;Resize=(412,232))
ಬೆಂಗಳೂರು : ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯಿಂದ ಸಮಸ್ಯೆಗೊಳಗಾಗಿರುವ ರೈತರಿಗೆ ಗರಿಷ್ಠ 5 ಸಾವಿರ ರು. ಬರ ಪರಿಹಾರ (ಇನ್‌ಪುಟ್ ಸಬ್ಸಿಟಿ) ನೀಡಲು ಸರ್ಕಾರ ನಿರ್ಧರಿಸಿದ್ದು, ಅದರ ಮೊದಲ ಕಂತಿನ 2500 ರು.ಗಳನ್ನು ಪಾವತಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ಯಾದಗಿರಿ ಜಿಲ್ಲೆಯ 1.06 ಲಕ್ಷ ರೈತರಿಗೆ ಮೊದಲ ಕಂತಿನ ತಲಾ 2500 ರು.ನಂತೆ ಒಟ್ಟು 17.43 ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಿದರು. ಆಮೂಲಕ ರಾಜ್ಯದ ಬರ ಪೀಡಿತ 226 ತಾಲೂಕುಗಳ ರೈತರಿಗೆ ಮೊದಲ ಕಂತಿನ ಬರ ಪರಿಹಾರ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬರ ಪೀಡಿತ ತಾಲೂಕುಗಳ ರೈತರಿಗೆ ತಲಾ 5 ಸಾವಿರ ರು. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಅದರ ಮೊದಲ ಕಂತಿನ ರೂಪದಲ್ಲಿ 2500 ರು.ಅನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಹಣವನ್ನೂ ಬಿಡುಗಡೆ ಮಾಡಲಾಗುವುದು. ಪ್ರಾಯೋಗಿಕವಾಗಿ ಯಾದಗಿರಿ ಜಿಲ್ಲೆಯ ರೈತರ ಬರ ಪರಿಹಾರ ಹಣ ಪಾವತಿಸಲಾಗಿದೆ ಎಂದರು.
ಉತ್ತರ ಕನ್ನಡ, ಕೋಲಾರ, ಕೊಪ್ಪಳ, ಚಾಮರಾಜನಗರ, ಧಾರವಾಡ, ಬಳ್ಳಾರಿ, ಬೀದರ್, ಬೆಂಗಳೂರು ನಗರ, ಹಾವೇರಿ, ಬೆಂಗಳೂರು ದಕ್ಷಿಣ ಸೇರಿ 15 ಜಿಲ್ಲೆಗಳಿಗೆ ಬರ ಪರಿಹಾರ ಪಾವತಿ ಕಡತಗಳ ತಯಾರಿಕೆ ಪ್ರಕ್ರಿಯೆಯಲ್ಲಿದೆ. ಎಲ್ಲ ಜಿಲ್ಲೆಗಳಲ್ಲಿನ ಅರ್ಹ ರೈತರಿಗೆ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿ ಶೀಘ್ರ ವಿತರಿಸಲಾಗುವುದು. ಮುಂದಿನ 15ರಿಂದ 20 ದಿನಗಳಲ್ಲಿ 2ನೇ ಕಂತಿನ ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.
ಜಂಟಿ ಬೆಲೆ ಹಾನಿ ಮೌಲ್ಯಮಾಪನ ವರದಿ ಪ್ರಕಾರ ರಾಜ್ಯದಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ. ಈ ವಿಪತ್ತಿನಿಂದ ರೈತರು ಕಂಗೆಟ್ಟಿದ್ದಾರೆ. 226 ತಾಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡುವ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ಮಾಡಲಾಗಿದೆ. ಯಾರ ಒತ್ತಡಕ್ಕೂ ಮಣಿಯದೇ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ. ಕಾನೂನು ಪ್ರಕಾರವೇ ಕಂದಾಯ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ಅವರ ಅನುಮೋದನೆ ಪಡೆದು ನಾನು ಬರಪೀಡಿತ ತಾಲೂಕು ಘೋಷಣೆ ಮಾಡಿದ್ದೇನೆ ಎಂದರು.
