ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ಬು ಹೂತಿಟ್ಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರು ಅಧಿಕಾರಿಗಳ ಸಭೆ ನಡೆಸಿದ್ದು, ತನಿಖೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ.
ಧರ್ಮಸ್ಥಳ ಪ್ರಕರಣ ಕುರಿತು ಗುರುವಾರ ನಡೆದ ಸಭೆಯಲ್ಲಿ ವಿವಿಧ ರೀತಿಯಲ್ಲಿ ತನಿಖೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಮೊಹಾಂತಿ ಸೂಚಿಸಿದ್ದಾರೆ. ತನಿಖೆಗಳನ್ನು ಯಾವ ರೀತಿ ನಿರ್ವಹಿಸಬೇಕು, ಮುನ್ನಡೆಸಬೇಕು ಎಂಬುದರ ಕುರಿತು ನಿರ್ದೇಶಿಸಿದ್ದಾರೆ. ಅಲ್ಲದೆ ಬಳಿಕ ಬಂದ ದೂರುಗಳ ಬಗ್ಗೆ ಎಲ್ಲಾ ದಿಕ್ಕುಗಳಿಂದ ಮಾಹಿತಿ ಸಂಗ್ರಹಿಸುವಂತೆ ಮತ್ತು ಅವುಗಳ ಪೂರ್ವಾಪರಗಳ ಟಿಪ್ಪಣಿ ಮಾಡುವಂತೆ ಪ್ರಣವ್ ಮೊಹಾಂತಿ ಸೂಚನೆ ನೀಡಿದ್ದಾರೆ.
ಸುಜಾತಾ ಭಟ್‌ಗೆ ಎಸ್‌ಐಟಿ ನೋಟಿಸ್?:
ಪುತ್ರಿ ಅನನ್ಯಾ ಭಟ್ ಎಂಬ ತಮ್ಮ ಪುತ್ರಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವುದಾಗಿ ದೂರು ನೀಡಿರುವ ವೃದ್ಧೆ ಸುಜಾತಾ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೊಟೀಸ್ ನೀಡುವ ಸಾಧ್ಯತೆ ಇದೆ. ಬುಧವಾರವಷ್ಟೇ ಅನನ್ಯಾ ಭಟ್ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರವಾಗಿದ್ದು, ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತ ಪ್ರಕರಣ ಭಾರೀ ಚರ್ಚೆ, ಪರ, ವಿರೋಧಗಳಿಗೆ ಕಾರಣವಾಗಿರುವ ಮಧ್ಯದಲ್ಲಿ ಅನನ್ಯಾ ಭಟ್ ಪ್ರಕರಣ ಬೇರೇಯೇ ರೀತಿಯ ಚರ್ಚೆಗೆ ಕಾರಣವಾಗಿದೆ.ಈಗಾಗಲೇ ಮಾಧ್ಯಮಗಳಲ್ಲಿ ಅನನ್ಯಾ ಭಟ್ ಪ್ರಕರಣದ ಬಂಡವಾಳ ಬಯಲಾಗಿದ್ದು, ಅವೆಲ್ಲವೂ ಕಟ್ಟುಕತೆ ಎಂಬ ಹಂತಕ್ಕೆ ಬಂದು ತಲುಪಿದೆ. ಈತ ಎಸ್‌ಐಟಿಯೂ ಸಹ ಇಡೀ ಪ್ರಕರಣವೇ ಸುಳ್ಳು ಎಂಬ ಅರಿತಿದೆ ಎನ್ನಲಾಗಿದೆ. ಆದಾಗ್ಯೂ ಸುಜಾತಾ ಭಟ್ ವಿಚಾರಣೆ ಬಳಿಕ ಆಕೆಯ ವಿರುದ್ಧ ಪರಿಶೀಲಿಸಿ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.
ಡಾ. ಹೆಗ್ಗಡೆ ಅವಹೇಳನ ವಿರುದ್ಧ ಸ್ನೇಹಮಯಿ ಕೃಷ್ಣ ದೂರು
ಸಾಮಾಜಿಕ ತಾಣಗಳಲ್ಲಿ ವಿಡಿಯೋಗಳ ಮೂಲಕ ಧರ್ಮಸ್ಥಳವನ್ನು ಮತ್ತು ವೀರೇಂದ್ರ ಹೆಗ್ಗಡೆ ಅವರನ್ನು ಅವಹೇಳನ ಮಾಡಿದ್ದಾರೆಂದು ಆರೋಪಿಸಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಸಮೀರ್ ಎಂ.ಡಿ. ಹಾಗೂ ಸುಜಾತಾ ಭಟ್ ವಿರುದ್ಧ ಸಾಮಾಜಿಕ ಹೋರಾಟಗಾರ ಮತ್ತು ಮೂಡಾ ಪ್ರಕರಣದ ರೂವಾರಿ ಸ್ನೇಹಮಯಿ ಕೃಷ್ಣ ಗುರುವಾರ ಧರ್ಮಸ್ಥಳ ಠಾಣೆಗೆ ಬಂದು ದೂರು ನೀಡಿದ್ದಾರೆ.
ಯಾವುದೇ ಸಾಕ್ಷ್ಯ ಇಲ್ಲದೇ ಇದ್ದರೂ ನಿರಂತರ ಅಪಪ್ರಚಾರ ಮಾಡಿದ್ದಾರೆ. ಸುಜಾತ ಭಟ್ ಅವರು ತನ್ನ ಮಗಳು ನಾಪತ್ತೆ ಅಂತ ಸುಳ್ಳು ದೂರು ನೀಡಿದ್ದಾರೆ. ಈ ಮೂಲಕ ಧರ್ಮಸ್ಥಳ ಹಾಗೂ ಹೆಗ್ಗಡೆ ಅವರ ಅವಹೇಳನ ಮಾಡಿದ್ದಾರೆ, ತಿಮರೋಡಿ, ಮಟ್ಟಣ್ಣನವರ್ ಹಾಗೂ ಸಮೀರ್ ಕೂಡ ವಿಡಿಯೋ ಮಾಡಿ ಅವಹೇಳನ ಮಾಡ್ತಿದ್ದಾರೆ ಎಂದು ದೂರಿನಲ್ಲಿ ತಿಳಿದ್ದಾರೆ.
ತನ್ನ ದೂರನ್ನು ತಕ್ಷಣ ಸ್ವೀಕರಿಸಿ ಎಫ್.ಐ.ಆರ್. ದಾಖಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅವರ ದೂರನ್ನು ಸ್ವೀಕರಿಸಿರುವ ಠಾಣೆಯವರು ಎನ್.ಸಿ.ಆರ್. ದಾಖಲಿಸಿದ್ದಾರೆ.