ದಿಢೀರ್‌ ವಾಹನ ಅಡ್ಡಗಟ್ಟುವುದಕ್ಕೆ ಡಿಜಿಪಿ ಬ್ರೇಕ್‌

Published : Jun 01, 2025, 09:10 AM IST
Traffic Rules

ಸಾರಾಂಶ

ರಸ್ತೆಯಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಲವು ಸೂಚನೆಗಳನ್ನು ನೀಡಿದ್ದಾರೆ.

 ಬೆಂಗಳೂರು :ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನ ತಪಾಸಣೆ ವೇಳೆ ಅಪಘಾತಕ್ಕೀಡಾಗಿ ಮಗು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ಪೊಲೀಸರ ವಾಹನ ತಪಾಸಣೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಲವು ಸೂಚನೆಗಳನ್ನು ನೀಡಿದ್ದಾರೆ.

ಈ ಸಂಬಂಧ ಶನಿವಾರ ಸುತ್ತೋಲೆ ಹೊರಡಿಸಿರುವ ಡಿಜಿಪಿ-ಐಜಿಪಿ ಡಾ। ಎಂ.ಎ.ಸಲೀಂ, ಕಣ್ಣಿಗೆ ಕಾಣುವಂತೆ ಸಂಚಾರ ನಿಯಮ ಉಲ್ಲಂಘಿಸದ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ಮಾಡಬಾರದು. ವಾಹನ ತಪಾಸಣೆ ವೇಳೆ ಬಾಡಿ ವೋರ್ನ್‌ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಧರಿಸಿರಬೇಕು. ರಸ್ತೆಯಲ್ಲಿ ದಿಢೀರನೇ ಬಂದು ವಾಹನಗಳನ್ನು ಅಡ್ಡಗಟ್ಟುವುದಾಗಲಿ ಅಥವಾ ವಾಹನಗಳ ಕೀ ಕೈ ತೆಗೆದುಕೊಳ್ಳವುದಾಗಲಿ ಮಾಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಸೂಚನೆಗಳು

1.ಸಕಾರಣವಿಲ್ಲದೆ ದಾಖಲೆಗಳನ್ನು ಪರೀಕ್ಷಿಸಲು ವಾಹನಗಳನ್ನು ಪೊಲೀಸರು ತಡೆದು ತಪಾಸಣೆಗೊಳಪಡಿಸಬಾರದು.

2. ಕಣ್ಣಿಗೆ ಕಾಣುವ (Visible violations) ಸಂಚಾರ ನಿಯಮ ಉಲ್ಲಂಘನೆಗಳು ಕಂಡು ಬಂದಲ್ಲಿ ಮಾತ್ರ ವಾಹನ ತಡೆ ತಪಾಸಣೆ ನಡೆಸಬೇಕು. ಪ್ರಕರಣಗಳನ್ನು ದಾಖಲಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು.

(ಅ) ಹೆದ್ದಾರಿಗಳಲ್ಲಿ ಝಿಗ್‌ ಝಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ವಾಹನಗಳನ್ನು ತಡೆಯಬಾರದು. (ಆ) ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನ ನಿಲ್ಲಿಸುವಂತೆ ಹೇಳಬಾರದು. (ಇ)ಬೈಕ್‌ನ ಹಿಂಬದಿ ಸವಾರ (Pillion rider) ನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿ ಕೈ ಕಿತ್ತುಕೊಳ್ಳಬಾರದು.

3.ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಬೆನ್ನಟ್ಟಿ ಹಿಡಿಯಬಾರದು. ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.

4.ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಪ್ರಕರಣ ದಾಖಲಿಸುವಾಗ ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ತಮ್ಮ ಸುರಕ್ಷತೆಗೆ ರಿಫ್ಲೇಕ್ಟಿವ್‌ ಜಾಕೆಟ್‌ಗಳನ್ನು ಪೊಲೀಸರು ಧರಿಸಬೇಕು. ಸಂಜೆ ವೇಳೆ ಕಡ್ಡಾಯವಾಗಿ ಎಲ್‌ಇಡಿ ಬ್ಯಾಟನ್ ಗಳನ್ನು ಉಪಯೋಗಿಸಬೇಕು ಹಾಗೂ ಕಡ್ಡಾಯವಾಗಿ ಬಾಡಿ ವೋರ್ನ್‌ ಕ್ಯಾಮೆರಾ ಧರಿಸಬೇಕು.

5.ಸಂಚಾರ ನಿರ್ವಹಣಾ ಕೇಂದ್ರ ಅಥವಾ ಇಂಟೆಲಿಜೆಟ್‌ ಸಂಚಾರ ನಿರ್ವಹಣಾ ವ್ಯವಸ್ಥೆ (ಐಟಿಎಂಎಸ್‌) ಘಟಕದವು ಸಂಪರ್ಕ ರಹಿತಾ ಪ್ರವರ್ತನಾ ಮೂಲಕ ಪ್ರಕರಣಗಳನ್ನು ದಾಖಲಿಸಬೇಕು.

6.ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಜನ ಜಾಗೃತಿ ಅಭಿಯಾನ ನಡೆಸಬೇಕು.

7.ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಸೇರಿ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು. ಇಂತಹ ವಾಹನಗಳ ವಿರುದ್ಧ ಎಸ್‌ಟಿವಿಆರ್ ದಾಖಲಿಸಲು ತಂತ್ರಜ್ಞಾನ ಆಧಾರಿತ ನಿಯಮಗಳನ್ನು ಅನುಸರಿಬೇಕು.

8.ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100-150 ಮೀಟರ್ ಮೊದಲೇ ರಿಫ್ಲೇಕ್ಟಿವ್‌ ರಬ್ಬರ್ ಕೋನ್‌ಗಳನ್ನು ಹಾಗೂ ಸುರಕ್ಷತಾ ಸಲಕರಣೆಗಳನ್ನು ಅಳವಡಿಸುವುದು.

9.ರಾತ್ರಿ ಮತ್ತು ತಡರಾತ್ರಿ ವೇಳೆ ಸಂಚಾರ ಸಿಗ್ನಲ್ ದೀಪಗಳಿರುವ/ಜಂಕ್ಷನ್‌ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡುವುದು ಸೂಕ್ತ.

10.ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿಗಳನ್ನು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆ ಸಂದರ್ಭದಲ್ಲಿ ಸುರಕ್ಷತಾ ಹಿತದೃಷ್ಟಿಯಿಂದ ಸಂಚಾರ ಪೊಲೀಸರ ಸಹಕಾರವನ್ನು ಪಡೆಯಬೇಕು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