ದರ್ಶನ್‌ ಕೇಸ್‌: ರೇಣುಕಾ ಪೋಷಕರಿಗೆ ಸಮನ್ಸ್‌ ಜಾರಿ

Published : Dec 05, 2025, 06:42 AM IST
Renukaswamy

ಸಾರಾಂಶ

ನಟ ದರ್ಶನ್‌ ವಿರುದ್ಧದ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಮೃತ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮಗೆ ಸಮನ್ಸ್‌ ಜಾರಿಗೊಳಿಸಿರುವ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಡಿ.17ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.

 ಬೆಂಗಳೂರು :  ನಟ ದರ್ಶನ್‌ ವಿರುದ್ಧದ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನುಡಿಯಲು ಮೃತ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಮತ್ತು ತಾಯಿ ರತ್ನಮ್ಮಗೆ ಸಮನ್ಸ್‌ ಜಾರಿಗೊಳಿಸಿರುವ ಬೆಂಗಳೂರಿನ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಡಿ.17ರಂದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ. 

ಪ್ರಕರಣ ಸಂಬಂಧ ಸಾಕ್ಷ್ಯ ನುಡಿಯಲು ರೇಣುಕಾಸ್ವಾಮಿ ತಂದೆ ಮತ್ತು ತಾಯಿಗೆ (ಸಾಕ್ಷಿ ಸಂಖ್ಯೆ 7 ಹಾಗೂ 8) ಸಮನ್ಸ್‌ ಜಾರಿಗೊಳಿಸಬೇಕು ಎಂದು ಕೋರಿ ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್‌) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ ನ್ಯಾಯಾಧೀಶ ಐ.ಪಿ.ನಾಯಕ್ ಅವರು ಗುರುವಾರ ಈ ಆದೇಶ ಮಾಡಿದ್ದಾರೆ. ಇದರೊಂದಿಗೆ ದೋಷಾರೋಪ ಪಟ್ಟಿ ಸಲ್ಲಿಕೆ, ದೋಷಾರೋಪ ನಿಗದಿ ನಂತರ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮತ್ತೊಂದು ಪ್ರಮುಖ ಘಟ್ಟ ತಲುಪಿದೆ.

ದರ್ಶನ್‌ ಸೇರಿ ಪ್ರಕರಣದ 17 ಆರೋಪಿಗಳ ವಿರುದ್ಧ ಕೊಲೆ, ಅಪಹರಣ, ಹಲ್ಲೆ ಅಪರಾಧಿಕ ಒಳಸಂಚು, ಅಕ್ರಮ ಕೂಟ ರಚನೆ, ಹಣ ವಸೂಲಿ, ಅಕ್ರಮ ಬಂಧನ ಸೇರಿ ಇನ್ನಿತರ ಆರೋಪಗಳನ್ನು ನಿಗದಿಪಡಿಸಿ ನ.3ರಂದು ನ್ಯಾಯಾಲಯ ಆದೇಶಿಸಿತ್ತು. ಜೊತೆಗೆ ನ.10ರಿಂದ ಪ್ರಕರಣದ ಮುಖ್ಯ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು. ಅದಾದ ಬಳಿಕ ಪ್ರಕರಣ ಕುರಿತು ನ್ಯಾಯಾಲಯ ನಡೆಸುತ್ತಿರುವ ಮೊದಲ ಸಾಕ್ಷ್ಯ ವಿಚಾರಣೆ ಇದೇ ಆಗಿದೆ. ಕೋರ್ಟ್‌ ಸೂಚನೆಯಂತೆ ಡಿ.17ರಂದು ಮೃತನ ರೇಣುಕಾಸ್ವಾಮಿ ತಂದೆ-ತಾಯಿ ವಿಚಾರಣೆಗೆ ಖುದ್ದು ಹಾಜರಾಗಿ, ತಮ್ಮ ಸಾಕ್ಷ್ಯ ದಾಖಲಿಸಬೇಕಿದೆ.

