ಚೂಡಿದಾರ್‌ ಡ್ರೆಸ್ಸಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಮಹಿಳೆ ಬಂಧನ

Published : Jun 14, 2025, 06:21 AM IST
Drugs Rocket Princes

ಸಾರಾಂಶ

ದೆಹಲಿಯಿಂದ ನಗರಕ್ಕೆ ಹೊಸ ಚೂಡಿದಾರ್ ಉಡುಪುಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಿಸುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 10 ಕೋಟಿ ರು. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

 ಬೆಂಗಳೂರು :  ದೆಹಲಿಯಿಂದ ನಗರಕ್ಕೆ ಹೊಸ ಚೂಡಿದಾರ್ ಉಡುಪುಗಳಲ್ಲಿ ಡ್ರಗ್ಸ್ ಅಡಗಿಸಿ ಸಾಗಿಸುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 10 ಕೋಟಿ ರು. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

ನೈಜೀರಿಯಾ ಮೂಲದ ಅಕಿನ್‌ವುನ್ಮಿ ಪ್ರಿನ್ಸೆಸ್ ಇಫೆಲ್ವಾ ಪ್ರಿನ್ಸೆಸ್‌ ಬಂಧಿತಳಾಗಿದ್ದು, ಆಕೆಯಿಂದ 10 ಕೋಟಿ ರು. ಮೌಲ್ಯದ 5.325 ಕೆಜಿ ಎಂಡಿಎಂಎ ಕ್ರಿಸ್ಟೆಲ್ ಹಾಗೂ 11 ಹೊಸ ಚೂಡಿದಾರ್‌ ಉಡುಪುಗಳನ್ನು ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಆಕೆಯ ಸ್ನೇಹಿತೆ ಆಸಾ ಪತ್ತೆಗೆ ತನಿಖೆ ಮುಂದುವರಿದಿದೆ.

ಚಿಕ್ಕಜಾಲ ಬಳಿ ರಾಜಾನುಕುಂಟೆ ಮುಖ್ಯರಸ್ತೆ ಬಳಿ ವಿದೇಶಿ ಮಹಿಳೆ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿರುವ ಕುರಿತು ಖಚಿತ ಮಾಹಿತಿ ಪಡೆದು ಸಿಸಿಬಿ ಕಾರ್ಯಾಚರಣೆ ನಡೆಸಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.

ಸರ್ಕಾರಿ ಅಧಿಕಾರಿ ಪುತ್ರಿ ಡ್ರಗ್ಸ್ ಪೆಡ್ಲರ್

2021ರ ಅಕ್ಟೋಬರ್‌ನಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದ ನೈಜೀರಿಯಾದ ಸರ್ಕಾರಿ ಅಧಿಕಾರಿ ಪುತ್ರಿ ಪ್ರಿನ್ಸೆಸ್‌ ನವದೆಹಲಿಯ ಉತ್ತಮ್ ನಗರದಲ್ಲಿ ನೆಲೆಸಿದ್ದಳು. ತರುವಾಯ ತೆಲಂಗಾಣ ರಾಜ್ಯದ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಳು. ಆದರೆ ಎಂದಿಗೂ ತರಗತಿಗಳಿಗೆ ಪ್ರಿನ್ಸೆಸ್‌ ಹಾಜರಾಗಲಿಲ್ಲ. ಭಾರತದಲ್ಲಿ ಇರಲು ಪದವಿಗೆ ಏಜೆಂಟ್ ಮೂಲಕ ಆಕೆ ಪ್ರವೇಶಾತಿ ಪಡೆದಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿದ್ದ ಡ್ರಗ್ಸ್ ಮಾಫಿಯಾದ ಸದಸ್ಯರಿಗೆ ಹೊರ ರಾಜ್ಯಗಳಿಗೆ ಡ್ರಗ್ಸ್ ಸಾಗಿಸುವ ಕೆಲಸವನ್ನು ಈಕೆ ಮಾಡುತ್ತಿದ್ದಳು. ಪ್ರತಿ ಸಾಗಾಟಕ್ಕೆ ಕಮಿಷನ್ ರೂಪದಲ್ಲಿ ಇಂತಿಷ್ಟು ಹಣವು ಆಕೆಗೆ ಸಂದಾಯವಾಗುತ್ತಿತ್ತು. ಅಂತೆಯೇ ಬೆಂಗಳೂರಿಗೆ ದೆಹಲಿಯಿಂದ ಬಸ್‌ನಲ್ಲಿ 11 ಜೊತೆ ಚೂಡಿದಾರ್‌ ಉಡುಪುಗಳಲ್ಲಿ ಡ್ರಗ್ಸ್ ಅಡಗಿಸಿಟ್ಟುಕೊಂಡು ಆಕೆ ತಂದಿದ್ದಳು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಡಿಸಿಪಿ ಕಾಸಿಮ್ ರಾಜು ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಎಂ.ಆರ್‌.ಹರೀಶ್‌ ಹಾಗೂ ರಕ್ಷಿತ್ ತಂಡ ದಾಳಿ ನಡೆಸಿದೆ.

