;Resize=(412,232))
ಮಲ್ಲಿಕಾರ್ಜುನ ಸಿದ್ದಣ್ಣವರ
ಹಬ್ಬಳ್ಳಿ : ಕಾರ್ಪೋರೇಟ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿಂದ ಮಾತ್ರ ಸಾಧ್ಯ ಮತ್ತು ದುಬಾರಿ ಚಿಕಿತ್ಸೆ ಎನಿಸಿರುವ ಕಿಡ್ನಿ ಕಸಿ, ಕೀಲು ಬದಲಾವಣೆ, ಹೃದಯ ಶಸ್ತ್ರಚಿಕಿತ್ಸೆ, ನೇತ್ರ ಚಿಕಿತ್ಸೆಯಂತ ಪ್ರಮುಖ ಆರೋಗ್ಯ ಸೇವೆಗಳನ್ನು ಗದಗ ಜಿಲ್ಲೆ ಹುಲಕೋಟಿ ಗ್ರಾಮದಲ್ಲಿನ ‘ರೂರಲ್ ಮೆಡಿಕಲ್ ಸರ್ವೀಸಸ್’ನ ‘ಕೆ.ಎಚ್.ಪಾಟೀಲ್ ಆಸ್ಪತ್ರೆ ಹಾಗೂ ಸಂಸೋಧನಾ ಸಂಸ್ಥೆ’ ಅತ್ಯಂತ ಕಡಿಮೆ ಕರ್ಚಿನಲ್ಲಿ ಬಡವರಿಗೆ ನೀಡುತ್ತಿದ್ದು, ಇದು ಗ್ರಾಮೀಣ ಆರೋಗ್ಯ ಸೇವೆಯಲ್ಲಿ ‘ಹುಲಕೋಟಿ ಹೆಲ್ತ್ ಮಾಡೆಲ್’ ಎಂದೇ ಹೆಸರಾಗಿದೆ.
ಮಾನವೀಯ ನೆಲೆಯಲ್ಲಿ ಗ್ರಾಮೀಣ ಜನತೆಗೆ ಕಡಿಮೆ ಕರ್ಚಿನಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಕಲ್ಪಿಸುತ್ತಿರುವ ಈ ‘ಹುಲಕೋಟಿ ಹೆಲ್ತ್ ಮಾಡೆಲ್’ ಇದೀಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದೇಶ-ವಿದೇಶಗಳ ಗ್ರಾಮೀಣ ಭಾಗಗಳಲ್ಲೂ ಆಸ್ಪತ್ರೆಗಳು ಆರೋಗ್ಯ ಸೇವೆಯಲ್ಲಿ ತೊಡಗಿದ್ದರೂ ಗಂಭೀರ ಮತ್ತು ದುಬಾರಿ ಚಿಕಿತ್ಸೆಗಳನ್ನು ಗ್ರಾಮೀಣ ಬಡವರಿಗೆ ಕಡಿಮೆ ಕರ್ಚಿನಲ್ಲಿ ಮತ್ತು ಉಚಿತವಾಗಿ ನೀಡುತ್ತಿರುವುದು ಈ ಹುಲಕೋಟಿ ಆಸ್ಪತ್ರೆ ಮಾತ್ರ ಎನ್ನುವುದು ಜಾಗತಿಕ ತಜ್ಞರ ಅಭಿಪ್ರಾಯ.
ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಹೆಸರಾಂತ ವೈದ್ಯ ಶಾಂತನು ಭಟ್ಟಾಚಾರ್ಯ, ಈ ಗ್ರಾಮೀಣ ಆರೋಗ್ಯ ಸೇವೆಯನ್ನು ಮನಗಂಡು ಆಗಾಗ ಹುಲಕೋಟಿಗೆ ಬರುತ್ತಾರೆ. ಯಾವುದೇ ಸಂಭಾವನೆ, ವಿಮಾನ ವೆಚ್ಚ ಪಡೆಯದೇ ಸ್ವಂತ ವೆಚ್ಚದಲ್ಲಿ ಇಲ್ಲಿಗೆ ಬಂದು ವಾರಗಟ್ಟಲೆ ಇದ್ದು, ಬಡ ರೋಗಿಗಳಿಗೆ ಆಪರೇಷನ್ ಮಾಡುತ್ತಾರೆ. ಈಗಾಗಲೇ ಹತ್ತಾರು ರೋಗಿಗಳನ್ನು ಗುಣಮುಖ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಹಳ್ಳಿ ಸುತ್ತಿ, ಗ್ರಾಮೀಣರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಿ ಸೂಕ್ತ ಸಲಹೆ-ಸೂಚನೆ ನೀಡುತ್ತಾರೆ.