ಆರೋಪಿಗಳ ವಾದಕ್ಕೆ ಮಾನ್ಯತೆಯಿಲ್ಲ:

ರೇಣುಕಾಸ್ವಾಮಿ ಪೋಷಕರ ಸಾಕ್ಷ್ಯ ದಾಖಲಿಸಬೇಕೆಂಬ ಪ್ರಾಸಿಕ್ಯೂಷನ್‌ ಮನವಿಗೆ ಆಕ್ಷೇಪಿಸಿದ್ದ ದರ್ಶನ್‌, ಜಗದೀಶ್ ಸೇರಿ ಇತರೆ ಆರೋಪಿಗಳ ಪರ ವಕೀಲರು, ಮೊದಲಿಗೆ ದೂರುದಾರರು, ಪ್ರತ್ಯಕ್ಷದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷಿ ವಿಚಾರಣೆ ನಡೆಸುವುದು ಕಡ್ಡಾಯ. ನಂತರವಷ್ಟೇ ಪ್ರಕರಣದ ಸಾಕ್ಷಿಗಳು ಅಂದರೆ ಮೃತನ ತಂದೆ, ತಾಯಿ ಅವರ ಸಾಕ್ಷ್ಯಗಳ ವಿಚಾರಣೆ ನಡೆಸಬೇಕು. ಆದ್ದರಿಂದ ತನಿಖಾಧಿಕಾರಿಗಳ ಮನವಿ ತಿರಸ್ಕರಿಸಬೇಕು. ಮೊದಲಿಗೆ ದೂರುದಾರರು, ಪ್ರತ್ಯಕ್ಷದರ್ಶಿಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳ ವಿಚಾರಣೆಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಪ್ರಾಸಿಕ್ಯೂಷನ್‌ ಮನವಿಯಂತೆ ವಿಚಾರಣೆ:

ಈ ಮನವಿ ಒಪ್ಪದ ನ್ಯಾಯಾಲಯ, ಪ್ರಾಸಿಕ್ಯೂಷನ್‌ ಮನವಿಯಂತೆ ಸಾಕ್ಷಿಗಳ ವಿರುದ್ಧ ಸಮನ್ಸ್‌ ಹೊರಡಿಸಿ, ನಂತರ ಅವರ ಸಾಕ್ಷ್ಯ ದಾಖಲಿಸಿಕೊಳ್ಳುವುದು ಕೋರ್ಟ್‌ನ ಕರ್ತವ್ಯ. ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 131(1) ಪ್ರಕಾರ ಪ್ರಾಸಿಕ್ಯೂಷನ್ ಪರವಾಗಿ ಹಾಜರುಪಡಿಸಬಹುದಾದಂಥ ಸಾಕ್ಷ್ಯ ತೆಗೆದುಕೊಳ್ಳಬಹುದಾಗಿದೆ. ಅದರರ್ಥ ಆ ಸಾಕ್ಷ್ಯ ಅಥವಾ ಈ ಸಾಕ್ಷ್ಯವನ್ನು ಮೊದಲಿಗೆ ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್‌ಗೆ ನ್ಯಾಯಾಲಯ ನಿರ್ದೇಶನ ನೀಡುವಂತಿಲ್ಲ. ಹಾಗಾಗಿ, ಆರೋಪಿಗಳ ವಾದಕ್ಕೆ ಮಾನ್ಯತೆ ಇಲ್ಲವಾಗಿದೆ. ಆದರೆ, ತಮ್ಮ ಪ್ರತಿವಾದದ (ಡಿಫೆನ್ಸ್‌) ರಕ್ಷಣೆಗಾಗಿ ಸಾಕ್ಷ್ಯಗಳ ಪಾಟಿ ಸವಾಲು ಪ್ರಕ್ರಿಯೆ ಮುಂದೂಡಲು ಅರ್ಜಿ ಸಲ್ಲಿಸಲು ಆರೋಪಿಗಳು ಸ್ವತಂತ್ರರಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಪ್ರಾಸಿಕ್ಯೂಷನ್‌ ಸಾಕ್ಷ್ಯ ವಿಚಾರಣೆ ನಡೆಸಿದ ದಿನವೇ ಆರೋಪಿಗಳು ಪಾಟಿ ಸವಾಲು ಪ್ರಕ್ರಿಯೆ ನಡೆಸಬಹುದು. ಒಂದೊಮ್ಮೆ ಸಾಕ್ಷ್ಯಗಳನ್ನು ಪ್ರಾಸಿಕ್ಯೂಷನ್‌ ವಿಚಾರಣೆ ನಡೆಸಿದ ನಂತರ, ಅದು ಆರೋಪಿಗಳ ಪ್ರತಿವಾದದ (ಡಿಫೆನ್ಸ್‌) ಮೇಲೆ ಪರಿಣಾಮ ಉಂಟು ಮಾಡುವಂತಿದ್ದರೆ, ಆಗ ನ್ಯಾಯಾಲಯ ತನ್ನ ವಿವೇಚನಾಧಿಕಾರ ಬಳಸಿ ಪಾಟಿ ಸವಾಲು ಪ್ರಕ್ರಿಯೆ ಮುಂದೂಡುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ನುಡಿದಿದೆ.

