ಹುಬ್ಬಳ್ಳಿ - ಧಾರವಾಡಕ್ಕೆ ಯುರೋಪ್‌ ರೀತಿ ಸಾರಿಗೆ : ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ ಯೋಜನೆಗೆ ಒಡಂಬಡಿಕೆ

Published : Apr 13, 2025, 10:28 AM IST
Mangaluru KSRTC

ಸಾರಾಂಶ

ಯುರೋಪಿಯನ್ ರಾಷ್ಟ್ರಗಳಲ್ಲಿರುವಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ (ಇ-ಆರ್‌ಟಿ) ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

 ಬೆಂಗಳೂರು : ಯುರೋಪಿಯನ್ ರಾಷ್ಟ್ರಗಳಲ್ಲಿರುವಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಪ್ರಾಯೋಗಿಕವಾಗಿ ವಿದ್ಯುತ್ ಚಾಲಿತ ಕ್ಷಿಪ್ರ ಸಾರಿಗೆ (ಇ-ಆರ್‌ಟಿ) ವ್ಯವಸ್ಥೆ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ.

ಏಕಕಾಲಕ್ಕೆ 250 ಜನ ಪ್ರಯಾಣಿಸಬಹುದಾದ ಈ ಆಧುನಿಕ ಸಾರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವ ಕುರಿತು 3 ತಿಂಗಳೊಳಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಹುಬ್ಬಳ್ಳಿ-ಧಾರವಾಡದ ನಡುವೆ ಹಾಲಿ ಜಾರಿಯಲ್ಲಿರುವ ಬಿಆರ್‌ಟಿಎಸ್‌ ಬಸ್‌ (ಚಿಗರೆ) ವ್ಯವಸ್ಥೆಗೆ ಕೊನೆಯ ಮೊಳೆ ಹೊಡೆಯಲು ಎಲ್ಲ ಸಿದ್ಧತೆ ಪೂರ್ಣಗೊಂಡಂತಾಗಿದೆ.

ಶನಿವಾರ ತಮ್ಮ ಕಾವೇರಿ ನಿವಾಸದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಯೋಜನೆ ಕುರಿತಾದ ಪ್ರಾತ್ಯಕ್ಷಿಕೆ ವೀಕ್ಷಿಸಿದರು. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸ್ವಿಟ್ಜಲ್ಯಾಂಡ್‌ಗೆ ಭೇಟಿ ನೀಡಿ ಇ-ಆರ್‌ಟಿ ಸಾರಿಗೆ ವ್ಯವಸ್ಥೆ ಕುರಿತು ನಡೆಸಿದ ಅಧ್ಯಯನ ವರದಿ ಕುರಿತು ಮುಖ್ಯಮಂತ್ರಿಯವರಿಗೆ ವಿವರಿಸಿದರು. ಬಳಿಕ ‘ಎಚ್‌ಇಎಸ್‌ಎಸ್‌ ಇಂಡಿಯಾ’ ಮತ್ತು ‘ಎಸ್‌ಎಸ್‌ಬಿ ಎಜಿ’ ಸಂಸ್ಥೆಗಳ ನಡುವೆ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಯಿತು.

ಇದು ಸಂಪೂರ್ಣ ವಿದ್ಯುತ್ ಚಾಲಿತ ಸಾರಿಗೆ ವ್ಯವಸ್ಥೆಯಾಗಿದ್ದು, ಎತ್ತರಿಸಿದ ರಸ್ತೆ ಹಾಗೂ ಸಾಮಾನ್ಯ ರಸ್ತೆಗಳ ಮೇಲೆ ಸಂಚರಿಸಲಿದೆ. ಇದರಲ್ಲಿ ಒಂದು ಸಲಕ್ಕೆ 250 ಜನ ಪ್ರಯಾಣಿಸಬಹುದು. ಕಳೆದ ಒಂದು ವರ್ಷದಿಂದ ಯೋಜನೆ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲಾಗಿದೆ. ಇ-ಆರ್‌ಟಿ ಸಾರಿಗೆ ವ್ಯವಸ್ಥೆ ಯುರೋಪಿನ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿದೆ ಎಂದು ಕಂಪನಿಗಳ ಪ್ರತಿನಿಧಿಗಳು ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡಿದರು.

