ಪಂಜಾಬ್ ಜಡ್ಜ್‌ಗೆ ₹ 12 ಸಾವಿರ ವಂಚಿಸಿದ ಸೈಬರ್‌ ಖದೀಮರು

Published : Sep 10, 2025, 11:07 AM IST
digital arrest

ಸಾರಾಂಶ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆ ನಡೆಸುವುದಾಗಿ ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ಅಧಿಕಾರಿಗಳ ಹೆಸರಿನಲ್ಲಿ ಮಾಜಿ ಶಾಸಕರೊಬ್ಬರನ್ನು ದುಷ್ಕರ್ಮಿಗಳು ಡಿಜಿಟಲ್ ಬಂಧನಕ್ಕೆ ಒಳಪಡಿಸಿ ₹30.99 ಲಕ್ಷ ದೋಚಿದ್ದಾರೆ.

 ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆ ನಡೆಸುವುದಾಗಿ ಕೇಂದ್ರ ತನಿಖಾ ಸಂಸ್ಥೆಯ (ಸಿಬಿಐ) ಅಧಿಕಾರಿಗಳ ಹೆಸರಿನಲ್ಲಿ ಮಾಜಿ ಶಾಸಕರೊಬ್ಬರನ್ನು ದುಷ್ಕರ್ಮಿಗಳು ಡಿಜಿಟಲ್ ಬಂಧನಕ್ಕೆ ಒಳಪಡಿಸಿ ₹30.99 ಲಕ್ಷ ದೋಚಿದ್ದಾರೆ.

ಔರಾದ್‌ನ ಮಾಜಿ ಶಾಸಕ ಗುಂಡಪ್ಪ ವಕೀಲ್ ಹಣ ಕಳೆದುಕೊಂಡಿದ್ದು, ಇವರ ದೂರು ಆಧರಿಸಿ ನಕಲಿ ಸಿಬಿಐ ಅಧಿಕಾರಿಗಳಾದ ನರೇಶ್ ಗೋಯೆಲ್ ಹಾಗೂ ನೀರಜ್ ಕುಮಾರ್ ಪತ್ತೆಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಬಲೆ ಬೀಸಿದ್ದಾರೆ.

ಏನಿದು ದೂರು?:

ಆ.12ರಂದು ಮಾಜಿ ಶಾಸಕರಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ತಾನು ಸಿಬಿಐ ಅಧಿಕಾರಿ ನರೇಶ್ ಗೋಯಲ್‌ ಎಂದು ಪರಿಚಯಿಸಿಕೊಂಡಿದ್ದಾನೆ. ತಾವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ. ನಾವು ಜಪ್ತಿ ಮಾಡಿದ ದಾಖಲೆಗಳಲ್ಲಿ ತಮ್ಮ (ಮಾಜಿ ಶಾಸಕರು) ಬ್ಯಾಂಕ್ ಖಾತೆ ವಿವರ ಹಾಗೂ ಗುರುತಿನ ಚೀಟಿ ಪತ್ತೆಯಾಗಿದೆ ಎಂದು ಬೆದರಿಸಿ ಸ್ವವಿವರ ಪಡೆದಿದ್ದ. ನಂತರ ಮತ್ತೊಬ್ಬ ಆರೋಪಿ ತಾನು ಡಿಸಿಪಿ ನೀರಜ್ ಕುಮಾರ್, ಈ ಪ್ರಕರಣದ ತನಿಖಾಧಿಕಾರಿ ಎಂದು ಹೇಳಿದ್ದಾನೆ. ತಮ್ಮನ್ನು ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಮಾಡಲಾಗಿದ್ದು, ಯಾವುದೇ ಕಾರಣಕ್ಕೂ ಕರೆ ಸ್ಥಗಿತಗೊಳಿಸಬಾರದು. ತಮ್ಮನ್ನು ಆ.13ರಂದು ಮಧ್ಯಾಹ್ನ 1ಕ್ಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ ಎಂದಿದ್ದಾನೆ.

