;Resize=(412,232))
ಬೆಂಗಳೂರು : ಒಂದನೇ ತರಗತಿಯಿಂದ 12ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಯೋಜನೆಯನ್ನು ಸಾಧ್ಯವಾದರೆ ಇದೇ ವರ್ಷದಿಂದ ಜಾರಿ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಶನಿವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ನಗರದ ಥಣಿಸಂದ್ರದಲ್ಲಿರುವ ಸರ್ಕಾರಿ ಶಾಲೆ ಸೇರಿ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ನೀಡಲಾಗುತ್ತಿದೆ. 15,000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ ಎಂದರು.
ಸರ್ಕಾರಿ ಶಾಲೆ ಬಗ್ಗೆ ಟೀಕೆ-ಟಿಪ್ಪಣಿಗಳು ಬರುತ್ತಲೇ ಇರುತ್ತವೆ. ಆದರೆ, ಈ ಶಾಲೆಯಲ್ಲಿ ಸೌಕರ್ಯಗಳು ಉತ್ತಮವಾಗಿವೆ. ದೆಹಲಿಯಲ್ಲಿನ ಸರ್ಕಾರಿ ಶಾಲೆಗಳಿಗಿಂತಲೂ ಇದು ಉತ್ತಮವಾಗಿದೆ. ನಮ್ಮ ಸರ್ಕಾರ ಯಾವತ್ತೂ ಶಿಕ್ಷಕರನ್ನು ಮರೆಯುವುದಿಲ್ಲ ಎಂದು ಸಚಿವರು ಹೇಳಿದರು.
ನಿವೃತ್ತರಾದ ಶಿಕ್ಷಕರು ಆಸಕ್ತಿಯಿಂದ ಮತ್ತೆ ಶಿಕ್ಷಣ ಸೇವೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕೇಳಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಸುಮಾರು 46 ಸಾವಿರ ಶಾಲೆಗಳಿದ್ದು, ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ.
ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ರಾಜ್ಯದ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುವುದು. ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸಲು ಸರ್ಕಾರ ಬದ್ಧ ಎಂದು ಸಚಿವರು ತಿಳಿಸಿದರು.
ನನ್ನ ತಂದೆ ಬಂಗಾರಪ್ಪ ಅವರು ಶಾಲೆಗೆ ಹಾಜರಾಗುವ ಮಕ್ಕಳಿಗೆ ದಿನಕ್ಕೆ 1 ರು. ಕೊಡುವ ʻಅಕ್ಷಯʼ ಯೋಜನೆ ತಂದಿದ್ದರು. ಅದೇ ಯೋಜನೆ ಮುಂದೆ ಬಿಸಿಯೂಟ ಯೋಜನೆ ಜಾರಿಗೆ ಕಾರಣವಾಯಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಿಂದಿನ ಸರ್ಕಾರದ ಎಡವಟ್ಟಿನಿಂದ ಕೋರ್ಟ್ ವಿಚಾರಣೆಯಲ್ಲಿ ತಡೆಹಿಡಿದಿದ್ದ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿದ್ದೇವೆ. 52 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಶಿಕ್ಷಕರೇ ಇಲ್ಲ ಎಂಬ ಸ್ಥಿತಿಯನ್ನು ನಾನು ಒಪ್ಪುವುದಿಲ್ಲ ಎಂದು ಮಧು ಬಂಗಾರಪ್ಪ ಹೇಳಿದರು.