5ನೇ ತಲೆಮಾರಿನ ‘ಎಎಂಸಿಎ’ ನಿರ್ಮಾಣಕ್ಕೆ ಚಾಲನೆ - ಭಾರತದ ಭರವಸೆಯ ಅತ್ಯಾಧುನಿಕ ಯುದ್ಧ ವಿಮಾನ

Published : Feb 11, 2025, 05:34 AM IST
F35 air show 2023

ಸಾರಾಂಶ

 ರಾಷ್ಟ್ರಗಳ ರೇಡಾರ್ ಕಣ್ತಪ್ಪಿಸಿ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನ ‘ಅಡ್ವಾನ್ಸ್ಡ್‌ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್‌’ (ಎಎಂಸಿಎ) ಅನ್ನು ದೇಶಿಯವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಮಂಜುನಾಥ ನಾಗಲೀಕರ್

 ಬೆಂಗಳೂರು : ಶತ್ರು ರಾಷ್ಟ್ರಗಳ ರೇಡಾರ್ ಕಣ್ತಪ್ಪಿಸಿ ರಹಸ್ಯ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಅತ್ಯಾಧುನಿಕ ಯುದ್ಧ ವಿಮಾನ ‘ಅಡ್ವಾನ್ಸ್ಡ್‌ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್‌’ (ಎಎಂಸಿಎ) ಅನ್ನು ದೇಶಿಯವಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ವಿಮಾನಗಳು ಬೆಂಗಳೂರಿನ ಮಂಡೂರು ಬಳಿಯ ರಕ್ಷಣಾ ಪಡೆಗೆ ಸೇರಿದ 20 ಎಕರೆ ಜಾಗದಲ್ಲಿ ಸ್ಥಾಪಿಸಲಾಗುವ ಹೊಸ ವಿಮಾನ ಉತ್ಪಾದನಾ ಘಟಕದಲ್ಲಿ ಉತ್ಪಾದನೆಯಾಗಲಿರುವುದು ವಿಶೇಷ.

ದೇಶದ ರಕ್ಷಣಾ ಮತ್ತು ಸಂಶೋಧನೆ ಇಲಾಖೆಯಡಿ ಬರುವ ‘ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ’ಯು (ಎಡಿಎ) ಈ ವಿಮಾನದ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ವಿಮಾನದ ನೈಜ ಮಾದರಿಯನ್ನು ಮೊದಲ ಬಾರಿ ‘ಏರೋ ಇಂಡಿಯಾ-2025’ರ ಭಾರತ ಪೆವಿಲಿಯನ್‌ನಲ್ಲಿ ಅನಾವರಣಗೊಳಿಸಲಾಗಿದೆ. ಸದ್ಯ ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರ 5ನೇ ತಲೆಮಾರಿನ ಫೈಟರ್ ಜೆಟ್ ಹೊಂದಿವೆ. ಇಂತಹ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಲು ಭಾರತ ದಾಪುಗಾಲು ಇಟ್ಟಿದೆ. ಈ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಜೊತೆಗೆ ವಾಯುಪಡೆಯ ಅಗತ್ಯ ನೀಗಿಸಲು ಈ ಯೋಜನೆ ಮಹತ್ವದ್ದಾಗಿದೆ.

