ಮೋದಿ ಹೊಗಳಿದ್ದ ಇಡ್ಲಿ ನಿಂಗಮ್ಮ ಫುಟ್‌ಪಾತ್‌ ಹೋಟೆಲ್‌ಗೆ ಕುತ್ತು!

Published : Sep 06, 2026, 07:59 AM IST
Ningamma

ಸಾರಾಂಶ

‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಪುತ್‌ಪಾತ್‌ನಲ್ಲಿ ತಳ್ಳುಗಾಡಿ ಹೊಟೇಲ್ ನಡೆಸುತ್ತಾ ಬದುಕು ಕಟ್ಟಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ನಿಂಗಮ್ಮ ಅವರ ವ್ಯಾಪಾರಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ.

ಬೆಂಗಳೂರು : ‘ಪಿಎಂ ಸ್ವನಿಧಿ’ ಯೋಜನೆಯಡಿ ಸಾಲ ಪಡೆದು ಪುತ್‌ಪಾತ್‌ನಲ್ಲಿ ತಳ್ಳುಗಾಡಿ ಹೊಟೇಲ್ ನಡೆಸುತ್ತಾ ಬದುಕು ಕಟ್ಟಿಕೊಂಡು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವ ನಿಂಗಮ್ಮ ಅವರ ವ್ಯಾಪಾರಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ. ಏಕೆಂದರೆ ಬೆಂಗಳೂರಿನ ಫುಟ್‌ಪಾತ್‌ ಒತ್ತುವರಿ ತೆರವು ಕಾರ್ಯಾಚರಣೆಗೆ ಅವರ ಹೋಟೆಲ್‌ ಕೂಡ ‘ಬಲಿ’ ಆಗುವ ಸಾಧ್ಯತೆ ಇದೆ.

ಬೆಂಗಳೂರಿನ ವಿಜನಯಗರದ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿಯ ಫುಟ್‌ಪಾತ್ ಮೇಲೆ ನಿಂಗಮ್ಮ ಅವರು ತಳ್ಳುಗಾಡಿ ಇಟ್ಟುಕೊಂಡು ಹೊಟೇಲ್ ನಡೆಸುತ್ತಿದ್ದಾರೆ. ಸ್ವನಿಧಿ ಯೋಜನೆಯಡಿ 10,000 ರು. ಸಾಲವನ್ನು ಪಡೆದಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾ ಯಶಸ್ವಿಯಾಗಿ ಫುಟ್‌ಪಾತ್ ವ್ಯಾಪಾರ ನಡೆಸುತ್ತಿದ್ದ ಕಾರಣ ಆ.30ರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಆದರೆ, ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಮುಖ್ಯ ರಸ್ತೆಯಲ್ಲಿನ ಫುಟ್‌ಪಾತ್ ಮೇಲೆಯೇ ನಿಂಗಮ್ಮ ವ್ಯಾಪಾರ ಮಾಡುತ್ತಿದ್ದಾರೆ. ಹೀಗಾಗಿ, ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಹೊಟೇಲ್ ಬಳಿ ತೆರಳಿ ಒಳಭಾಗದ ರಸ್ತೆಗೆ ಹೊಟೇಲ್ ಸ್ಥಳಾಂತರ ಮಾಡಿಕೊಳ್ಳುವಂತೆ ಮೌಖಿಕ ಸಲಹೆ ನೀಡಿದ್ದಾರೆ.

ತೆರವು ಮಾಡಬೇಡಿ- ನಿಂಗಮ್ಮ:

ಈ ಕುರಿತು ಪ್ರತಿಕ್ರಿಯಿಸಿರುವ ನಿಂಗಮ್ಮ, ‘ಬೀದಿ ಬದಿ ವ್ಯಾಪಾರಿ ಎಂಬ ಐಡಿ ಕಾರ್ಡ್ ಹೊಂದಿದ್ದೇನೆ. ಇನ್ನು ಎರಡು ವರ್ಷ ಲೈಸನ್ಸ್ ಅವಧಿ ಇದೆ. ಆದರೆ, ಅಧಿಕಾರಿಗಳು ಬಂದು ಬೇರೆ ಕಡೆ ಹೊಟೇಲ್ ಮಾಡಿ ಎನ್ನುತ್ತಿದ್ದಾರೆ. ಇಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಜನರು ಕೇಳಿಕೊಂಡು ಬಂದು ಆಹಾರ ಸೇವಿಸುತ್ತಿದ್ದಾರೆ. ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ಇನ್ನು ಹೆಚ್ಚು ಜನರು ಕೇಳಿಕೊಂಡು ಬರುತ್ತಿದ್ದಾರೆ. ಆದರೆ, ಜಿಬಿಎ ಅಧಿಕಾರಿಗಳು ಒತ್ತುವರಿ ತೆರವು ಮಾಡಿ ಎನ್ನುತ್ತಿದ್ದಾರೆ’ ಎಂದರು.