ಬಳಿಕ ಆರೋಪಿಗಳ ಸೂಚನೆಯಂತೆ ತಾವು ತಪ್ಪು ಮಾಡಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಅಪರಿಚಿತರ ಬ್ಯಾಂಕ್ ಖಾತೆಗೆ ₹10.99 ಲಕ್ಷ ಆರ್‌ಟಿಜಿಎಸ್ ಮೂಲಕ ಮಾಜಿ ಶಾಸಕರು ಹಣ ವರ್ಗಾಯಿಸಿದ್ದಾರೆ. ತರುವಾಯ ನೀರಜ್ ಕುಮಾರ್ ಹಾಗೂ ಸಂದೀಪ್ ಕುಮಾರ್ ಅವರು ಪ್ರಕರಣದ ಮಾಹಿತಿ ಪಡೆಯುವ ನೆಪದಲ್ಲಿ ಮಾಜಿ ಶಾಸಕರಿಗೆ ಮತ್ತೆ ಕರೆ ಮಾಡಿ ಅವರ ಕುಟುಂಬದವರ ಮಾಹಿತಿ ಸಂಗ್ರಹಿಸಿದ್ದರು.

ನಂತರ ಎರಡನೇ ಬಾರಿಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಇ.ಡಿ, ಸಿಬಿಐಗಳಿಂದ ಆಸ್ತಿ ತನಿಖೆ ನಡೆಸಲು ₹20 ಲಕ್ಷ ಠೇವಣಿ ಮಾಡುವಂತೆ ತಿಳಿಸಿದರು. ಅಂತೆಯೇ ತಮ್ಮ ಬ್ಯಾಂಕ್ ಖಾತೆಯಿಂದ ಆರೋಪಿಗಳ ಖಾತೆಗೆ ₹20 ಲಕ್ಷ ವರ್ಗಾಯಿಸಿದ್ದಾರೆ. ತನಿಖೆ ಮುಗಿದ ನಂತರ ಈ ಎಲ್ಲ ಹಣ ಮರಳಿಸುವುದಾಗಿ ಹೇಳಿ ದುಷ್ಕರ್ಮಿಗಳು ಕರೆ ಸ್ಥಗಿತಗೊಳಿಸಿದ್ದಾರೆ.

ಇದಾದ ನಂತರ ತಮ್ಮ ಕುಟುಂಬ ಸದಸ್ಯರು ಹಾಗೂ ಪರಿಚಿತರ ಮುಂದೆ ಮಾಜಿ ಶಾಸಕರು ಹೇಳಿಕೊಂಡಿದ್ದಾರೆ. ಬಳಿಕ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಮಾಜಿ ಶಾಸಕ ಗುಂಡಪ್ಪ ವಕೀಲ್ ದೂರು ನೀಡಿದರು. ಬಳಿಕ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

ಪಂಜಾಬ್ ಜಡ್ಜ್‌ಗೆ ₹12 ಸಾವಿರ ವಂಚಿಸಿದ ಸೈಬರ್‌ ಖದೀಮರು

ಬೆಂಗಳೂರು : ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಮುಂಗಡವಾಗಿ ಕೊಠಡಿ ಕಾಯ್ದಿರಿಸುವ ನೆಪದಲ್ಲಿ ಪಂಜಾಬ್ ರಾಜ್ಯದ ನ್ಯಾಯಾಧೀಶರೊಬ್ಬರಿಗೆ ಸೈಬರ್ ದುರುಳರು ₹12 ಸಾವಿರ ವಂಚಿಸಿರುವ ಘಟನೆ ನಡೆದಿದೆ.

