ಕೆಎಂಎಫ್‌ ಉತ್ಪನ್ನಗಳು ವಿಷ ಎಂದ ವೈದ್ಯೆಗೆ ತಪರಾಕಿ

Published : Jun 23, 2026, 08:11 AM IST
KMF and Doctor Sharanya Padma

ಸಾರಾಂಶ

ನಂದಿನಿ ಹಾಲು ಹಾಗೂ ಉತ್ಪನ್ನಗಳ ಬಗ್ಗೆ ಅಪಪ್ರಚಾರದ ರೀಲ್ಸ್‌ ಮಾಡಿ ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದ ನಗರದ ವೈದ್ಯೆ ಶರಣ್ಯ ಪದ್ಮ ವಿರುದ್ಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹೈಕೋರ್ಟ್

 ಬೆಂಗಳೂರು :  ನಂದಿನಿ ಹಾಲು ಹಾಗೂ ಉತ್ಪನ್ನಗಳ ಬಗ್ಗೆ ಅಪಪ್ರಚಾರದ ರೀಲ್ಸ್‌ ಮಾಡಿ ಇನ್‌ಸ್ಟಾಗ್ರಾಂ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡಿದ್ದ ನಗರದ ವೈದ್ಯೆ ಶರಣ್ಯ ಪದ್ಮ ವಿರುದ್ಧ ಮಲ್ಲೇಶ್ವರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಹೈಕೋರ್ಟ್, ವೈದ್ಯೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣದ ಕುರಿತ ಎಫ್‌ಐಆರ್‌ ಹಾಗೂ 32ನೇ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ರದ್ದುಪಡಿಸುವಂತೆ ಕೋರಿ ಡಾ. ಶರಣ್ಯ ಪದ್ಮ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ವಿರುದ್ಧದ ಎಫ್ಐಆರ್‌ಗೆ ತಡೆ ನೀಡಲು ನಿರಾಕರಿಸಿತು.

ಅರ್ಜಿದಾರ ಪರ ವಕೀಲರನ್ನು ಉದ್ದೇಶಿಸಿ, ಅರ್ಜಿದಾರರು ಹಾಲು ಪರೀಕ್ಷೆ ಮಾಡಿದ್ದಾರಾ? ಅವರು ಹೇಗೆ ನಂದಿನಿ ಹಾಲು ವಿಷಪೂರಿತವಾಗಿದೆ ಎಂದು ಹೇಳಿದ್ದಾರೆ? ಹಾಗೆ ಹೇಳಿ ಏಕೆ ಜನರಲ್ಲಿ ಆತಂಕ ಮೂಡಿಸಿದ್ದಾರೆ? ಅರ್ಜಿದಾರರು ಹಾಲು ಪರೀಕ್ಷೆ ಮಾಡಿ, ದೃಢೀಕರಣವನ್ನು ಮಾಡಿದ್ದಾರಾ? ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿಕೊಟ್ಟಿದ್ದೀರಾ? ಇನ್‌ಸ್ಟಾಗ್ರಾಂ ಇರುವುದು ಇಂತಹ ಕೆಲಸ ಮಾಡುವುದಕ್ಕಾಗಿಯೇ? ಹಾಲು ಚೆನ್ನಾಗಿಲ್ಲ‌ ಅಂದ್ರೆ ಅರ್ಜಿದಾರರು ಕುಡಿಯಬೇಡಿ. ನಿಮಗಿಷ್ಟವಿಲ್ಲದಿದ್ದರೆ ಸುವಾಸಿತ ಹಾಲನ್ನೂ ಕುಡಿಯಬೇಡಿ. ಆದರೆ ಇಂತಹ ಅಪಪ್ರಚಾರದ ಕೆಲಸ ಏಕೆ ಮಾಡುತ್ತೀರಾ? ಜನರಿಗೆ ಏಕೆ ತಪ್ಪು ಮಾಹಿತಿ ಕೊಡುತ್ತೀರಾ ಎಂದು ಖಾರವಾಗಿ ಪ್ರಶ್ನಿಸಿತು.

