;Resize=(412,232))
ಬೆಂಗಳೂರು : ನಗರದ ವಿವಿಧೆಡೆ ಕಸದ ಸಮಸ್ಯೆ ಹೆಚ್ಚಾಗುತ್ತಿದ್ದು, ವಿಲೇವಾರಿಯಾಗದ ಕಸ ರಸ್ತೆಗಳಲ್ಲಿ, ರಸ್ತೆ ಬದಿ, ಪಾದಚಾರಿ ಮಾರ್ಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲೇ ಬಿದ್ದಿರುವುದು ಸಾರ್ವಜನಿಕರನ್ನು ಕಂಗೆಡಿಸಿದೆ.
ಮಳೆಗಾಲ ಆರಂಭವಾಗಿರುವುದರಿಂದ ವಿಲೇವಾರಿಯಾಗದ ಕಸ ದುರ್ವಾಸನೆ ಬೀರುತ್ತಿದೆ. ಇದರಿಂದ ರಸ್ತೆಗಳಲ್ಲಿ ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಅನೇಕ ದಿನಗಳಿಂದ ