;Resize=(412,232))
ಬೆಂಗಳೂರು : ಕ್ರಿಮಿನಲ್ ಪ್ರಕರಣಗಳಲ್ಲಿ ಸರ್ಕಾರದ ಅಭಿಯೋಜನೆ (ಪ್ರಾಸಿಕ್ಯೂಷನ್) ವಿರುದ್ಧ ಪ್ರತಿಕೂಲ ಸಾಕ್ಷ್ಯ ನುಡಿಯುವ ಮೂಲಕ ಆರೋಪಿಗೆ ನೆರವಾದವರಿಗೆ, ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಪರಿಹಾರ ನೀಡುವಂತೆ ನಿರ್ದೇಶಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಾಸಿಕ್ಯೂಷನ್ ವಿರುದ್ಧ ಪ್ರತಿಕೂಲ ಸಾಕ್ಷಿ ನುಡಿದ ಸಂತ್ರಸ್ತೆಗೆ 3 ಲಕ್ಷ ರು. ಪಾವತಿಸಲು ತುಮಕೂರು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ (ವಿಚಾರಣಾ ನ್ಯಾಯಾಲಯ) ನೀಡಿದ ನಿರ್ದೇಶನದ ಮೇರೆಗೆ ಪರಿಹಾರ ವಿತರಿಸಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ(ಡಿಎಲ್ಎಸ್ ಎ) ಅಧ್ಯಕ್ಷರು ಮಾಡಿದ ಶಿಫಾರಸು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ಪೀಠ, ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ಪ್ರತಿಕೂಲ ಹೇಳಿಕೆ ಆಧಾರದಲ್ಲಿ ಆರೋಪಿ ಖುಲಾಸೆಗೊಂಡಿದ್ದಾನೆ. ಆದ್ದರಿಂದ ಪ್ರಾಷಿಕ್ಯೂಷನ್‌ಗೆ ಬೆಂಬಲ ನೀಡದೆ ಪ್ರತಿಕೂಲ ಸಾಕ್ಷಿ ನುಡಿಯುವ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆದೇಶಿಸಲು ವಿಚಾರಣಾ ನ್ಯಾಯಾಲಯಕ್ಕೆ ಅವಕಾಶವಿಲ್ಲ. ಆದ್ದರಿಂದ ಸಂತ್ರಸ್ತರ ಪರಿಹಾರ ಯೋಜನೆ ಪ್ರಕಾರ ಈ ಪ್ರಕರಣದಲ್ಲಿ ಸಂತ್ರಸ್ತೆ ಪರಿಹಾರಕ್ಕೆ ಅರ್ಹರಲ್ಲ ಎಂದು ಆದೇಶಿಸಿದೆ.
ಅಲ್ಲದೆ, ಪ್ರಕರಣದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿದ ಸಂತ್ರಸ್ತೆಗೆ 3 ಲಕ್ಷ ರು.ಪರಿಹಾರ ನೀಡಲು ವಿಚಾರಣಾ ನ್ಯಾಯಾಲಯ ಹೊರಡಿಸಿದ ಆದೇಶದ ಮೇರೆಗೆ ಕೆಎಸ್‌ಎಲ್‌ಎಸ್ ಎಗೆ, ತುಮಕೂರು ಡಿಎಲ್ಎಸ್ಎ ಮಾಡಿದ್ದ ಶಿಫಾರಸು ರದ್ದುಪಡಿಸಿದೆ.
ತುಮಕೂರು ಜಿಲ್ಲೆ ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಸಂತ್ರಸ್ತೆ ಸೆಕ್ಷನ್ 164 ಅಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಆರೋಪಿ ವಿರುದ್ಧ ಹೇಳಿಕೆ ದಾಖಲಿಸಿದ್ದರು. ಆದರೆ, ಪ್ರಕರಣದ ಪಾಟಿ ಸವಾಲು ನಡೆಸುವ ಸಂದರ್ಭದಲ್ಲಿ ತನ್ನ ಹೇಳಿಕೆಗೆ ತದ್ವಿರುದ್ಧವಾಗಿ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಇದರಿಂದ ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತ್ತು.
ಇದೇ ವೇಳೆ ಪ್ರತಿಕೂಲ ಸಾಕ್ಷ್ಯ ನುಡಿದ ಅಂಶ ಪರಿಗಣಿಸದೆ, ಸಂತ್ರಸ್ತೆಗೆ 3 ಲಕ್ಷ ರು. ಪರಿಹಾರ ಪಾವತಿಸುವಂತೆ ವಿಚಾರಣಾ ನ್ಯಾಯಾಲಯ 2021ರ ಮಾರ್ಚ್ 5ರಂದು ತುಮಕೂರು ಡಿಎಲ್ಎಸ್ಎಗೆ ಸೂಚಿಸಿತ್ತು. ಅದರ ಆಧಾರದ ಮೇಲೆ ಸಂತ್ರಸ್ತರಿಗೆ ಪರಿಹಾರ ಪಾವತಿಸಲು ಡಿಎಲ್ಎಸ್ಎ ಅಧ್ಯಕ್ಷರು, ಕೆಎಸ್ಎಲ್ಎಸ್ಎಗೆ ಶಿಫಾರಸು ಮಾಡಿದ್ದರು. ಅದನ್ನು ಪ್ರಶ್ನಿಸಿ ಕೆಎಸ್ಎಲ್ಎಸ್ಎ, ಹೈಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ಪುರಸ್ಕರಿಸಿದ ಹೈಕೋರ್ಟ್, ಪಕರಣದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿದ ಸಂತ್ರಸ್ತೆಗೆ ಪರಿಹಾರ ನೀಡಲು ಶಿಫಾರಸು ಮಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿತು.
ಡಿಎಲ್ಎಸ್ಎ ಅಧ್ಯಕ್ಷರು, ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರೂ ಆಗಿರಲಿದ್ದಾರೆ. ಅವರು ತಮ್ಮ ವಿವೇಚನೆ ಬಳಸದೆ ಕೇವಲ ಅಂಚೆ ಕಚೇರಿಯಂತೆ ಕಾರ್ಯ ನಿರ್ವಹಿಸಬಾರದು. ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಿದ ಬಳಿಕ ಪರಿಹಾರಕ್ಕಾಗಿ ಶಿಫಾರಸು ಮಾಡಬೇಕಾಗುತ್ತದೆ ಎಂಬುದಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಲವು ಬಾರಿ ಸುತ್ತೋಲೆಗಳನ್ನು ಹೊರಡಿಸಿದೆ. ಆದರೂ, ಡಿಎಸ್ಎಲ್ಎ ಅಧ್ಯಕ್ಷರು ಪರಿಹಾರಕ್ಕಾಗಿ ಶಿಫಾರಸ್ಸು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಪೀಠ ಹೇಳಿದೆ.