;Resize=(412,232))
ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ಬಿಡುಗಡೆಯ ಆಸೆ ಹೊತ್ತಿದ್ದ ನಟನಿಗೆ ಬಿಗ್ ಶಾಕ್ ನೀಡಿದೆ.
ಆದರೆ ಇದೇ ವೇಳೆ, ಸಾಕ್ಷಿಗಳ ವಿಚಾರಣೆಯಲ್ಲಿನ ವಿಳಂಬಕ್ಕೆ ನ್ಯಾಯಪೀಠ ಅಸಾಮಾಧಾನ ವ್ಯಕ್ತಪಡಿಸಿದ್ದು, ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. ಸಾಕ್ಷಿಗಳ ವಿಚಾರಣೆಗೆ 1 ವರ್ಷದ ಕಾಲಾವಕಾಶ ನೀಡಿದ್ದು, ನಂತರ, ಅರ್ಜಿದಾರರಿಗೆ ಜಾಮೀನು ನೀಡಬೇಕಾಗಬಹುದು ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ, ದರ್ಶನ್‌ಗೆ ಸದ್ಯಕ್ಕೆ ಜೈಲಿನಲ್ಲಿಯೇ ಕಾಲ ಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಸಾಕ್ಷಿಗಳ ವಿಷಾರಣೆ 1 ವರ್ಷದೊಳಗೇ ಮುಗಿದರೆ ಅಗ ಅವರಿಗೆ ಜಾಮೂನು ಸಿಗಬಹುದಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ಸಾಕ್ಷಿಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಕುಟುಂಬವನ್ನು ಭೇಟಿ ಮಾಡಲು ಜೈಲಾಧಿಕಾರಿಗಳಿಂದ ಅವಕಾಶ ನಿರಾಕರಣೆ, ಆರೋಗ್ಯ ಸಮಸ್ಯೆ, ಇನ್ನೂ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿರುವ ಕಾರಣಗಳನ್ನು ನೀಡಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ದರ್ಶನ್ ಪರ ವಾದ ಮಂಡಿಸಿದ ವಕೀಲ ಮುಕುಲ್ ರೋಹ್ಟಗಿ, ‘272ಕ್ಕೂ ಹೆಚ್ಚು ಸಾಕ್ಷಿಗಳು ಪ್ರಕರಣದಲ್ಲಿದ್ದು, ಈವರೆಗೆ 10 ಸಾಕ್ಷಿಗಳ ವಿಚಾರಣೆಯನ್ನಷ್ಟೇ ಮಾಡಲಾಗಿದೆ’ ಎಂದು ಆರೋಪಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ನ್ಯಾ.ವಿಜಯ್ ಬಿಷ್ಣೋಯ್ ಅವರಿದ್ದ ವಿಭಾಗೀಯ ನ್ಯಾಯಪೀಠ, ದರ್ಶನ್‌ಗೆ ಜಾಮೀನು ನೀಡಲು ನಿರಾಕರಿಸಿತು.
ಆದರೆ, ಸಾಕ್ಷಿಗಳ ವಿಚಾರಣೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ‘ಆದಷ್ಟು ಬೇಗನೆ ಸಾಕ್ಷಿಗಳ ವಿಚಾರಣೆ ಮುಗಿಸಬೇಕು. ಅಗತ್ಯಬಿದ್ದಲ್ಲಿ, ವಿಚಾರಣಾ ನ್ಯಾಯಾಲಯವು ದಿನನಿತ್ಯದ ಆಧಾರದ ಮೇಲೆ ಸಾಕ್ಷಿಗಳ ವಿಚಾರಣೆಗೆ ಪರಿಶೀಲಿಸಬಹುದು ಎಂದು ತಿಳಿಸಿದೆ.
ಪ್ರಕರಣದ ಸಾಕ್ಷಿಗಳ ವಿಚಾರಣೆಗೆ 1 ವರ್ಷದ ಕಾಲಾವಧಿ ನೀಡಿದ್ದು, ಅಷ್ಟರಲ್ಲಿ ಸಾಕ್ಷಿಗಳ ವಿಚಾರಣೆ ಮುಗಿಯದಿದ್ದಲ್ಲಿ, ಅರ್ಜಿದಾರರ ಜಾಮೀನು ಅರ್ಜಿಯನ್ನು ಪರಿಗಣಿಸುವುದಾಗಿ ತಿಳಿಸಿದೆ. ಹೀಗಾಗಿ, ದರ್ಶನ್‌ಗೆ ಸದ್ಯಕ್ಕೆ ಜೈಲು ವಾಸ ಕಾಯಂ ಆದಂತಾಗಿದೆ.
ಇದೇ ವೇಳೆ, ದರ್ಶನ್ ಗೆ ಜೈಲಿನಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಜೈಲು ಅಧೀಕ್ಷಕರಿಗೆ ಸೂಚನೆ ನೀಡಿದೆ. ಆದರೆ, ದರ್ಶನ್‌ರನ್ನು ಕ್ವಾರಂಟೈನ್ ಸೆಲ್‌ನಿಂದ ಸಾಮಾನ್ಯ ಸೆಲ್‌ಗೆ ಸ್ಥಳಾಂತರಿಸುವ ಬಗ್ಗೆ ಅಥವಾ ಬೇರೆಡೆಗೆ ಬದಲಾಯಿಸುವ ಬಗ್ಗೆ ಯಾವುದೇ ಆದೇಶವನ್ನು ನೀಡಲಿಲ್ಲ. ಹೀಗಾಗಿ, ದರ್ಶನ್ ಸದ್ಯಕ್ಕೆ ಕ್ವಾರಂಟೈನ್ ಸೆಲ್‌ನಲ್ಲೇ ಮುಂದುವರಿಯಬೇಕಿದೆ.
- ವಿಚಾರಣಾ ನ್ಯಾಯಾಲಯ ಪ್ರಕರಣದ ದೈನಂದಿನ ವಿಚಾರಣೆ ನಡೆಸಬೇಕು
- ವಿಚಾರಣೆ 1 ವರ್ಷದೊಳಗೆ ಮುಗಿಯದಿದ್ರೆ ನಟನ ಜಾಮೀನು ಪರಿಗಣನೆ
- ಚಾಲೆಂಜಿಂಗ್ ಸ್ಟಾರ್‌ಗೆ ಜೈಲಲ್ಲಿ ಅಗತ್ಯ ಮೂಲಸೌಕರ್ಯ ನೀಡಬೇಕು