ಕೆಲಸದ ನಿಮಿತ್ತ ಬೆಂಗಳೂರಿಗೆ ಪಂಜಾಬ್ ನ್ಯಾಯಾಧೀಶರ ಭೇಟಿ ನೀಡಬೇಕಿತ್ತು. ಆಗ ತಾವು ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಆನ್‌ಲೈನ್‌ ಮೂಲಕ ಸರ್ಕಾರಿ ಅತಿಥಿ ಗೃಹವನ್ನು ₹12 ಸಾವಿರ ಪಾವತಿಸಿ ಮುಂಗಡವಾಗಿ ವಸತಿಗೃಹ ಬುಕ್ ಮಾಡಿದ್ದರು. ಆದರೆ ಅತಿಥಿಗೃಹಕ್ಕೆ ತೆರಳಿದ್ದಾಗಲೇ ನ್ಯಾಯಾಧೀಶರಿಗೆ ತಾವು ವಂಚನೆಗೊಳಗಾಗಿರುವ ಸಂಗತಿ ಗೊತ್ತಾಗಿದೆ. ತಕ್ಷಣವೇ ಪರಿಚಿತರ ಮೂಲಕ ಸಿಐಡಿ ಡಿಐಜಿ ಅವರನ್ನು ಸಂಪರ್ಕಿಸಿ ಅವರು ಮಾಹಿತಿ ನೀಡಿದ್ದಾರೆ. ಬಳಿಕ ಕುಮಾರ ಕೃಪಾ ಅತಿಥಿ ಗೃಹದಲ್ಲಿ ನ್ಯಾಯಾಧೀಶರಿಗೆ ಸಿಐಡಿ ಅಧಿಕಾರಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ತಿಂಗಳ 2ರಂದು ಬೆಂಗಳೂರಿಗೆ ಕೆಲಸದ ನಿಮಿತ್ತ ಪಂಜಾಬ್ ನ್ಯಾಯಾಧೀಶರ ಭೇಟಿ ನಿಗದಿಯಾಗಿತ್ತು. ಆಗ ತಮ್ಮ ಪರಿಚಿತ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯನ್ನು ಸಂಪರ್ಕಿಸಿದ ಅವರು, ಸರ್ಕಾರಿ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸುವಂತೆ ಕೋರಿದ್ದಾರೆ. ಆ ಅಧಿಕಾರಿ ಕೇಂದ್ರ ಸೇವೆಯಲ್ಲಿದ್ದ ಕಾರಣ ಸಿಐಡಿಯಲ್ಲಿರುವ ತಮ್ಮ ಬ್ಯಾಚ್‌ ಐಪಿಎಸ್ ಅಧಿಕಾರಿಯನ್ನು ಸಂಪರ್ಕಿಸಿ ನ್ಯಾಯಾಧೀಶರಿಗೆ ಕೊಠಡಿ ಕಾಯ್ದಿರಿಸಲು ಸಹಾಯ ಮಾಡುವಂತೆ ಹೇಳಿದ್ದರು. ಅಂತೆಯೇ ಸಿಐಡಿ ಡಿಐಜಿ ಕಚೇರಿಯ ಆಪ್ತ ಸಹಾಯಕಿ, ಆನ್‌ಲೈನ್‌ ಮೂಲಕ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಲು ಮುಂದಾಗಿದ್ದಾರೆ. ಆಗ ಆನ್‌ಲೈನ್‌ನಲ್ಲಿ ಮೊಬೈಲ್ ಸಂಖ್ಯೆ ಪಡೆದು ಅವರಿಗೆ ನ್ಯಾಯಾಧೀಶರ ವಿವರ ಕಳುಹಿಸಿ ಕೊಠಡಿ ಬುಕ್ ಮಾಡಿದ್ದಾರೆ.

ಈತನ ಜತೆ ನ್ಯಾಯಾಧೀಶರು ಸಹ ಮಾತನಾಡಿ ಮುಂಗಡವಾಗಿ ಎರಡು ಹಂತದಲ್ಲಿ ₹12 ಸಾವಿರ ಕಳುಹಿಸಿದ್ದರು. ಆದರೆ ಕುಮಾರ ಕೃಪಾ ಅತಿಥಿ ಗೃಹಕ್ಕೆ ಸೆ.6ರಂದು ಬುಧವಾರ ನ್ಯಾಯಾಧೀಶರು ತೆರಳಿದಾಗ ಈ ವಂಚನೆ ಕೃತ್ಯ ಬೆಳಕಿಗೆ ಬಂದಿದೆ. ಈ ಬಗ್ಗೆ ಕೇಂದ್ರ ವಿಭಾಗದ ಸಿಇಎನ್‌ ಪೊಲೀಸ್ ಠಾಣೆಯಲ್ಲಿ ಡಿಐಜಿ ಕಚೇರಿಯ ಆಪ್ತ ಸಹಾಯಕಿ ದೂರು ಆಧರಿಸಿ ಪ್ರಕರಣ ದಾಖಲಾಗಿದೆ.

PREV
Read more Articles on

Recommended Stories

ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