ಕಿದ್ವಾಯಿ ಕ್ಯಾನ್ಸರ್‌ ಮಕ್ಕಳ ಜತೆ ಡಿಕೆಶಿ ಮಾತುಕತೆ

Published : Nov 15, 2026, 08:01 AM IST
DK Shivakumar

ಸಾರಾಂಶ

ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಕಾಯಿಲೆಗಳ ವಿರುದ್ಧ ಸೆಣೆಸುತ್ತಿರುವ ಪುಟಾಣಿಗಳನ್ನು ಭೇಟಿ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್‌ ಅವರು, ಪುಟ್ಟ ಮಕ್ಕಳ ಜೊತೆ ಆತ್ಮೀಯ ಸಂಭಾಷಣೆ ನಡೆಸಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು.

ಬೆಂಗಳೂರು : ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಕಾಯಿಲೆಗಳ ವಿರುದ್ಧ ಸೆಣೆಸುತ್ತಿರುವ ಪುಟಾಣಿಗಳನ್ನು ಭೇಟಿ ಮಾಡಿದ ಸಿಎಂ ಡಿ.ಕೆ. ಶಿವಕುಮಾರ್‌ ಅವರು, ಪುಟ್ಟ ಮಕ್ಕಳ ಜೊತೆ ಆತ್ಮೀಯ ಸಂಭಾಷಣೆ ನಡೆಸಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು. ಮಕ್ಕಳ ದಿನಾಚರಣೆ ಅಂಗವಾಗಿ ಶನಿವಾರ ಕಿದ್ವಾಯಿ ಆಸ್ಪತ್ರೆಯ ಕಪೂರ್‌ ಮಕ್ಕಳ ಬ್ಲಾಕ್‌ಗೆ ಭೇಟಿ ನೀಡಿದ ಅವರು, ಕ್ಯಾನ್ಸರ್‌ ಜೊತೆ ಹೋರಾಡುತ್ತಿರುವ ಪುಟ್ಟ ಮಕ್ಕಳು ಹಾಗೂ ಮಕ್ಕಳ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಹೆತ್ತವರ ಜತೆ ಸಾಂತ್ವನ, ಆರೈಕೆ, ಆತ್ಮವಿಶ್ವಾಸದ ಮಾತುಗಳ ಮೂಲಕ ಭರವಸೆ ತುಂಬಿದರು.

ಹೂ ಕೊಟ್ಟು ಸ್ವಾಗತಿಸಿದ ಧನುಶ್‌:

ಮೊದಲ ವಾರ್ಡಿಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಕ್ಯಾನ್ಸರ್ ಪೀಡಿತ ಬಾಲಕ ಧನುಷ್ ರೋಜಾ ಹೂ ಕೊಟ್ಟು‌ ಸ್ವಾಗತಿಸಿದರು. ‘ಯಾವೂರು’ ಎಂದು ಮುಖ್ಯಮಂತ್ರಿಗಳು ಕೇಳಿದಾಗ, ‘ಮಾಗಡಿ’ ಎಂದ ಮಗು ಆದ್ರ ಧ್ವನಿ ಕೇಳಿದ ಶಿವಕುಮಾರ್ ಅವರು, ’ಓಹೋ ಕೆಂಪೇಗೌಡರ ಊರು. ಧನುಷ್ ಅಂದರೆ ಏನು ಗೊತ್ತಾ? ಬಾಣ ಹೊಡೀತೀಯ? ನಿನಗೆ ಏನು ಆಗಲ್ಲ‌ ಎಂದು ಧೈರ್ಯ ತುಂಬಿದರು.

ರಕ್ತದ ಕ್ಯಾನ್ಸರ್ ನಿಂದ ನರಳುತ್ತಿದ್ದ ಶಾಹಪುರದ ಭವ್ಯಳ ತಲೆ‌ಸವರಿ, ಸರಿಹೋಗುತ್ತದೆ. ಭಯ ಬೇಡ ಎಂದು ಸಮಾಧಾನ ಮಾಡಿದರೆ, ತಾಯಿ ಸಂಗೀತಾಗೆ, ಗೃಹಜ್ಯೋತಿ, ಗೃಹಲಕ್ಷೀ ಸೌಲಭ್ಯಗಳು ಸಿಗುತ್ತಿದೆಯಾ ಎಂದು ವಿಚಾರಿಸಿದರು. ಕನಕಪುರದ ಋತ್ವಿಕ್ ಅವರ ತಾಯಿಯ ಅಚಾನಕ್ ಆಗಿ ಬದಲಾಗಿದ್ದ ಎಪಿಎಲ್ ಕಾರ್ಡನ್ನು ಬಿಪಿಎಲ್ ಗೆ ತಕ್ಷಣ ಬದಲಾಯಿಸಿ‌ಕೊಡಿ ಎಂದು ಸ್ಥಳದಲ್ಲೇ ಸೂಚಿಸಿದರು.

