;Resize=(412,232))
ಬೆಂಗಳೂರು : ಎಬೋಲಾ ಕುರಿತು ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರ ಎಸ್‌ಒಪಿ ಬಿಡುಗಡೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಹಾಗೂ ಮಂಗಳೂರಿನ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆಯನ್ನು ಎಬೋಲಾ ಐಸೋಲೇಷನ್ ಕೇಂದ್ರವಾಗಿ ಗುರುತಿಸಿ ಆದೇಶ ಹೊರಡಿಸಿದೆ.
ಜತೆಗೆ ಬೆಂಗಳೂರಿನ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗಳನ್ನು ಚಿಕಿತ್ಸಾ ಕೇಂದ್ರಗಳಾಗಿ ಆಯ್ಕೆ ಮಾಡಲಾಗಿದೆ.
ಆಸ್ಪತ್ರೆಗಳಲ್ಲಿ ಅಗತ್ಯ ಪಿಪಿಇ ಕಿಟ್, ಔಷಧಿ ಹಾಗೂ ಪ್ರಯೋಗಾಲಯ ಸೌಲಭ್ಯಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ತ್ವರಿತ ಪ್ರತಿಕ್ರಿಯಾ ತಂಡ (ರ್‍ಯಾಪಿಡ್ ರೆಸ್ಪಾನ್ಸ್ ಟೀಮ್) ಸಜ್ಜುಗೊಳಿಸಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಶಯಾಸ್ಪದ ಎಬೋಲಾ ರೋಗಿಗಳು ಪತ್ತೆಯಾದರೆ ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಸೇವೆಯನ್ನೂ ಸಿದ್ಧ ಮಾಡಲಾಗಿದೆ. ಶಂಕಿತ ರೋಗಿಗಳಿಂದ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ರಾಷ್ಟ್ರೀಯ ವೈರಾಣು ಕೇಂದ್ರದ ಮೂಲಕ ಪುಣೆಯ ರಾಷ್ಟ್ರೀಯ ವೈರಾಣು ಕೇಂದ್ರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.
ಕಾಂಗೋ ಮತ್ತು ಉಗಾಂಡಾದಲ್ಲಿ ಎಬೋಲಾ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಇದನ್ನು ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಎಬೋಲಾ ಪೀಡಿತ ದೇಶಗಳಿಗೆ ಇತ್ತೀಚೆಗೆ ಪ್ರಯಾಣ ಮಾಡಿದವರು ಭಾರತಕ್ಕೆ ಮರಳಿದ ನಂತರ 21 ದಿನಗಳ ಕಾಲ ಕ್ವಾರಂಟೈನ್ ಮಾಡಿ ಆರೋಗ್ಯ ಮೇಲ್ವಿಚಾರಣೆ ಮಾಡಬೇಕು. ಪ್ರಯಾಣಿಕರಲ್ಲಿ ಎಬೋಲ ಸಂಬಂಧಿತ ಯಾವುದೇ ರೋಗ ಲಕ್ಷಣಗಳು ಕಂಡುಬಂದರೆ ಅವರು ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ವರದಿ ಮಾಡಬೇಕು. ಅಂತಹವರನ್ನು ಕ್ಷಿಪ್ರ ಪ್ರಕ್ರಿಯಾ ತಂಡ ಸರ್ವೆಕ್ಷಣೆ ಮಾಡಲಿದೆ ಎಂದು ಇಲಾಖೆ ಹೇಳಿದೆ.
ಜ್ವರ, ತಲೆನೋವು, ಸ್ನಾಯು ನೋವು, ಗಂಟಲು ನೋವು, ವಾಂತಿ, ತೀವ್ರ ಅತಿಸಾರ, ಹೊಟ್ಟೆ ನೋವು, ದದ್ದು ಹಾಗೂ ಕಣ್ಣು ಕೆಂಪಾಗುವುದು ಮುಂತಾದ ಲಕ್ಷಣ ಕಂಡು ಬರುವ ಗಂಭೀರ ವೈರಾಣು ಸೋಂಕು.
ಯಾರಿಗೆ ಅಪಾಯ:
ಶಂಕಿತ ಹಾಗೂ ಸೋಂಕಿತ ವ್ಯಕ್ತಿಗಳ ರಕ್ತ, ಅಂಗಗಳು, ದೇಹದ ದ್ರವಗಳೊಂದಿಗೆ ನೇರ ಸಂಪರ್ಕ ಸಾಧಿಸಿದರೆ ಸೋಂಕು ಹರಡುತ್ತದೆ. ಜತೆಗೆ ಹಾಸಿಗೆ, ಬಟ್ಟೆ, ಸಿರಿಂಜ್‌ನಂತಹ ಕಲುಷಿತ ವಸ್ತುಗಳಿಂದಲೂ ಬರಬಹುದು. ಆರೋಗ್ಯ ಸಿಬ್ಬಂದಿ ಮತ್ತು ಸೋಂಕಿತ ವ್ಯಕ್ತಿಯ ಕುಟುಂಬದ ಸದಸ್ಯರು ಹಾಗೂ ನಿಕಟ ಸಂಪರ್ಕದಲ್ಲಿರುವವರಿಗೆ ಹೆಚ್ಚಿನ ಅಪಾಯ ಇರುತ್ತದೆ.