ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು

Published : Aug 09, 2025, 11:42 AM IST
Vidhan soudha

ಸಾರಾಂಶ

ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಸಂಪುಟಗಳ 2,197 ಪುಟಗಳ ಶಿಕ್ಷಣ ನೀತಿಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗ ಶುಕ್ರವಾರ ಸಲ್ಲಿಸಿತು.

ಬೆಂಗಳೂರು :  ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ನೀತಿಯನ್ನು (ಕನ್ನಡ/ಮಾತೃಭಾಷೆ + ಇಂಗ್ಲಿಷ್) ಅನುಷ್ಠಾನಗೊಳಿಸಬೇಕು, ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮೀಸಲಾತಿ ನಿಯಮ ಅನ್ವಯಿಸಬೇಕು ಎಂಬುದು ಸೇರಿ ಹಲವು ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಪ್ರೊ.ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ ಎರಡು ಸಂಪುಟಗಳ 2,197 ಪುಟಗಳ ಶಿಕ್ಷಣ ನೀತಿಯ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗ ಶುಕ್ರವಾರ ಸಲ್ಲಿಸಿತು.

ವರದಿಯಲ್ಲಿ ದ್ವಿಭಾಷಾ ನೀತಿ ಅನುಷ್ಠಾನ, ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು, ಶಾಲಾ ಶಿಕ್ಷಣದಲ್ಲಿ 2+8+4 ರಚನೆ (ಪೂರ್ವ ಪ್ರಾಥಮಿಕ- 2 ವರ್ಷ, ಪ್ರಾಥಮಿಕ- 8 ವರ್ಷ ಮತ್ತು ಮಾಧ್ಯಮಿಕ ಶಿಕ್ಷಣ- 4 ವರ್ಷ) ಅಳವಡಿಕೆ, ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸುವುದು, ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳ ಸ್ಥಾಪಿಸುವುದು ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪ್ರಾಥಮಿಕ ಶಾಲೆಗಳಲ್ಲಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ.

ಶಿಕ್ಷಣ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ಹಾಲಿ ಇರುವ ಅನುದಾನ ಪ್ರಮಾಣ ಶೇ.14ರಿಂದ ಶೇ.25-30ಕ್ಕೆ ಮರುಹಂಚಿಕೆ ಮಾಡಬೇಕು. ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಪರಿಗಣಿಸಬೇಕು. ಪದವಿಪೂರ್ವ ಕಾರ್ಯಕ್ರಮಗಳಲ್ಲಿ ಸಮಗ್ರ ಲೈಂಗಿಕ ಶಿಕ್ಷಣವನ್ನು ಪರಿಚಯಿಸಬೇಕು. ಖಾಸಗಿ ಸಂಸ್ಥೆಗಳಲ್ಲಿ ಶುಲ್ಕ ನಿಯಂತ್ರಣಕ್ಕೆ ಶಾಶ್ವತ ನಿಯಂತ್ರಣ ವ್ಯವಸ್ಥೆ ಸ್ಥಾಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಈ ವರದಿಯನ್ನು ರಾಜ್ಯ ಸರ್ಕಾರದ ಸಚಿವರಿಗೆ ಅಧ್ಯಯನಕ್ಕಾಗಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಡೆಸಲಾಗುವ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಮಂಡಿಸಿ ಚರ್ಚಿಸಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ವರದಿ ಸ್ವೀಕಾರದ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷಣ ನೀತಿ ಆಯೋಗದಲ್ಲಿನ ಸದಸ್ಯರು ಉಪಸ್ಥಿತರಿದ್ದರು.

ಎರಡು ವರ್ಷದ ಅಧ್ಯಯನ:

ರಾಜ್ಯ ಸರ್ಕಾರ 2023ರ ಅಕ್ಟೋಬರ್ ತಿಂಗಳಲ್ಲಿ ಪ್ರೊ.ಸುಖದೇವ್ ಥೋರಟ್ ಅಧ್ಯಕ್ಷತೆಯ 17 ಸದಸ್ಯರು, 6 ವಿಷಯ ತಜ್ಞರು, ಸಲಹೆಗಾರರು ಮತ್ತು ಒಬ್ಬ ಸದಸ್ಯ ಕಾರ್ಯದರ್ಶಿಯನ್ನು ಒಳಗೊಂಡ ಸಮಿತಿ ರಚಿಸಿತ್ತು.

