್ತು ಸಹಕಾರದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವ ನಿಲುವಿಗೆ ಆದ್ಯತೆ ನೀಡುತ್ತಿದ್ದಾರೆ ಎಂಬುದು ಗಮನಾರ್ಹ. ರಾಜ್ಯಗಳ ನಡುವಿನ ಸಂಬಂಧಗಳು ಕೇವಲ ರಾಜಕೀಯ ಅಥವಾ ಆಡಳಿತಾತ್ಮಕ ವಿಚಾರಗಳಿಗೆ ಸೀಮಿತವಾಗಿರದೆ, ಜನರ ಬದುಕು, ಕೃಷಿ ಮತ್ತು ಆರ್ಥಿಕ ಅಭಿವೃದ್ಧಿ ಮೇಲೂ ನೇರ ಪರಿಣಾಮ ಬೀರುತ್ತವೆ. ಹೀಗಾಗಿ ಯಾವುದೇ ವಿವಾದ ಉಲ್ಬಣಗೊಳಿಸುವ ಬದಲು ಸಂವಾದ, ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಅವರು ಕಂಡುಕೊಂಡಿದ್ದಾರೆ.

ಕಾವೇರಿ ನದಿ ನೀರಿನಂತಹ ಸೂಕ್ಷ್ಮ ವಿಚಾರದಲ್ಲೂ ಎಚ್ಚರದ ಹೆಜ್ಜೆ ಇಟ್ಟ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಅವರನ್ನು ಚರ್ಚೆಗೆ ಆಹ್ವಾನಿಸಿದ್ದರು. ನದಿ ಹೇಗೆ ಬೇರೆ ಬೇರೆ ರಾಜ್ಯಗಳಲ್ಲಿ ಹರಿದು ಎಲ್ಲವನ್ನೂ ಒಗ್ಗೂಡಿಸುತ್ತದೋ ಹಾಗೆ ನಾವೂ ಒಗ್ಗೂಡಬೇಕೇ ಹೊರತು ನೀರಿನ ವಿಚಾರಕ್ಕೆ ಒಡಕು ಮೂಡಬಾರದು ಎಂಬ ಸಂದೇಶ ನೀಡಿದ್ದರು. ಅದೇ ರೀತಿ ಗೋದಾವರಿ ಮತ್ತು ಕಾವೇರಿ ನದಿ ಜೋಡಣೆ ವಿಚಾರದ ಪ್ರಸ್ತಾವನೆಗೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಪ್ರಾಥಮಿಕ ಅಂಗೀಕಾರ ಪಡೆದರು. ಇನ್ನು, ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ ಗೇಟ್‌ಗಳ ಅಳವಡಿಕೆ ಮತ್ತು ಲೋಕಾರ್ಪಣೆ ಕಾರ್ಯಕಕ್ಕೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಿ ಒಗ್ಗಟ್ಟು ಪ್ರದರ್ಶಿಸಿದರು. ಮತ್ತೊಂದೆಡೆ ಈ ಬಾರಿಯ ನಾಡಹಬ್ಬ ದಸರಾಗೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಒಂದೆಡೆ ಸೇರಿಸಿ ಒಗ್ಗಟ್ಟು ಪ್ರದರ್ಶಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಅವರ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದು, ಪರಿಷ್ಕೃತ ಡಿಪಿಆರ್‌ ಸಿದ್ಧಪಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳು, ರೈಲ್ವೆ, ಮೆಟ್ರೋ, ನೀರಾವರಿ, ಮೂಲಸೌಕರ್ಯ, ಕೈಗಾರಿಕೆ, ನಗರಾಭಿವೃದ್ಧಿ, ವಿದ್ಯುತ್‌ ಉತ್ಪಾದನೆ ಹಾಗೂ ವಿವಿಧ ಕೇಂದ್ರ ಯೋಜನೆಗಳಿಗೆ ಕೇಂದ್ರದ ಅನುಮತಿ ಮತ್ತು ಆರ್ಥಿಕ ನೆರವು ಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಪ್ರತಿಯೊಂದು ವಿಚಾರವನ್ನೂ ರಾಜಕೀಯ ಸಂಘರ್ಷದ ರೂಪದಲ್ಲಿ ನೋಡುವ ಬದಲು, ಮಾತುಕತೆ ಮತ್ತು ಸಮನ್ವಯದ ಮೂಲಕ ಪರಿಹಾರ ಕಂಡುಕೊಳ್ಳುವುದು ರಾಜ್ಯದ ಹಿತಕ್ಕೆ ಅನುಕೂಲಕರವಾಗಿದೆ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರು ಅನುಸರಿಸುತ್ತಿರುವ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜಾಗತಿಕ ಮಟ್ಟದಲ್ಲಿ ‘ಹುಲಕೋಟಿ ಹೆಲ್ತ್ ಮಾಡೆಲ್’ ಸದ್ದು!
‘ಪ್ರಜಾಸೇವಾ’ಗೆ ಒಂದೇ ದಿನ 26,387 ಅರ್ಜಿ!