;Resize=(412,232))
ಬೆಂಗಳೂರು : ‘ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಬಡ್ತಿ ಮತ್ತು ನೇಮಕಾತಿ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ನೀಡಬೇಕೆಂಬ ಆಗ್ರಹಕ್ಕೆ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದು,ಇದು ಕನ್ನಡಿಗರಿಗೆ ಸಂದ ಜಯ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಶುಕ್ರವಾರ ಕರವೇ ನಿಯೋಗವು ಶುಕ್ರವಾರ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಅವರು ಮಾತನಾಡಿದರು. ‘ಗೂಡ್ಸ್ ರೈಲು ವ್ಯವಸ್ಥಾಪಕ ಹುದ್ದೆಗೆ ಸಂಬಂಧಿಸಿದ ಬಡ್ತಿ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆವು. ನಮ್ಮ ಆಗ್ರಹಕ್ಕೆ ಡಿಆರ್‌ಎಂ, ಪಿಸಿಪಿಒ ಸೇರಿದಂತೆ ಹಿರಿಯ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶ ನೀಡಲು ಒಪ್ಪಿದ್ದಾರೆ’ ಎಂದು ಹೇಳಿದರು.
‘ನೈಋತ್ಯ ರೈಲ್ವೆಯ ಬೆಂಗಳೂರು, ಹುಬ್ಬಳ್ಳಿ, ಮೈಸೂರು ವಿಭಾಗಗಳಲ್ಲಿ ಹೊರಡಿಸಲಾದ ಅಧಿಸೂಚನೆಗಳಲ್ಲಿ ಬೆಂಗಳೂರು ವಿಭಾಗದಲ್ಲಿ ಮಾತ್ರ ಕನ್ನಡವನ್ನು ಕಡೆಗಣಿಸಿ ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸುವ ಉದ್ದೇಶ ರಾಜಧಾನಿ ಬೆಂಗಳೂರನ್ನು ಕರ್ನಾಟಕಕ್ಕೆ ಸೇರದಂತೆ ಮಾಡುವ ಹುನ್ನಾರವಾಗಿದೆ. ಕನ್ನಡಿಗರ ಹಕ್ಕುಗಳನ್ನು ದಮನ ಮಾಡುವ ದೊಡ್ಡ ಅನ್ಯಾಯ. ಇದು ರೈಲ್ವೆ ಇಲಾಖೆಯ ಮಾಸ್ಟರ್ ಸೆರ್ಕ್ಯುಲರ್ ಆದೇಶನ್ನು ಉಲ್ಲಂಘಿಸುತ್ತದೆ. ಕರವೇ ಅನೇಕ ವರ್ಷಗಳಿಂದ ಇದರ ಬಗ್ಗೆ ಹೋರಾಟ ಮಾಡಿದ್ದರೂ ಕನ್ನಡಿಗರ ಹಕ್ಕುಗಳನ್ನು ದಮನಿಸುವ ಕಾರ್ಯ ಮಾಡಲಾಗಿತ್ತು’ ಎಂದು ಹೇಳಿದರು.
ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ಗೂಡ್ಸ್ ಟ್ರೈನ್ ಮ್ಯಾನೇಜರ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಕೈಬಿಟ್ಟು ಆಂಗ್ಲ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿದ್ದರ ಕುರಿತು ಕನ್ನಡಪ್ರಭ ಬುಧವಾರ (ಡಿ.17) ವಿಶೇಷ ವರದಿಯನ್ನು ಪ್ರಕಟಿಸಿತ್ತು.