ಬೆಂಗಳೂರು ಕಿಲ್ಲರ್‌ ಕ್ವಾರಿಗೆ 7 ಬಡ ಕಾರ್ಮಿಕರು ಬಲಿ

Published : Jul 03, 2026, 08:03 AM IST
bengaluru Quarry Horror

ಸಾರಾಂಶ

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟು, 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿಯ ಕಾವೇರಿ ಜಲ್ಲಿ ಕ್ರಷರ್‌ನಲ್ಲಿ ಗುರುವಾರ ನಡೆದಿದೆ.

 ರಾಮನಗರ :  ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಮೃತಪಟ್ಟು, 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿಯ ಕಾವೇರಿ ಜಲ್ಲಿ ಕ್ರಷರ್‌ನಲ್ಲಿ ಗುರುವಾರ ನಡೆದಿದೆ.

ದುರಂತದಲ್ಲಿ ಮೃತಪಟ್ಟವರನ್ನು ರಾಮು (44), ರಾಜಪಾಲ್ ಸಿಂಗ್ (35), ಸತ್ಯನಾರಾಯಣಸಿಂಗ್ (31), ರಾಮೃತಾರ್ ಸಿಂಗ್ (29), ಧರ್ಮೇಶ್ ಸಿಂಗ್ (22), ರಾಜೇಶ್ ಪ್ರಸಾದ್ ಚೌಧರಿ (24), ಭುವನೇಶ್ವರ್ ಸಿಂಗ್ ಗೊಂಡ್ (33) ಎಂದು ಗುರುತಿಸಲಾಗಿದೆ. ಈ ಪೈಕಿ ಆರು ಮಂದಿ ಮಧ್ಯಪ್ರದೇಶ ಮೂಲದವರಾಗಿದ್ದರೆ, ಮತ್ತೊರ್ವ ಕಾರ್ಮಿಕ ರಾಮು ಯಾದಗಿರಿ ಜಿಲ್ಲೆಯವರಾಗಿದ್ದಾರೆ. ದುರಂತದಲ್ಲಿ ನೆಹಾಲ್ ಸಿಂಗ್ (21), ಆನಂದ್ (22), ಗುಲಾಜ್ ಸಿಂಗ್ (20), ರಾಜ್ ಪಾಲ್ ಸಿಂಗ್ (30), ಚೋಟಾಲಾಲ್ (19) ಎಂಬುವರು ಗಾಯಗೊಂಡಿದ್ದು, ಅವರೆಲ್ಲರನ್ನೂ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದುರಂತ ಬೆನ್ನಲ್ಲೇ ಕ್ವಾರಿ ಮಾಲೀಕರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ:?

ಮಾದಾಪಟ್ಟಣ ಬಳಿಯ ಹುಲವೇನಹಳ್ಳಿ ಗ್ರಾಮದಲ್ಲಿ ಉದಯ ಶಂಕರ್‌ ಎಂಬುವರಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ (ಕಾವೇರಿ ಜಲ್ಲಿ ಕ್ರಷರ್‌) ಕಾರ್ಮಿಕರು ಕ್ವಾರಿಯಲ್ಲಿ ಕುಳಿ ಹೊಡೆಯುವ ಕೆಲಸದಲ್ಲಿ ನಿರತರಾಗಿದ್ದರು. ಇದೇ ವೇಳೆ, ಮೇಲ್ಭಾಗದಲ್ಲಿ ಆನಂದಸ್ವಾಮಿ ಎಂಬುವರಿಗೆ ಸೇರಿದ ಬಸವೇಶ್ವರ ಕಲ್ಲು ಕ್ವಾರಿಯಲ್ಲಿ ಚಾಲಕ ತಿರುಪತಿ ಎಂಬಾತ ಹಿಟಾಚಿಯಿಂದ ಕಲ್ಲು ಬಂಡೆ ಜಾರಿಸುತ್ತಿದ್ದ.

ಬೆಳಗ್ಗೆ ಸುಮಾರು 7.30ರ ವೇಳೆಗೆ ಬಸವೇಶ್ವರ ಕಲ್ಲು ಕ್ವಾರಿಯಲ್ಲಿ ಕ್ರಷರ್‌ನ ಬಂಡೆಯನ್ನು ಜರುಗಿಸುವಾಗ ಏಕಾಏಕಿ ಕಲ್ಲುಬಂಡೆಗಳು ಕೆಳಗೆ ಉರುಳಿ ಕಾವೇರಿ ಜಲ್ಲಿ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದವು. ಕಲ್ಲು ಬಂಡೆಗಳು ಉರುಳಿದ ರಭಸಕ್ಕೆ 7 ಕಾರ್ಮಿಕರ ದೇಹಗಳು ಅಪ್ಪಚ್ಚಿಯಾಗಿ, ಅವರೆಲ್ಲರೂ ಅಲ್ಲಿಯೇ ಕೊನೆಯುಸಿರೆಳೆದರು. ಇತರ ಐವರು ಕಾರ್ಮಿಕರು ಗಾಯಗೊಂಡಿದ್ದು, ತಕ್ಷಣವೇ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಯಿತು. ದುರಂತದಲ್ಲಿ ನಾಲ್ಕು ಟ್ರಾಕ್ಟರ್ ಕಂಪ್ರೆಷರ್‌ಗಳು ಜಖಂಗೊಂಡಿವೆ.