ಸಿಎಂ ಜತೆ ಲವಲವಿಕೆಯಿಂದ ಬೆರೆತ ಮಕ್ಕಳು:

ಕರ್ಪೂರ್‌ ವಾರ್ಡ್‌ನಲ್ಲಿ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟ ಬಾಲಕನಿಗೆ ಏನಪ್ಪ‌ ಯಾವೂರು‌? ಅಂದು ಮುಖ್ಯಮಂತ್ರಿ ಕೇಳಿದಾಗ, ‘ಹೊಸೂರು, ಹೆಸರು ಪಾರ್ಥಸಾರಥಿ’ ಅಂದ‌. ಓಹೋ, ಪಾರ್ಥ ಅಂದರೆ ಏನು ಗೊತ್ತಾ? ಅರ್ಜುನ. ನೀನು ಅರ್ಜುನ. ನಿನಗೆ ಏನೂ ಆಗೋಲ್ಲ. ಶಾಲೆಗೆ ಹೋಗಿ, ಚೆನ್ನಾಗಿ ಓದು. ತಲೆ ಕಡಿಸಿಕೊಳ್ಳಬೇಡ ಎಂದು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹುಡುಗನಿಗೆ ಧೈರ್ಯ ತುಂಬಿದರು. ಚಿಕಿತ್ಸೆ ಪಡೆಯುತ್ತಿರುವ ಎಲ್ಲ‌ ಮಕ್ಕಳಿಗೆ ಶುಭಾಶಯ ಹೇಳಿ, ಹೃದಯ ತುಂಬಿ ಹರಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಸಾರ್ಥಕಗೊಳಿಸಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ಡಾ.ಆರ್‌.ಕೃಷ್ಣಪ್ಪ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಸಿನ್, ವೈದ್ಯಕೀಯ ಅಧೀಕ್ಷಕಿ ಡಾ.ಶೋಭಾ, ನಿವಾಸಿ ವೈದ್ಯಾಧಿಕಾರಿ ಡಾ. ಬಸವರಾಜು ಇದ್ದರು.

ಪ್ರತಿ ಜಿಲ್ಲೆಗೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಗುರಿ:

ದೂರದ ಊರುಗಳಿಂದ ಬಂದು ಸಮಸ್ಯೆ ಅನುಭವಿಸುತ್ತಿರುವ ಮಕ್ಕಳು ಹಾಗೂ ಹೆತ್ತವರ ನೋವು ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಪ್ರತಿ ಜಿಲ್ಲೆಗೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಇದೆ. ಈಗಾಗಲೇ ತುಮಕೂರು, ಬಳ್ಳಾರಿ, ಮೈಸೂರಿನಲ್ಲಿ ನಿರ್ಮಿಸಲಾಗಿದೆ. ಜಿಂದಾಲ್‌, ಕಪೂರ್‌, ಇನ್ಫೋಸಿಸ್‌ ಇಂತಹ ದಾನಿಗಳ ಸಹಾಯದಿಂದ ಹಲವು ಕಟ್ಟಡಗಳು ಆಸ್ಪತ್ರೆಯಲ್ಲಿ ನಿರ್ಮಾಣವಾಗಿದೆ. ಉಳಿದ ಕಡೆಗಳಲ್ಲೂ ಮಾಡುತ್ತೇವೆ ಎಂದು ಭರವಸೆ ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸ್ಥಿರಾಸ್ತಿ ಮಾರ್ಗಸೂಚಿ ದರ ಶೇ.35 ಪರಿಷ್ಕರಣೆಗೆ ಸಿದ್ಧತೆ?
319 ಕೆಎಎಸ್‌ ಹುದ್ದೆಗೆ ಇಂದು ಕೆಪಿಎಸ್ಸಿ ಪರೀಕ್ಷೆ