ತದನಂತರ ಅರ್ಜಿದಾರರ ವಿರುದ್ಧದ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಅರ್ಜಿ ಸಂಬಂಧ ಸರ್ಕಾರ ಹಾಗೂ ಕೆಎಂಎಫ್‌ ನಿರ್ದೇಶಕಿಯೂ ಆಗಿರುವ ದೂರುದಾರೆ ಆರ್‌.ಪದ್ಮಾವತಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಪ್ರಕರಣದ ವಿವರ:

ಖಾಸಗಿ ಆಸ್ಪತ್ರೆಯೊಂದರಲ್ಲಿ ಚರ್ಮರೋಗ ತಜ್ಞೆಯಾಗಿರುವ ಶರಣ್ಯ 2026ರ ಫೆ.8ರಂದು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್‌ ಮೂಲಕ ನಂದಿನಿ ಹಾಲಿನ ಉತ್ಪನ್ನಗಳ ಬಗ್ಗೆ ಅಪಪ್ರಚಾರ ಮಾಡಿದ್ದರು. ಆಕೆ, ನಂದಿನಿ ಉತ್ಪನ್ನಗಳಾದ ಕ್ರೀಮ್‌ ಬನ್‌, ಸ್ಟ್ರಾಬೆರಿ ಫ್ಲೇವರ್ಡ್‌ ಮಿಲ್ಕ್‌ ಹಾಗೂ ಸ್ಪ್ಲಾಶ್‌ ಪಾನೀಯ ಉತ್ಪನ್ನಗಳು ವಿಷಕಾರಿ ಹಾಗೂ ರಾಸಾಯನಿಕಯುಕ್ತವಾಗಿವೆ. ದೀರ್ಘಾವಧಿಯಲ್ಲಿ ಇವುಗಳ ಸೇವನೆಯಿಂದ ಭವಿಷ್ಯದಲ್ಲಿ ಕ್ಯಾನ್ಸರ್‌ ಬರಲಿದೆ. ಈ ಉತ್ಪನ್ನಗಳನ್ನು ಕೃತಕ ಬಣ್ಣ ಬೆರೆಸಿ ತಯಾರಿಸಿದ್ದಾರೆ. ಎಫ್‌ಎಸ್‌ಎಸ್‌ಎಐ ನಂದಿನಿ ಉತ್ಪನ್ನಗಳ ತಯಾರಿಕೆಗೆ ಹೇಗೆ ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು.

ಕೆಎಂಎಫ್‌ ಸರ್ಕಾರಿ ಸ್ವಾಮ್ಯದ್ದಾಗಿದ್ದು, ಉತ್ಪನ್ನಗಳ ಉತ್ಪಾದನೆ ಹಾಗೂ ಮಾರ್ಕೆಟಿಂಗ್‌ ಮಾಡಿ ಲಾಭ ಮಾಡುತ್ತಿರುವ ಬಗ್ಗೆ ಭ್ರಮೆಯಲ್ಲಿ ಸರಕಾರವಿದೆ. ಹೀಗಾಗಿ ಕೆಎಂಎಫ್‌ ರೀತಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಬಾರದು ಎಂದು ಹೇಳಿದ್ದರು. ಆ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

ಕೆಎಂಎಫ್‌ ಸ್ಪಷ್ಟನೆ:

ನಂದಿನಿ ಉತ್ಪನ್ನಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿದ ಎಲ್ಲ ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಈವರೆಗೂ ಕೆಎಂಎಫ್‌ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಕೆಎಂಎಫ್‌ ಸ್ಪಷ್ಟನೆ ನೀಡಿತ್ತು. ನಂತರ ಕೆಎಂಎಫ್‌ ನಿರ್ದೇಶಕಿ ಆರ್‌.ಪದ್ಮಾವತಿ ಅವರು, ಶರಣ್ಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆ ದೂರು ಆಧರಿಸಿ ಬಿಎನ್‌ಎಸ್‌ ಕಾಯ್ದೆ ಸೆಕ್ಷನ್ 353 (1) ಬಿ ಪ್ರಕಾರ ಸುಳ್ಳು ಮಾಹಿತಿ ಪ್ರಕರಣದಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ದೂರ ಮಾರ್ಗಗಳ ಪ್ರಯಾಣಿಕರಿಗೆ ಬಿಎಂಟಿಸಿ ಸಾಮಾನ್ಯ ವಿಸ್ತಾರ ಪಾಸ್‌ ಪರಿಚಯ
ನಾಗಸಾಧು ಸೋಗಲ್ಲಿ ಬಂದು ವಾಸ್ತು ಶಿಲ್ಪಿಯಿಂದ ಚಿನ್ನದ ಉಂಗುರ ಎಗರಿಸಿ ಪರಾರಿ