;Resize=(412,232))
ಬೆಂಗಳೂರು : ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಡೆ ಹಾಕುವುದು, ಬಲವಂತವಾಗಿ ಟಾಯ್ಲೆಟ್ ಜೆಟ್ ಸ್ಪ್ರೇ ಪೈಪ್ ಮೂಲಕ ನೇರವಾಗಿ ಮಕ್ಕಳ ಬಾಯಿಗೆ ತುರುಕಿ ನೀರು ಬಿಡುವುದು ಸೇರಿ ಮಕ್ಕಳ ಮೇಲಿನ ದೌರ್ಜನ್ಯ ಕೃತ್ಯ ಬೆಳಕಿಗೆ ಬಂದ ನಂತರ ಎಚ್‌ಎಎಲ್ ಆವರಣದಲ್ಲಿರುವ ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್‌ಗೆ ಬೀಗ ಜಡಿಯಲಾಗಿದೆ.
ಅಮಾನವೀಯ ಕೃತ್ಯದ ಸಂಬಂಧ ಸೊಸೈಟಿ ಜನರಲ್ ಬೇಬಿ ಕೇರ್ ಎಂಬ ಸಂಸ್ಥೆಯ ಸಿಬ್ಬಂದಿಯಾದ ಮಂಜುಳ, ವಿಜಯಲಕ್ಷ್ಮಿ, ಭವಾನಿ, ಸಿಂಧು ಮತ್ತು ಬಿಂದು ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಎಚ್‌ಎಎಲ್ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್‌ಗೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಹಿನ್ನೆಲೆಯಲ್ಲಿ ಬೇಬಿ ಕೇರ್ ಸೆಂಟರ್‌ನ ಆಡಳಿತ ಮಂಡಳಿಯವರು ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ಮತ್ತೊಂದೆಡೆ ಎಚ್‌ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದಾರೆ. ಡೇ ಕೇರ್‌ನಲ್ಲಿರುವ ಕೆಲ ಸಿಬ್ಬಂದಿಯ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.
ಪ್ರಕರಣ ದಾಖಲಾಗುತ್ತಿದಂತೆ ಕೃತ್ಯ ಎಸಗಿದ್ದ ಮಹಿಳಾ ಸಿಬ್ಬಂದಿ ತಮ್ಮ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ವಿಡಿಯೋದಲ್ಲಿರುವ ಮಹಿಳಾ ಸಿಬ್ಬಂದಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಮಹಿಳಾ ಸಿಬ್ಬಂದಿ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಡೇ ಕೇರ್‌ನ ಆಡಳಿತ ಮಂಡಳಿಗೆ ನೋಟಿಸ್ ನೀಡಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಜೆ.ಜೆ.(ಜ್ಯುನೆಯಲ್ ಜಸ್ಟಿಸ್ ) ಆಕ್ಟ್ ಸೆಕ್ಷನ್ 75 ಅಡಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಪತ್ರ ಬರೆದು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆಯೋಗದ ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕೋಸಂಬೆಯವರು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ.
ದೂರು ನೀಡಿದ್ದ ಸಿಬ್ಬಂದಿ ಕೆಲಸದಿಂದಲೇ ವಜಾ!
ಸೊಸೈಟಿ ಜನರಲ್ ಬೇಬಿ ಕೇರ್ ಸೆಂಟರ್‌ನಲ್ಲಿ 50 ರಿಂದ 60 ಮಕ್ಕಳು ದಾಖಲಾಗಿದ್ದರು. ನಿತ್ಯ 15 ರಿಂದ 20 ಮಕ್ಕಳು ಬರುತ್ತಿದ್ದರು. ಇಲ್ಲಿ ದೀರ್ಘಕಾಲದಿಂದಲೂ ಇಂತಹ ದೌರ್ಜನ್ಯ ನಡೆಯುತ್ತಿತ್ತು. ಈ ಹಿಂದೆ ಇಲ್ಲಿನ ಉಸ್ತುವಾರಿಗೆ ಈ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯೊಬ್ಬರನ್ನು ಈ ಸಂಸ್ಥೆಯು ಕೆಲಸದಿಂದಲೇ ವಜಾಗೊಳಿಸಿ ಸತ್ಯವನ್ನು ಮುಚ್ಚಿಹಾಕಲು ಯತ್ನಿಸಿತ್ತು ಎಂಬ ಮಾಹಿತಿ ಇದೀಗ ಹೊರಬಂದಿದೆ.