ಸಮಿತಿ ಸುಮಾರು ಎರಡು ವರ್ಷಗಳ ಕಾಲ ಅಧ್ಯಯನ ನಡೆಸಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ 580 ಪುಟಗಳು, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ 455 ಪುಟಗಳು ಹಾಗೂ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದ 450 ಪುಟಗಳ ವರದಿಯನ್ನು ಸಿದ್ಧಪಡಿಸಿದೆ. ಆಯೋಗವು ಶಾಲಾ ಶಿಕ್ಷಣಕ್ಕೆ 16 ಕಾರ್ಯಪಡೆ, ಉನ್ನತ ಶಿಕ್ಷಣಕ್ಕೆ 16, ಮತ್ತು ವೃತ್ತಿಪರ ಶಿಕ್ಷಣಕ್ಕೆ 3 ಸೇರಿದಂತೆ ಒಟ್ಟು 35 ಕಾರ್ಯಪಡೆಗಳನ್ನು ರಚಿಸಿತ್ತು. ಆಯೋಗದಲ್ಲಿ 379 ವಿಷಯ ತಜ್ಞರು ಇದ್ದರು. ಆಯೋಗದಿಂದ 42 ಸಭೆ ಹಾಗೂ ಕಾರ್ಯಪಡೆಯಿಂದ 132 ಸಭೆಗಳು ಹಾಗೂ 132 ಸಂವಾದಗಳನ್ನು ನಡೆಸಲಾಗಿದೆ.

ತಿಳಿವಳಿಕೆ ಆಧಾರದ ಮೇಲೆ ರಚನೆ-ಆಯೋಗ:

ಆಯೋಗದ ಶಿಫಾರಸುಗಳು ವಾಸ್ತವ ಪರಿಸ್ಥಿತಿಯ ಸಮಗ್ರ ತಿಳಿವಳಿಕೆ ಆಧಾರದ ಮೇಲೆ ರೂಪಿಸಲಾಗಿದೆ. ವ್ಯಾಪಕ ಸಮಾಲೋಚನೆಗಳು, ಶಿಕ್ಷಣ ವಲಯದಿಂದ ಪರಿಶೀಲನೆ, ಪ್ರಾಯೋಗಿಕ ದತ್ತಾಂಶ, ಮಾಹಿತಿ ಮತ್ತು ದಶಕಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಶಿಕ್ಷಣದಲ್ಲಿ ತೊಡಗಿಸಿಕೊಂಡವರ ಅನುಭವ ಆಧಾರದ ಮೇಲೆ ರಚಿಸಲಾಗಿದೆ ಎಂದು ಆಯೋಗ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

ತ್ರಿಭಾಷೆಗೂ ಅವಕಾಶ

ರಾಜ್ಯದ ಮಾನ್ಯತೆ ಪಡೆದ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಯುವುದು ಕಡ್ಡಾಯವಿದೆ. ಹೀಗಾಗಿ, ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ನೂತನ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಹಾಲಿ ಇರುವ ತ್ರಿಭಾಷಾ ಸೂತ್ರಕ್ಕೆ ರಾಜ್ಯ ಶಿಕ್ಷಣ ನೀತಿ ಅವಕಾಶ ಕಲ್ಪಿಸಿದಂತಾಗಿದೆ.

ಆಯೋಗದ ಪ್ರಮುಖ ಶಿಫಾರಸುಗಳು

ಶಾಲಾ ಶಿಕ್ಷಣ:

- 2+8+4 ರಚನೆ ಅಳವಡಿಕೆ: ಪೂರ್ವ ಪ್ರಾಥಮಿಕ- 2 ವರ್ಷ, ಪ್ರಾಥಮಿಕ- 8 ವರ್ಷ ಮತ್ತು ಮಾಧ್ಯಮಿಕ ಶಿಕ್ಷಣ- 4 ವರ್ಷ.

- ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳ ಸ್ಥಾಪನೆ.

- ಮಾಧ್ಯಮಿಕ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕು.

- ಎಲ್ಲ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆ ಬೋಧನಾ ಮಾಧ್ಯಮ ಕಡ್ಡಾಯ

- ದ್ವಿಭಾಷಾ ನೀತಿಯ ಅನುಷ್ಠಾನ: ಕನ್ನಡ/ ಮಾತೃಭಾಷೆ ಮತ್ತು ಇಂಗ್ಲಿಷ್.

- 2 ವರ್ಷಗಳ ಪೂರ್ವ ಪ್ರಾಥಮಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಾಲೆಗಳಲ್ಲೇ ಕಲಿಸಬೇಕು.

- ಪ್ರತ್ಯೇಕ ನಿಯಂತ್ರಣ ಚೌಕಟ್ಟಿನ ಮೂಲಕ ಖಾಸಗಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ನಿಯಂತ್ರಿಸಬೇಕು.

- ಆರ್‌ಟಿಇ ವ್ಯಾಪ್ತಿಯನ್ನು 4-18 ವಯಸ್ಸಿನವರೆಗೆ ವಿಸ್ತರಿಸಬೇಕು.

- ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರಿಯ ವಿದ್ಯಾಲಯಗಳಿಗೆ ಸಮನಾಗಿ ಹೆಚ್ಚಿಸಬೇಕು.

- ಶಾಲಾ ಶಿಕ್ಷಣಕ್ಕಾಗಿ ಸಮಗ್ರ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಬೇಕು.

