ಬರ: ತಮ್ಮ ತಾಲೂಕು ಸೇರಿಸದ್ದಕ್ಕೆ ಹಲವೆಡೆ ಪ್ರತಿಭಟನೆ

Published : Aug 29, 2026, 07:54 AM IST
Why Drought Happens

ಸಾರಾಂಶ

ರಾಜ್ಯ ಸರ್ಕಾರವು ಆ.27ರಂದು ಬರ ಪಟ್ಟಿ ಘೋಷಣೆ ಮಾಡಿದ ಬೆನ್ನಲ್ಲೇ ರೈತರು, ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. ಮಳೆ ಇಲ್ಲದೆ ಬರದಿಂದಾಗಿ ತತ್ತರಿಸುತ್ತಿದ್ದರೂ ತಮ್ಮ ತಾಲೂಕುಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ತೀವ್ರ ಅಸಮಾಧಾನ

ಬೆಂಗಳೂರು : ರಾಜ್ಯ ಸರ್ಕಾರವು ಆ.27ರಂದು ಬರ ಪಟ್ಟಿ ಘೋಷಣೆ ಮಾಡಿದ ಬೆನ್ನಲ್ಲೇ ರೈತರು, ಸಂಘಟನೆಗಳು, ರಾಜಕೀಯ ಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. ಮಳೆ ಇಲ್ಲದೆ ಬರದಿಂದಾಗಿ ತತ್ತರಿಸುತ್ತಿದ್ದರೂ ತಮ್ಮ ತಾಲೂಕುಗಳನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾವಣಗೆರೆ, ಕಲಬುರಗಿ, ಯಾದಗಿರಿ, ಕೊಪ್ಪಳ ಜಿಲ್ಲೆಗಳ ವಿವಿಧೆಡೆ ರೈತರು, ಸಂಘಟನೆಗಳು, ಬಿಜೆಪಿ ಪ್ರತಿಭಟನೆ ನಡೆಸಿವೆ. ಬೀದರ್‌ನಲ್ಲಿ ರೈತರು ಇಡೀ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕಲಬುರಗಿಯಲ್ಲಿ ಉಗ್ರ ಹೋರಾಟ ನಡೆಸಿದ ರೈತ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ರಣ ಬಿಸಿಲಲ್ಲೇ ರಸ್ತೆ ಮೇಲೆ ಅರೆ ಬೆತ್ತಲೇ ಮಲಗಿ ತಮ್ಮ ಅಸಮಾಧಾನ ಹೊರಹಾಕಿದರು. ರಾಜ್ಯ ಹಾಗೂ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಹಿಡಿಶಾಪ ಹಾಕಿದರು. ಈ ವೇಳೆ ಸಂಚಾರಕ್ಕೆ ಅಡಚಣೆಯಾಗಿತ್ತು. ಮದ್ಯಪ್ರವೇಶಿಸಿದ ಪೊಲೀಸರು ರಸ್ತೆಮೇಲೆ ಹೊರಗಡೆ ಮಲಗದೆ ಡೀಸಿ ಕಚೇರಿ ಪ್ರಾಂಗಣಕ್ಕೆ ತೆರಳಿ ಹೋರಾಟ ಮಾಡುಂತೆ ಮನವೊಲಿಸಲು ಯತ್ನಿಸಿದರೂ ರೈತರು ರಸ್ತೆತಡೆ ಮುಂದುರಿಸಿದಾಗ ಕೆಲವು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ರೈತರು ಆಕ್ರೋಶ

ಯಾದಗಿರಿ ಜಿಲ್ಲೆಯಲ್ಲಿ ಕೇವಲ ಶಹಾಪುರ ತಾಲೂಕನ್ನು ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಿ ಉಳಿದ ಜಿಲ್ಲೆಗಳನ್ನು ಪಟ್ಟಿಯಲ್ಲಿ ಸೇರಿಸದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಡಗೇರಾದಲ್ಲಿ ಸರ್ಕಾರದ ಕ್ರಮ ಖಂಡಿಸಿ ಕರವೇ ಪ್ರತಿಭಟನೆ ನಡೆಸಿತು.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕನ್ನೇ ಬರ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ​ತಹಸೀಲ್ದಾರ್ ಕಚೇರಿ ಆವರಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಂಡಿತ್ತು. ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮ ಗಾಂಧಿ ಮಾರ್ಗವಾಗಿ ಸಾಗಿದ ನೂರಾರು ಕಾರ್ಯಕರ್ತರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ ಬರಪೀಡಿತ ಎಂದು ಘೋಷಿಸದ ಹಿನ್ನೆಲೆ ದಿಢೀರ್‌ ಪ್ರತಿಭಟನೆ

ಕೊಪ್ಪಳ ಬರಪೀಡಿತ ಎಂದು ಘೋಷಿಸದ ಹಿನ್ನೆಲೆಯಲ್ಲಿ ಬೆಟಗೇರಿಯಲ್ಲಿ ರೈತರು ದಿಢೀರ್‌ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬೀದರ್‌ ಜಿಲ್ಲೆಯ ಎಲ್ಲ ತಾಲೂಕುಗಳು ಸಂಪೂರ್ಣ ಬರಪೀಡಿತ ಎಂದು ಘೋಷಿಸಿ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಜತೆಗೆ ಕಾರ್ಖಾನೆಗೆ ಕಬ್ಬು ಸಾಗಿಸುವ ರೈತರ ಪ್ರತಿ ಟನ್ ಕಬ್ಬಿಗೆ ₹5 ಸಾವಿರ ಘೋಷಣೆ ಮಾಡಬೇಕು ಎಂದು ಜಿಲ್ಲಾ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಿಗಮ ಮಂಡಳಿ ಸ್ಥಾನಕ್ಕಾಗಿ ಇಂದು 10 ಶಾಸಕರು ದಿಲ್ಲಿಗೆ
ರಾಜ್ಯದಲ್ಲಿ ಶಿಕ್ಷಣ, ಪರೀಕ್ಷೆಯ ವ್ಯವಸ್ಥೆ ಸುಧಾರಣೆಗೆ ಸಮಿತಿ