ಚಾಮರಾಜನಗರ ತಾಲೂಕಿನ ಕೆಲ ಗ್ರಾಮಗಳಲ್ಲಿನ ಭೂಮಿಯನ್ನು ಖಾತೆ ಮಾಡಿಕೊಡುವ ವಿಷಯದಲ್ಲಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ
ಮೈಸೂರು : ಚಾಮರಾಜನಗರ ತಾಲೂಕಿನ ಕೆಲ ಗ್ರಾಮಗಳಲ್ಲಿನ ಭೂಮಿಯನ್ನು ಖಾತೆ ಮಾಡಿಕೊಡುವ ವಿಷಯದಲ್ಲಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗೆ 2014ರಲ್ಲೇ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಆದರೆ, ಜಿಲ್ಲಾಧಿಕಾರಿಗೆ ಆ ಬಗ್ಗೆ ಮಾಹಿತಿ ಇಲ್ಲದಿರಬಹುದು ಎಂದರು.
1951ರಲ್ಲಿ ಸರ್ಕಾರದ ಕಾರ್ಯದರ್ಶಿಯಾಗಿದ್ದ ಶ್ರೀನಿವಾಸನ್ ಅವರ ಸಹಿ ಇರುವ ನಮ್ಮ ಆಸ್ತಿ ಪಟ್ಟಿಯಲ್ಲಿ 4,500 ಎಕರೆಯೂ ಇದೆ. ಆ ಜಮೀನು ಅರಮನೆ ಹೆಸರಿಗೆ ಬಂದರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ. ನಾವು ಮತ್ತು ಗ್ರಾಮಸ್ಥರು ಕುಳಿತು ಅದನ್ನು ಅವರಿಗೆ ಬಿಟ್ಟು ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಮಹಾರಾಜರು ಆ ಜಮೀನನ್ನು ಉಡುಗೊರೆಯಾಗಿ ನೀಡಿದ್ದರೆ ನಾವು ಖಂಡಿತವಾಗಿಯೂ ಅವರನ್ನು ಒಕ್ಕಲೆಬ್ಬಿಸುವುದಿಲ್ಲ. ಗ್ರಾಮಸ್ಥರು ತಮ್ಮ ಬಳಿ ಇರುವ ಉಡುಗೊರೆಯ ದಾಖಲಾತಿಯನ್ನು ಅರಮನೆ ಕಚೇರಿಗೆ ತಲುಪಿಸಲಿ. ಈ ವಿಷಯ ಕುರಿತು ಚಾಮರಾಜನಗರ ಜಿಲ್ಲಾಧಿಕಾರಿ ಅವರೊಡನೆ ಮಾತನಾಡಲು ಪ್ರಯತ್ನ ಪಟ್ಟೆ. ದೂರವಾಣಿ ಕರೆ ಮಾಡಿದ್ದೆ, ಸ್ವೀಕರಿಸಿಲ್ಲ. ಮೇಸೇಜ್ ಕೂಡ ಮಾಡಿದ್ದೆ. ಅದಕ್ಕೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಗ್ರಾಮಸ್ಥರು ಯಾವುದೇ ಸಂದರ್ಭದಲ್ಲಿ ಆದರೂ ಅರಮನೆ ಕಚೇರಿಗೆ ಗಿಫ್ಟ್ ಕೊಟ್ಟಿರುವ ದಾಖಲೆ ಇದ್ದರೆ ಖಂಡಿತ ಕೊಡಿ. ಯಾರ ಬಳಿಯಾದರೂ ಉಡುಗೊರೆಯಾಗಿ ನೀಡಿದ ಬಗ್ಗೆ ದಾಖಲೆ ಇಲ್ಲದಿದ್ದರೂ ಆತಂಕ ಪಡಬೇಡಿ. ಪರಿಹಾರ ಇರುತ್ತದೆ ಎಂದು ಅವರು ಅಭಯ ನೀಡಿದರು.
ಅನ್ಯಾಯ ಮಾಡಲ್ಲ
ನನ್ನಿಂದ ಅಥವಾ ನನ್ನ ತಾಯಿಯಿಂದ ಚಾಮರಾಜನಗರದ ಜನಕ್ಕೆ ಯಾವುದೇ ಅನಾನುಕೂಲವಾಗುವುದಿಲ್ಲ. ನಮ್ಮ ತಾಯಿ ನಮಗೆ ಸೇರಿದ ಜಾಗ ಇದೆ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಪತ್ರ ಬರೆದ ಕಾರಣಕ್ಕೆ ಆತಂಕ ಪಡಬೇಕಿಲ್ಲ. ಅಲ್ಲಿನ ಜನರಿಗೆ ನಾವು ಯಾವುದೇ ತೊಂದರೆ ಕೊಡಲ್ಲ.
-ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರು-ಕೊಡಗು ಸಂಸದ.