ದರ್ಶನ್‌ಗೆ ಟಿವಿ ಸೌಲಭ್ಯ

ಖಿನ್ನತೆಯಿಂದ ಹೊರಬರಲು ತಮ್ಮ ಸೆಲ್‌ನಲ್ಲಿ ಟಿವಿ ಅಳವಡಿಸಬೇಕು ಎಂದು ಪ್ರಕರಣದ 12ನೇ ಆರೋಪಿ ಲಕ್ಷ್ಮಣ್‌ ಬುಧವಾರ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿರುವ ನ್ಯಾಯಾಲಯ, ಜೈಲು ಕೈಪಿಡಿ ಮತ್ತು ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರು ಕಾರ್ಯದರ್ಶಿ ಸಲ್ಲಿಸಿರುವ ಪ್ರಕಾರ, ಪ್ರಕರಣದ ಆರೋಪಿಗಳಾದ ದರ್ಶನ್‌, ಜಗದೀಶ್‌, ಅನುಕುಮಾರ್‌, ನಾಗರಾಜು, ಲಕ್ಷ್ಮಣ್‌ ಮತ್ತು ಪ್ರದೋಷ್‌ ರಾವ್‌ ಅವರಿರುವ ಜೈಲಿನ ಸೆಲ್‌ನಲ್ಲಿ ಟಿ.ವಿ ಅಳವಡಿಸಿ, ವೀಕ್ಷಣೆ ಮಾಡಲು ಆರೋಪಿಗಳಿಗೆ ಅನುಮತಿಸಬೇಕು ಎಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿದೆ.

ಪ್ರದೋಷ್‌ಗೆ ನಾಲ್ಕು ದಿನ ಬೇಲ್‌

ಇತ್ತೀಚೆಗೆ ತಮ್ಮ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ತಿಥಿ ಕಾರ್ಯ ನೆರವೇರಿಸಲು ಡಿ.4ರಿಂದ 23ರವರೆಗೆ ಜಾಮೀನು ನೀಡಬೇಕು ಎಂದು ಕೋರಿ 14ನೇ ಆರೋಪಿ ಪ್ರದೋಷ್‌ ರಾವ್‌ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ, ಡಿ.4ರಿಂದ 7ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಪ್ರದೋಷ್‌ ಮೃತರ ಏಕೈಕ ಪುತ್ರ. ತಂದೆ ಮರಣಾ ನಂತರ ತನ್ನ ಮೇಲಿನ ಹೊಣೆಗಾರಿಕೆಯನ್ನು ಪ್ರದೋಷ್‌ ನಿರ್ವಹಿಸಬೇಕಿದೆ. ಹಾಗಾಗಿ ಡಿ.4ರಿಂದ 7ರವರೆಗೆ ಮಧ್ಯಂತರ ಜಾಮೀನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜಿಬಿಎ ರಚನೆ ಬಳಿಕ ಆಸ್ತಿ ತೆರಿಗೆ ವಸೂಲಿ ಕುಸಿತ
ಸಾಮಾಜಿಕ ಬಹಿಷ್ಕಾರಕ್ಕೆ 3 ವರ್ಷ ಜೈಲು : ಮಸೂದೆ