- ಹೆಚ್ಚಿನ ಖಾಸಗೀಕರಣ ತಡೆಗಟ್ಟಬೇಕು.

- ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆ ರಚಿಸಬೇಕು.

- ಸಾಂವಿಧಾನಿಕ ಮೌಲ್ಯ ಶಿಕ್ಷಣ ಕಡ್ಡಾಯ ವಿಷಯ ಮಾಡಬೇಕು.

ಉನ್ನತ ಶಿಕ್ಷಣ

- ಸಮಯೋಚಿತ ಮತ್ತು ಸಮರ್ಪಕ ನಿಧಿಗಾಗಿ ಸಮಗ್ರ ಹಣಕಾಸು ಚೌಕಟ್ಟು ರಚಿಸಬೇಕು.

- ಶಿಕ್ಷಣಕ್ಕಾಗಿ ಜಿಎಸ್‌ಡಿಪಿಯ ಶೇ.4ರಷ್ಟು ಮತ್ತು 2034-35ರ ವೇಳೆಗೆ ಉನ್ನತ ಶಿಕ್ಷಣಕ್ಕಾಗಿ ಶೇ.1ರಷ್ಟು ವೆಚ್ಚ ಮಾಡಬೇಕು.

-ಉನ್ನತ ಶಿಕ್ಷಣಕ್ಕೆ ಹಾಲಿ ಶೇ.14ರಿಂದ ಶೇ.25ರಿಂದ ಶೇ.30ಕ್ಕೆ ಮರುಹಂಚಿಕೆ ಮಾಡಬೇಕು.

-ಕೆಲವು ಪರೋಕ್ಷ ತೆರಿಗೆಗಳ ಮೇಲೆ ಶಿಕ್ಷಣ ಸರ್ಚಾರ್ಜ್ ಪರಿಗಣಿಸಬೇಕು.

- ಎನ್‌ಇಪಿ-2020 ಪೂರ್ವದ ಪುನಃ ಪ್ರವೇಶ ನೀತಿಯನ್ನು ಮುಂದುವರೆಸಬೇಕು.

-ಕನ್ನಡ/ಮಾತೃಭಾಷೆ ಭಾರತೀಯ/ವಿದೇಶಿ ಭಾಷೆ ಸೇರಿ 2ನೇ ಭಾಷಾ ಕೋರ್ಸ್ ಕಡ್ಡಾಯಗೊಳಿಸಿ.

- 5 ವರ್ಷಗಳ ಸಮಗ್ರ ಪದವಿ-ಸ್ನಾತಕೋತ್ತರ ಪದವಿ ಕಾರ್ಯಕ್ರಮ ನೀಡಬೇಕು.

- ಎಂ.ಎಲ್, ಎಐ+ ಎಕ್ಸ್‌, ಆರೋಗ್ಯ, ಕೃಷಿ, ಕಾನೂನಿನಲ್ಲಿ ಸ್ನಾತಕೋತ್ತರ ಕಾರ್ಯಕ್ರಮ ಪರಿಚಯಿಸಬೇಕು.

ವೃತ್ತಿಪರ ಶಿಕ್ಷಣ

- ಶಿಕ್ಷಣದ ಎಲ್ಲ ವಿಭಾಗಗಳಲ್ಲಿ ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್ ಹೆಚ್ಚಿಸಬೇಕು.

- ವಿವಿಧ ವೃತ್ತಿಪರ ವಿಭಾಗಗಳಲ್ಲಿ, ಗ್ರಾಮೀಣ ಮತ್ತು ಕೃಷಿ ಸಂಬಂಧಿತ ಕೋರ್ಸ್‌ಗಳಲ್ಲಿ ಅಲ್ಪಾವಧಿ ಡಿಪ್ಲೋಮಾ ಮತ್ತು ಪ್ರಮಾಣಪತ್ರ ಕೋರ್ಸ್‌ಗೆ ಪ್ರೋತ್ಸಾಹ.

- ಸಾಮಾನ್ಯ ಪದವಿ ಕೋರ್ಸ್‌ಗಳಿಗೆ ಇಂಟರ್ನ್‌ಶಿಪ್ ಸೌಲಭ್ಯ ನೀಡುವಾಗ ಸರ್ಕಾರದಿಂದ ಆರ್ಥಿಕ ನೆರವು ನೀಡಬೇಕು.

- ಎಂಜಿನಿಯರಿಂಗ್‌ನಲ್ಲಿ ಉದ್ಯಮಶೀಲತೆ, ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಒತ್ತು

- ಸುಸ್ಥಿರ ಮತ್ತು ಹಸಿರು ಕೌಶಲ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು

PREV
Read more Articles on

Recommended Stories

ರೈತರಿಗೆ ಸರ್ಕಾರದ ಗುಡ್ ನ್ಯೂಸ್
ಸಂವಿಧಾನ ಪುಸ್ತಕ ಬಿಡದ ರಾಹುಲ್‌ ಗಾಂಧಿ!