ಇಟಲಿಯಲ್ಲಿ ವಾಸವಾಗಿರುವ ಡಾ। ಅಜಯ ಶರ್ಮಾ, ಈ ಹುಲಕೋಟಿ ಹೆಲ್ತ್ ಮಾಡೆಲ್ ನೋಡಿ ಮೂಕವಿಸ್ಮಿತರಾಗಿದ್ದಾರೆ. ಬಡವರ ಸೇವೆಯಲ್ಲಿ ತಮ್ಮದೂ ಪಾಲಿರಲಿ ಎಂದು ಹುಲಕೋಟಿ ಆಸ್ಪತ್ರೆಯ ವೈದ್ಯ ಅವಿನಾಶ ಓದುಗೌಡರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸೂಕ್ತ ಸಲಹೆ, ಸಹಾಯವನ್ನೂ ನೀಡುತ್ತಿದ್ದಾರೆ.
ಇವರಂತೆ ಹಲವು ವಿದೇಶಿ ಮತ್ತು ಸ್ವದೇಶಿ ತಜ್ಞ ವೈದ್ಯರು ಈ ಹುಲಕೊಟಿ ಆಸ್ಪತ್ರೆಗೆ ದಾವಿಸಿ ಗ್ರಾಮೀಣರಿಗೆ ಉಚಿತ ಸೇವೆ ಮಾಡಿ ಹೋಗುವ ಜೊತೆಗೆ ಜಾಗತಿಕ ಮಟ್ಟದ ವಿವಿಧ ಆರೋಗ್ಯ ವೇದಿಕೆ, ನಿಯತಕಾಲಿಕೆಗಳಲ್ಲಿ ಈ ‘ಹುಲಕೋಟಿ ಹೆಲ್ತ್ ಮಾಡೆಲ್’ ಬಗ್ಗೆ ಚರ್ಚಿಸುತ್ತಿದ್ದಾರೆ. ಹಾಗಾಗಿ ಹುಲಕೋಟಿಗೆ ಸೇವೆಗಾಗಿ ಬರುತ್ತಿರುವ ವಿದೇಶಿ ವೈದ್ಯರ ಸಂಖ್ಯೆ ದಿನೆ ದಿನೇ ಹೆಚ್ಚುತ್ತಿದೆ.
ಗ್ರಾಮೀಣ ಬಡವರು, ರೈತರು, ಕೃಷಿ ಕೂಲಿಕಾರರಿಗೆ ಗಂಭೀರ ಕಾಯಿಲೆಗಳಿಗೆ ದುಬಾರಿ ಚಿಕಿತ್ಸೆ ಕಷ್ಟಸಾಧ್ಯವಾಗಿ ಆಯಾ ರೋಗಗಳಿಗೆ ಅವರು ಬಲಿ ಆಗುತ್ತಿರುವುದನ್ನು ಮನಗಂಡ ಮಾಜಿ ಸಚಿವ, ಹಾಲಿ ಶಾಸಕ ಎಚ್.ಕೆ.ಪಾಟೀಲ್ ಅವರು ಈ ದುಬಾರಿ ಚಿಕಿತ್ಸೆಗಳು ಬಡವರಿಗೆ ಅತ್ಯಂತ ಕಡಿಮೆ ಕರ್ಚಿನಲ್ಲಿ ಅಥವಾ ಉಚಿತವಾಗಿ ತಮ್ಮ ಈ ಗ್ರಾಮೀಣ ಆಸ್ಪತ್ರೆಯಲ್ಲಿಯೇ ಲಭಿಸಬೇಕು ಎನ್ನುವ ಸಂಕಲ್ಪ ಮಾಡಿದರು.