ನಿಯಮಗಳ ಪ್ರಕಾರ, ಎರಡು ಕ್ವಾರಿಗಳ ನಡುವೆ ಕನಿಷ್ಠ 7.5 ಅಡಿ ಜಾಗವನ್ನು ‘ಬಫರ್ ಜೋನ್’ ಎಂದು ಬಿಡಬೇಕಾಗುತ್ತದೆ. ಆದರೆ, ಮಾಲೀಕರು ಈ 7.5 ಅಡಿಯ ಬಫರ್ ಜೋನ್ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಈ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಲ್ಲು ಬಂಡೆಗಳ ಕೆಳಗೆ ಸಿಲುಕಿಕೊಂಡಿದ್ದ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಾರ್ಮಿಕ ಗೋಪಿ ಕೃಷ್ಣನ್ ಎಂಬುವರು ನೀಡಿದ ದೂರಿನ ಮೇರೆಗೆ ತಾವರೆಕೆರೆ ಠಾಣೆ ಪೊಲೀಸರು ಕಾವೇರಿ ಜಲ್ಲಿ ಕ್ರಷರ್‌ ಮಾಲೀಕ ಉದಯ ಶಂಕರ್, ಬಸವೇಶ್ವರ ಕ್ರಷರ್‌ ಮಾಲಿಕ ಆನಂದ ಸ್ವಾಮಿ, ಮೇಸ್ತ್ರಿ ಪಾಂಡು, ಇಟಾಚಿ ಚಾಲಕ ತಿರುಪತಿ ಸೇರಿ ಐವರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಕೂಲಿ ಅರಸಿ ಬಂದಿದ್ದ ಯಾದಗಿರಿ ವ್ಯಕ್ತಿ ಬಲಿ

ಮೃತರ ಪೈಕಿ ರಾಮು ಎಂಬುವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಡಿಹಾಳ್ ತಾಂಡಾದವರು ಎಂದು ಗುರುತಿಸಲಾಗಿದೆ. ಯಾದಗಿರಿಯಲ್ಲಿ ತಲೆದೋರಿರುವ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಲು ರಾಮು ಅವರು ತಮ್ಮ ಇಡೀ ಕುಟುಂಬ ಸಮೇತ ಬೆಂಗಳೂರಿಗೆ ವಲಸೆ ಬಂದಿದ್ದರು. ಕೂಲಿ ಕೆಲಸಕ್ಕಾಗಿ ಕಲ್ಲು ಕ್ವಾರಿಗೆ ಇಳಿದಿದ್ದ ರಾಮು ಶವವಾಗಿದ್ದಾರೆ.

ಮುಂಜಾನೆ ಜಿಲೆಟಿನ್ ಸ್ಫೋಟ!

ಸ್ಥಳೀಯರ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕದ್ದುಮುಚ್ಚಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿದೆ. ಗುರುವಾರ ಬೆಳಗಿನ ಜಾವ ಕಾರ್ಮಿಕರು ಎಂದಿನಂತೆ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ದೊಡ್ಡ ಬಂಡೆಗಳನ್ನು ಪುಡಿ ಮಾಡಲು ಅತಿಯಾದ ತೀವ್ರತೆಯ ಸ್ಫೋಟಕಗಳನ್ನು ಬಳಸಲಾಗಿದ್ದು, ಇಡೀ ಪ್ರದೇಶದಲ್ಲಿ ಬಹುದೊಡ್ಡ ಶಬ್ದ ಕೇಳಿಸಿದೆ. ಈ ವೇಳೆ, ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಲಾಗುತ್ತಿದೆ.

ಎರಡು ಕ್ವಾರಿಯಲ್ಲಿ ಕೆಲಸ ನಡೆಯುತ್ತಿತ್ತು. ಕೆಳಗಡೆ ಇದ್ದ ಕ್ವಾರಿಯಲ್ಲಿ 16 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಪಕ್ಕದ ಕ್ವಾರಿಯಲ್ಲಿ ಮೇಲುಗಡೆ ಕೆಲಸ ಮಾಡುತ್ತಿದ್ದಾಗ ಬಂಡೆ ಬಿದ್ದು 16 ಕಾರ್ಮಿಕರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆದಿದೆ.

- ಎಸ್.ಗಿರೀಶ್, ಕೇಂದ್ರ ವಲಯ ಐಜಿಪಿ.

ಕ್ವಾರಿಯಲ್ಲಿ ಆಗಿದ್ದೇನು?

- ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಮಾದಾಪಟ್ಟಣದಲ್ಲಿ ಅಕ್ಕಪಕ್ಕದಲ್ಲಿ 2 ಕ್ವಾರಿಗಳು ಇವೆ

- ಒಂದು ಮೇಲಿದ್ದರೆ, ಮತ್ತೊಂದು ಅದಕ್ಕೆ ತಾಕಿಕೊಂಡೇ ನೂರು ಅಡಿಗಳಷ್ಟು ಕೆಳ ಭಾಗದಲ್ಲಿ ಇದೆ

- ಗುರುವಾರ ಮುಂಜಾನೆ ಮೇಲಿನ ಕ್ವಾರಿಯಲ್ಲಿ ಬಂಡೆ ಜರುಗಿಸುವಾಗ ಅದು ಉರುಳಿ ಕೆಳಕ್ಕೆ ಬಿತ್ತು

- ಆ ಸಂದರ್ಭದಲ್ಲಿ ಕೆಳಭಾಗದ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಂಡೆ ಬಿದ್ದಿದೆ

- ಭಾರಿ ಗಾತ್ರದ ಬಂಡೆಯಿಂದಾಗಿ ಮಧ್ಯಪ್ರದೇಶದ 6, ಕರ್ನಾಟಕದ 1 ಒಬ್ಬ ಸೇರಿ 6 ಜನರು ಬಲಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಳೆದ ಜನಸ್ಪಂದನ ಸಭೆ ಪ್ರಕರಣಗಳಲ್ಲಿ ಶೇ.77ರಷ್ಟು ಪರಿಹಾರ
೫ಕ್ಕೆ ಅಂಬೇಡ್ಕರ್ ಪ್ರತಿಮೆ ಅನಾವರಣ