ಹುಬ್ಬಳ್ಳಿ ಧಾರವಾಡದಲ್ಲಿ ಈ ಯೋಜನೆ ಯಶಸ್ವಿಯಾದರೆ, ರಾಜ್ಯದ ಇತರ ಎರಡನೇ ಹಂತದ ನಗರಗಳಿಗೂ ವಿಸ್ತರಿಸಬಹುದಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹಾದೇವಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಇಎಸ್ಎಸ್ ಎಜಿ ಸಂಸ್ಥೆಯ ಸುಸಾನ್ ವಾನ್ ಸುರಿ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಏನಿದು ಇ-ಆರ್‌ಟಿ ಸಾರಿಗೆ?:

ಎಚ್‌ಇಎಸ್‌ಎಸ್‌-ಎಜಿ ವೆಬ್‌ಸೈಟ್ ಪ್ರಕಾರ, ಇ-ಆರ್‌ಟಿ ಸಾರಿಗೆಯು ಎರಡು ಅಥವಾ ಮೂರು ಕೋಚ್‌ಗಳಿರುವ ಉದ್ದನೆಯ ಎಲೆಕ್ಟ್ರಿಕ್ ಎಸಿ ಬಸ್‌ ಆಗಿದೆ. ಸಾಮಾನ್ಯ ಬಸ್‌ಗಳಿಗಿಂತ ಉದ್ದ ಇರುವ ಕಾರಣ ನೇರ ಮಾರ್ಗ, ತಿರುವು ತೆಗೆದುಕೊಳ್ಳಲು ಸಾಧ್ಯವಿರುವ ರಸ್ತೆಗಳು ಮಾರ್ಗಗಳಲ್ಲಿ ಸಂಚರಿಸುತ್ತದೆ. ಇನ್ನು ಎರಡ್ಮೂರು ಕೋಚ್ ಇರುವ ಕಾರಣ ಒಂದು ಬಸ್‌ಗಿಂತ ಹೆಚ್ಚು ಜನ ಇದರಲ್ಲಿ ಪ್ರಯಾಣಿಸಬಹುದು. ಇದರ ಅನುಷ್ಠಾನಕ್ಕೆ ಮೆಟ್ರೋ ರೈಲಿನಂತೆ ಮೂಲ ಸೌಕರ್ಯಕ್ಕಾಗಿ ನೂರಾರು ಕೋಟಿ ರು. ಖರ್ಚು ಮಾಡುವ ಅಗತ್ಯವೂ ಇರುವುದಿಲ್ಲ. ಇರುವ ರಸ್ತೆಗಳನ್ನೇ ಇ-ಆರ್‌ಟಿ ಸಂಚಾರಕ್ಕೆ ಮೀಸಲಿಡಬಹುದು ಅಥವಾ ಪ್ರತ್ಯೇಕ ಪಥ ನಿರ್ಮಿಸಿ ಸಂಚಾರ ಆರಂಭಿಸಬಹುದಾಗಿದೆ.

ಯಾಕೆ ಹೊಸ ವ್ಯವಸ್ಥೆ?

2018ರಿಂದ ಹುಬ್ಬಳ್ಳಿ-ಧಾರವಾಡ ನಡುವಿನ 22.25 ಕಿ.ಮೀ.ನಡುವೆ ಬಿಆರ್‌ಟಿಎಸ್‌(ಬಸ್‌ ರ್‍ಯಾಪಿಡ್‌ ಟ್ರಾನ್ಸಿಸ್ಟ್‌ ಸಿಸ್ಟಂ) ಬಸ್‌ ಸೌಲಭ್ಯ ಆರಂಭಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕಾರಿಡಾರ್‌ ಕೂಡ ರಚಿಸಲಾಗಿದೆ. ಆದರೆ ಶೇ.20ರಷ್ಟು ಓಡಾಡುವ ಬಿಆರ್‌ಟಿಎಸ್‌ಗೆ ಶೇ.80ರಷ್ಟು ದೊಡ್ಡದಾದ ರಸ್ತೆ ಕಲ್ಪಿಸಿದ್ದು, ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡಿತ್ತು. ಅಲ್ಲದೆ, ಬಿಆರ್‌ಟಿಎಸ್‌ ಅವ್ಯವಸ್ಥೆಗಳ ಕುರಿತು ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು. ಇದರ ವಿರುದ್ಧ ಧಾರವಾಡ ಹಾಗೂ ಹುಬ್ಬಳ್ಳಿ ಎರಡೂ ಕಡೆ ದೊಡ್ಡ ದೊಡ್ಡ ಪ್ರತಿಭಟನೆಗಳೂ ನಡೆದಿದ್ದವು. ಬಿಆರ್‌ಟಿಎಸ್‌ ರದ್ದುಪಡಿಸಿ ಎಂಬ ಕೂಗು ಕೂಡ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಸಂತೋಷ್ ಲಾಡ್‌ ಖಾಸಗಿ ಏಜೆನ್ಸಿಗೆ ಸಮೀಕ್ಷೆ ನಡೆಸಲು ತಿಳಿಸಿದ್ದರು. ಅಲ್ಲದೆ, ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಿದ್ದರು. ಜತೆಗೆ ಎರಡು ಬಾರಿ ಹುಬ್ಬಳ್ಳಿ- ಧಾರವಾಡದಲ್ಲಿ ಸಭೆ ಕೂಡ ನಡೆಸಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''