ಅದರನ್ವಯ ಈವರೆಗೆ ಇಲ್ಲಿ 3 ಕಿಡ್ನಿ ಕಸಿ, 30 ಕೀಲು ಬದಲಾವಣೆ, ಹೃದಯ ಚಿಕಿತ್ಸೆ, 3500 ಕಣ್ಣಿನ ಆಪರೇಷನ್, ಅಪಾರ ಸಂಖ್ಯೆಯ ಡಯಾಲಿಸಿಸ್, ಪುಟ್ಟ ರಾಜಕುಮಾರಿ ಯೋಜನೆ ಅಡಿಯಲ್ಲಿ 15 ಉಚಿತ ಹೆರಿಗೆ, ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಜತೆ ಬರುವ ನಿತ್ಯ 500 ಜನರಿಗೆ ಊಟ ನೀಡುವ ಬುತ್ತಿ ಯೋಜನೆ ಜಾರಿಯಲ್ಲಿದ್ದು, ಪ್ರಾಜ್ಞರ ಗಮನ ಸೆಳೆದಿವೆ.
ಡಾ। ಅವಿನಾಶ ಓದುಗೌಡರ್ ನೇತೃತ್ವದ ನುರಿತ ಮತ್ತು ಸೇವಾ ಮನೋಭಾವನೆ ಹೊಂದಿದ ವೈದ್ಯರ ತಂಡ ಇಲ್ಲಿದೆ. ದೆಹಲಿ ವಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ। ವೇಮನ ಸಾವಕಾರ್ ಈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆರ್.ಎಂ.ಎಸ್ ಚೇರಮನ್ ಡಾ। ಎಸ್.ಆರ್.ನಾಗನೂರ ನೇತೃತ್ವದಲ್ಲಿ ಈ ಗ್ರಾಮೀಣ ಆಸ್ಪತ್ರೆ ಬಡವರಿಗೆ, ರೈತರಿಗೆ, ಕೂಲಿಕಾರರಿಗೆ ಆಶಾದಾಯಕ ಎನಿಸುವ ಹೊಸ ಹೊಸ ಹೆಜ್ಜೆಗಳನ್ನು ಇಡುತ್ತಿದೆ.
ಸೌಲಭ್ಯವಿಲ್ಲ, ಹಣವಿಲ್ಲ ಎನ್ನುವ ಕಾರಣಕ್ಕೆ ಗ್ರಾಮೀಣ ಬಡವರು ಆರೋಗ್ಯ ಸೇವೆಯಿಂದ ವಂಚಿತವಾಗಬಾರದು. ಈ ವರೆಗೆ ಸಣ್ಣ-ಪುಟ್ಟ ಕಾಯಿಲೆಗಳಿಗೆ ಗ್ರಾಮೀಣ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತ ಬಂದಿರುವುದನ್ನು ಗಮನಿಸಿರುವೆ. ಆದರೆ ಭಾರತದ ಈ ಹುಲಕೋಟಿ ಎಂಬ ಹಳ್ಳಿಯಲ್ಲಿ ಗಂಭೀರ ಕಾಯಿಲೆಗಳಿಗೂ ಉತ್ತಮ ಚಿಕಿತ್ಸೆ, ಅದೂ ಕಡಿಮೆ ಕರ್ಚಿನಲ್ಲಿ ಸಿಗುತ್ತಿರುವುದನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ನಾನೂ ಇಲ್ಲಿನ ಬಡವರ ಸೇವೆ ಮಾಡಲೆಂದು ಆಗಾಗ ಈ ಆಸ್ಪತ್ರೆಗೆ ಬರುತ್ತಿದ್ದೇನೆ.
-ಡಾ। ಶಾಂತನು ಭಟ್ಟಾಚಾರ್ಯ, ಆಸ್ಟ್ರೇಲಿಯಾ.