;Resize=(412,232))
ಬೆಂಗಳೂರು : ಮುಂಗಾರು ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಗರಕ್ಕೆ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆಗೆ ಈಗಿನಿಂದಲೇ ನೀರು ಉಳಿತಾಯ ಕ್ರಮಗಳನ್ನು ಅನುಸರಿಸಲು ಕರೆ ನೀಡಿರುವ ಬೆಂಗಳೂರು ಜಲಮಂಡಳಿ, ವಾಹನ ತೊಳೆಯಲು, ಈಜು ಕೊಳಗಳಲ್ಲಿ ಕುಡಿಯುವ ನೀರು ಬಳಸುವುದನ್ನು ನಿಷೇಧಿಸಿದೆ.
ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ಹೋಟೆಲ್‌ಗಳು, ಕೈಗಾರಿಕೆಗಳು ಸೇರಿದಂತೆ ಎಲ್ಲಾ ಕಟ್ಟಡಗಳಲ್ಲಿ ವಾಟರ್ ಫ್ಲೋ ರೆಸ್ಟ್ರಿಕ್ಟರ್, ಏರೇಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಏರೇಟರ್ ಅಳವಡಿಕೆಯಿಂದ ನೀರಿನ ಬಳಕೆಯನ್ನು ಶೇ.30 ರಿಂದ 50ರವರೆಗೆ ಕಡಿಮೆ ಮಾಡಬಹುದಾಗಿದ್ದು, ನೀರಿನ ಬಳಕೆಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಜಲಮಂಡಳಿ ಅಧ್ಯಕ್ಷೆ ಡಾ.ಮಂಜುಳಾ ತಿಳಿಸಿದ್ದಾರೆ.
ಇನ್ನು ವಾಹನ ತೊಳೆಯುವುದು, ಉದ್ಯಾನಗಳಿಗೆ ನೀರು ಹಾಯಿಸುವುದು, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಸ್ವಚ್ಛಗೊಳಿಸುವುದು, ಕಟ್ಟಡ ನಿರ್ಮಾಣ ಕಾಮಗಾರಿಗಳು ಸೇರಿದಂತೆ ಇನ್ನಿತರ ಉದ್ದೇಶಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಡ್ಡಾಯವಾಗಿ ಸಂಸ್ಕರಿತ ನೀರನ್ನೇ ಬಳಸಬೇಕು ಎಂದು ಡಾ. ಮಂಜುಳ ತಿಳಿಸಿದ್ದಾರೆ.
ಈಜುಕೊಳಗಳಿಗೆ ಕುಡಿಯುವ ನೀರು ಬಳುವಂತಿಲ್ಲ: ನಗರದಲ್ಲಿನ ಖಾಸಗಿ ಹಾಗೂ ಸಾರ್ವಜನಿಕ ಈಜುಕೊಳಗಳಲ್ಲಿ ಕುಡಿಯುವ ನೀರು ಬಳಸುವಂತಿಲ್ಲ. ಸಂಸ್ಕರಿತ ನೀರು ಅಥವಾ ಇತರೆ ಪರ್ಯಾಯ ಮೂಲಗಳಿಂದಲೇ ಬಳಸಬೇಕು. ಈ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಜಲಮಂಡಳಿ ಸರಬರಾಜು ಮಾಡುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.50 ರವರೆಗೆ ಕಡಿತಗೊಳಿಸಿ ₹5,000 ದಂಡ ವಿಧಿಸಲಾಗುತ್ತದೆ. ಉಲ್ಲಂಘನೆ ಮುಂದುವರಿದಲ್ಲಿ ಪ್ರತಿದಿನ ₹500 ಹೆಚ್ಚುವರಿ ದಂಡ ವಿಧಿಸುವುದರ ಜೊತೆಗೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ಎಚ್ಚರಿಸಿದೆ.
ಏರೇಟರ್ ಅಳವಡಿಸಿ, ಕುಡಿಯುವ ನೀರಿನ ದುರ್ಬಳಕೆಯನ್ನು ತಪ್ಪಿಸಲು ಉದ್ದೇಶಿಸಲಾಗಿದೆ. ನಾಗರಿಕರ ಸಹಭಾಗಿತ್ವದಿಂದಲೇ ಬೆಂಗಳೂರಿನ ನೀರಿನ ಭವಿಷ್ಯವನ್ನು ಇನ್ನಷ್ಟು ಸುರಕ್ಷಿತಗೊಳಿಸಲು ಸಾಧ್ಯ. ಸಾರ್ವಜನಿಕರು, ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಜಲಮಂಡಳಿ ಜೊತೆ ಕೈಜೋಡಿಸಬೇಕು ಜಲಮಂಡಳಿ ಅಧ್ಯಕ್ಷೆ ಡಾ. ಮಂಜುಳ ಮನವಿ ಮಾಡಿದ್ದಾರೆ.
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮಿತ ಬಳಕೆಗಾಗಿ ಐಐಎಸ್ಸ್‌ಸಿ ನೀಡಿರುವ ವರದಿ ಅನ್ವಯ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ನೀರು ಉಳಿತಾಯಕ್ಕೆ ಜನರು ಕೈಜೋಡಿಸಬೇಕು.