ತಪ್ಪಿಸಿಕೊಂಡ ಸಬ್ ಪೆಡ್ಲರ್‌ಗಳು

ದೆಹಲಿಯಿಂದ ಬಸ್ಸಿನಲ್ಲಿ ಹೊರಟ ಪ್ರಿನ್ಸೆಸ್‌ಗೆ ಡ್ರಗ್ಸ್ ಪೂರೈಸಬೇಕಾದ ಜಾಗದ ಬಗ್ಗೆ ಡ್ರಗ್ಸ್ ಮಾಫಿಯಾ ಸದಸ್ಯ ಲೋಕೇಷನ್ ಕಳುಹಿಸಿದ್ದ. ಅಂತೆಯೇ ಚಿಕ್ಕಜಾಲ ಸಮೀಪ ರಾಜಾನುಕುಂಟೆ ಮುಖ್ಯ ರಸ್ತೆಗೆ ಆಕೆ ತೆರಳಿದ್ದಳು. ಈಕೆಯ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ತಂಡಗಳು ಬೆನ್ನುಹತ್ತಿದ್ದರು. ಪೂರ್ವನಿಗದಿಯಂತೆ ಎರಡು ಬೈಕ್‌ಗಳಲ್ಲಿ ನಗರದಲ್ಲಿ ನೆಲೆಸಿರುವ ನಾಲ್ವರು ನೈಜೀರಿಯಾ ಪ್ರಜೆಗಳು, ಪ್ರಿನ್ಸೆಸ್‌ನಿಂದ ಡ್ರಗ್ಸ್ ಪಡೆಯಲು ಬಂದಿದ್ದರು. ಆದರೆ ಆ ಸ್ಥಳದಲ್ಲಿ ಪೊಲೀಸರ ಇರುವಿಕೆ ಬಗ್ಗೆ ಶಂಕೆಗೊಂಡ ಸಬ್ ಪೆಡ್ಲರ್‌ಗಳು, ಬೈಕ್‌ಗಳಲ್ಲಿ ಅಲ್ಲೇ ಸುತ್ತು ಹಾಕಿ ಡ್ರಗ್ಸ್ ಪಡೆಯದೆ ಪರಾರಿಯಾದರು. ತಕ್ಷಣವೇ ಪ್ರಿನ್ಸೆಸ್‌ ತಪ್ಪಿಸಿಕೊಳ್ಳುವ ಮುನ್ನವೇ ಬಂಧಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ದಿನಸಿಯಂತೆ ಡ್ರಗ್ಸಲ್ಲೂ ಕಲಬೆರಕೆ

ದಿನಸಿ ಪದಾರ್ಥಗಳಂತೆ ಡ್ರಗ್ಸ್‌ ನಲ್ಲಿ ಸಹ ಕಲಬೆರಕೆ ಡ್ರಗ್ಸ್ ಇದೆ. ವಿದೇಶದಿಂದ ಶುದ್ಧ ಎಂಡಿಎಂಎ ತರಿಸಿ ಅದಕ್ಕೆ ಸ್ಥಳೀಯವಾಗಿ ಬೇರೆ ಪೌಡರ್ ಬೆರಿಸಿ ಪೆಡ್ಲರ್‌ಗಳು ಮಾರಾಟ ಮಾಡುತ್ತಾರೆ. ಅಂತೆಯೇ ಪ್ರಿನ್ಸೆಸ್‌ ನಿಂದ 5 ಕೆಜಿ ಡ್ರಗ್ಸ್ ಖರೀದಿಸಿ ಅದಕ್ಕೆ ಮೂರು ಪಟ್ಟು ಕಲಬೆರಕೆ ಮಾಡುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಬಾಯ್ ಫ್ರೆಂಡ್‌ ಗೆ ಹುಡುಕಾಟ

ದೆಹಲಿಯಲ್ಲಿ ಪ್ರಿನ್ಸೆಸ್‌ಗೆ ಬಾಯ್ ಫ್ರೆಂಡ್ ಸಹ ಇದ್ದ ಎಂಬುದು ಗೊತ್ತಾಗಿದೆ. ಆದರೆ ಆತನ ಬಗ್ಗೆ ಆರೋಪಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಲ್ಲದೆ ತನ್ನ ಪೋಷಕರ ಕುರಿತು ಸಹ ಬಾಯ್ಬಿಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

PREV
Read more Articles on

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