ಬರಗಾಲದಿಂದ ರಾಜ್ಯದಲ್ಲಿ 62 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ. ರೈತರಿಗೆ ಬೆಳೆ ಪರಿಹಾರವಾಗಿ 2 ಸಾವಿರ ರು. ಒದಗಿಸುವುದಾಗಿ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದು, ಕೇಂದ್ರದಿಂದ 22,400 ಕೋಟಿ ರು. ಪರಿಹಾರ ಒದಗಿಸಲು ಕೋರಲಾಗಿದೆ. ಈ ಸಂಬಂಧ ಪ್ರಧಾನಿ ಅವರನ್ನೂ ಭೇಟಿಗೆ ನಿರ್ಧರಿಸಲಾಗಿದ್ದು, ಅದಕ್ಕಾಗಿ ಸಮಯ ಕೇಳಿದ್ದೇವೆ. ಸರ್ವ ಪಕ್ಷ ನಿಯೋಗ ಕರೆತರುವುದಾಗಿಯೂ ತಿಳಿಸಿದ್ದೇವೆ. ಸರ್ವ ಪಕ್ಷದವರನ್ನು ನಮ್ಮ ಜತೆ ಬಂದು ಕೇಂದ್ರದ ಮೇಲೆ ಒತ್ತಡ ಹಾಕಲೂ ಕೋರಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ 57 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ರಾಜಸ್ಥಾನ ಹೊರತುಪಡಿಸಿ ದೇಶದಲ್ಲಿ ಅತಿಹೆಚ್ಚು ಒಣಭೂಮಿ ಇರುವ ಪ್ರದೇಶ ಕರ್ನಾಟಕವಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿದೆ. ರೈತರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಅದಕ್ಕಾಗಿ 20 ಸಾವಿರ ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಬರಗಾಲದಿಂದಾಗಿ ವಿದ್ಯುತ್ ಬಳಕೆ ಹೆಚ್ಚಾಗಿದ್ದು ಹಣ ನೀಡಿದರೂ ವಿದ್ಯುತ್ ದೊರಕದ ಪರಿಸ್ಥಿತಿ ಎದುರಾಗಿದೆ ಎಂದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಜೂ.1ರಿಂದ ಸೆ.30ರ ಅವಧಿಯಲ್ಲಿ ವಾಡಿಕೆಯಂತೆ 852 ಮಿಮೀ ಮಳೆಯಾಗಬೇಕಿತ್ತು. ಆದರೆ, ಕೇವಲ 551 ಮಿ.ಮೀ. ಮಳೆಯಾಗಿದ್ದು, ಶೇ. 35ರಷ್ಟು ಮಳೆ ಕೊರತೆ ದಾಖಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.41, ಉತ್ತರ ಒಳನಾಡಿನಲ್ಲಿ ಶೇ.42, ಮಲೆನಾಡಿನಲ್ಲಿ ಶೇ. 38 ಹಾಗೂ ಕರಾವಳಿ ಕರ್ನಾಟಕದಲ್ಲಿ ಶೇ. 28ರಷ್ಟು ಮಳೆ ಕೊರತೆ ಕಂಡುಬಂದಿದೆ. ರಾಜ್ಯದಲ್ಲಿ 84.10 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ 69.57 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿತ್ತು. ಅದರಲ್ಲಿ 57.93 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ 22400 ಕೋಟಿ ರು. ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಈ ಮೊತ್ತದಲ್ಲಿ ಬೆಳೆಹಾನಿ ಇನ್‌ಪುಟ್ ಸಬ್ಸಿಡಿಗಾಗಿ 7943.55 ಕೋಟಿ ರು., ಕುಡಿಯುವ ನೀರಿನ ವ್ಯವಸ್ಥೆಗಾಗಿ 1727 ಕೋಟಿ ರು., ಜಾನುವಾರುಗಳ ರಕ್ಷಣೆಗಾಗಿ 583.04 ಕೋಟಿ ರು. ಹಾಗೂ 61.91 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಗ್ರಹ ಪರಿಹಾರಕ್ಕಾಗಿ 12146.99 ಕೋಟಿ ರು. ವ್ಯಯಿಸಲಾಗುವುದು ಎಂದು ವಿವರಿಸಿದರು.
- ಬರಪರಿಹಾರ ಮೊತ್ತ ₹2500 ನಿಂದ 5000 ರು.ಗೆ ಏರಿಕೆ
- ಮೊದಲ ಕಂತಿನ 2,500 ರು. ಪಾವತಿ ಪ್ರಕ್ರಿಯೆ ಆರಂಭ
- ಯಾದಗಿರಿ ಜಿಲ್ಲೆಯ 1.06 ಲಕ್ಷ ರೈತರಿಗೆ ಹಣ ಬಿಡುಗಡೆ
- 17.43 ಕೋಟಿ ಪರಿಹಾರ ಬಿಡುಗಡೆ ಮಾಡಿದ ಸಿಎಂ ಡಿಕೆ