2028ರ ವೇಳೆಗೆ ಮೊದಲ ವಿಮಾನ: ‘ಲಘು ಯುದ್ಧ ವಿಮಾನ ತೇಜಸ್ ಅನ್ನು ನಿರ್ಮಾಣ ಮಾಡಲು ನಮಗೆ 2 ದಶಕಗಳಿಗೂ ಹೆಚ್ಚು ಕಾಲಬೇಕಾಯಿತು. ತೇಜಸ್ ಈಗಾಗಲೇ ಸೇನೆಗೆ ಸೇರ್ಪಡೆಗೊಂಡಿದೆ. ತೇಜಸ್‌ ನಿರ್ಮಾಣ ವೇಳೆಗಿನ ಸಂಶೋಧನೆಗಳು, ಅನುಭವದ ಆಧಾರದ ಮೇರೆಗೆ ಈಗ ಅಗತ್ಯಕ್ಕೆ ತಕ್ಕಂತೆ ತಂತ್ರಜ್ಞಾನದ ಸುಧಾರಣೆ ಮತ್ತು ಬದಲಾವಣೆ ಮೂಲಕ ವೇಗವಾಗಿ ಎಎಂಸಿಎಯನ್ನು ಅಭಿವೃದ್ಧಿಪಡಿಸಬಹುದು. 2028ರಲ್ಲಿ ಪ್ರೊಟೋಟೈಪ್ ನಿರ್ಮಿಸಿ ಹಾರಾಟ ನಡೆಸಿ 2034ರ ವೇಳೆಗೆ ಭಾರತೀಯ ವಾಯುಸೇನೆಗೆ 18 ವಿಮಾನಗಳ ಒಂದು ಸ್ಕ್ವಾಡ್ರನ್ ಅನ್ನು ಹಸ್ತಾಂತರಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಆರಂಭಿಕ ಅಂದಾಜು ವೆಚ್ಚ 15 ಸಾವಿರ ಕೋಟಿ ರು. ಆಗಿದೆ’ ಎಂದು ಎಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಭಾರತದಲ್ಲೇ ಉತ್ಪಾದನೆ ಮಾಡುವುದರಿಂದ ವೆಚ್ಚ ಉಳಿತಾಯ, ಉದ್ಯೋಗ ಸೃಷ್ಟಿ, ರಕ್ಷಣಾ ಕ್ಷೇತ್ರದ ಉದ್ಯಮಗಳ ಬೆಳವಣಿಗೆಯಾಗಿ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ರಫ್ತು ಸಾಧ್ಯವಾದರೆ ಭಾರತಕ್ಕೆ ಅಪಾರ ಆದಾಯ ಬರಲಿದೆ ಎಂದು ಅಧಿಕಾರಿ ಹೇಳಿದರು.

ಎಎಂಸಿಎ ಯುದ್ಧ ವಿಮಾನದ ವೈಶಿಷ್ಟ್ಯಗಳು

- ಈ ವಿಮಾನ 2 ಎಂಜಿನ್‌ಗಳನ್ನು ಹೊಂದಿದ್ದು ಒಬ್ಬ ಪೈಲಟ್ ಹಾರಾಟ ನಡೆಸಬಹುದು.

- ಈ ಅತ್ಯಾಧುನಿಕ ವಿಮಾನದ ತೂಕ 25 ಟನ್ ಆಗಿದೆ. ಅಂದರೆ ತೂಕ ಕಡಿಮೆ ಇದೆ

- ಗಂಟೆಗೆ 2,500 ಕಿ.ಮೀ ವೇಗದಲ್ಲಿ ಈ ಯುದ್ಧ ವಿಮಾನ ಸಂಚರಿಸಲಿದೆ.

- 1,600 ಕಿ.ಮೀ ನಿಂದ 5,300 ಕಿ.ಮೀ ದೂರದವರೆಗೆ ಹಾರಾಟ ನಡೆಸಬಲ್ಲುದು.

- ಕ್ಷಿಪಣಿ, ಬಾಂಬ್, ರಾಕೆಟ್‌ಗಳನ್ನು ಬಚ್ಚಿಟ್ಟುಕೊಂಡು ಹಾರಾಟ ನಡೆಸುವ ವ್ಯವಸ್ಥೆ ಇದೆ.

- ಕಂಪ್ಯೂಟರ್ ಮೂಲಕ ವಿಮಾನದ ಸಂಪೂರ್ಣ ವ್ಯವಸ್ಥೆಯ ಮಾನಿಟರಿಂಗ್ ಸಾಧ್ಯವಿದೆ

- ಶತ್ರುರಾಷ್ಟ್ರಗಳ ರೇಡಾರ್ ಕಣ್ತಪ್ಪಿಸುವ ಅತ್ಯಾಧುನಿಕ ತಂತ್ರಜ್ಞಾನಗಳು ಇದರಲ್ಲಿವೆ.

- ಕೃತಕ ಬುದ್ಧಿಮತ್ತೆ(ಎಐ) ಆಧರಿತ ಎಲೆಕ್ಟ್ರಾನಿಕ್ ಪೈಲಟ್ ಸಿಸ್ಟಂ ಅಳವಡಿಸಲಾಗಿದೆ

PREV

Recommended Stories

ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ
ಕನಕಪುರದಲ್ಲಿ ವೈದ್ಯ ಕಾಲೇಜಿಗೆ ಭೂಮಿ ಖರೀದಿಗೆ ಹಣ ಮಂಜೂರು