‘ಬಡ ರೈತರ ಕುಟುಂಬದ ನಾನು ಸಾಲ ಮಾಡಿ ಹೊಟೇಲ್ ನಡೆಸುತ್ತಿದ್ದೇನೆ. ಈ ವ್ಯಾಪಾರದಿಂದ ಯಾರಿಗೂ ತೊಂದರೆ ಮಾಡಿಲ್ಲ. ಆದರೂ, ತೆರವು ಮಾಡಿ ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರ ನನ್ನ ಈ ಬೀದಿ ಬದಿ ವ್ಯಾಪಾರಕ್ಕೆ ನೆರವಾಗಬೇಕು’ ಎಂದು ನಿಂಗಮ್ಮ ಕೋರಿದ್ದಾರೆ.

ಸಾಮಾನ್ಯ ಸೂಚನೆ ನೀಡಲಾಗಿದೆ- ಜಿಬಿಎ ಆಯುಕ್ತ:

ನಿಂಗಮ್ಮ ಹೊಟೇಲ್ ತೆರವು ಕುರಿತು ಪ್ರತಿಕ್ರಿಯಿಸಿರುವ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರದ ಎಲ್ಲಾ ಮುಖ್ಯ ರಸ್ತೆಗಳು ಹಾಗೂ ಉಪ ಮುಖ್ಯ ರಸ್ತೆಗಳಲ್ಲಿನ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮಾಡುತ್ತಿದ್ದೇವೆ. ಅದರಂತೆ ಅವರಿಗೂ ಕೂಡ ಪಕ್ಕದ ರಸ್ತೆಯಲ್ಲಿ ವ್ಯಾಪಾರ ಮಾಡುವಂತೆ ಹೇಳಿದ್ದೇವೆ. ನಿರ್ದಿಷ್ಟವಾಗಿ ಯಾರಿಗೂ ಟಾರ್ಗೇಟ್ ಮಾಡಿಲ್ಲ. ಎಲ್ಲಾ ಫುಟ್‌ಪಾತ್ ವ್ಯಾಪಾರಿಗಳಿಗೆ ಸೂಚಿಸಿರುವಂತೆಯೇ ಇವರಿಗೂ ಸೂಚನೆ ನೀಡಲಾಗಿದೆ ಎಂದರು.

ಮೋದಿ ಹೇಳಿದಾಕ್ಷಣ ನಿಯಮ ಬದಲಾಗದು

ಮೋದಿ ಮಾತನಾಡಿದರು ಎಂದಾಕ್ಷಣ ಕಾನೂನು ಬೇರೆ ಆಗುವುದಿಲ್ಲ. ನಿಯಮಾನುಸಾರ ಫುಟ್‌ಪಾತ್‌ ಗೂಡಂಗಡಿಗಳನ್ನು ತೆರವು ಮಾಡಲಾಗ್ತಿದೆ.

- ಪ್ರಿಯಾಂಕ್‌ ಖರ್ಗೆ, ಸಚಿವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನೇಪಾಳದಲ್ಲಿ ನಾಪತ್ತೆಯಾದ ಕನ್ನಡಿಗರ ಪತ್ತೆಗೆ ಡಿಎನ್‌ಎ ಮಾದರಿ ಸಂಗ್ರಹ: ರಾವ್‌
ಪೌರ ಸಿಬ್ಬಂದಿ ಕೆಲಸಕ್ಕೆ ಸರಿಯಾಗಿ ಬರದಿದ್ದರೆ ವಜಾ: ಕೃಷ್ಣ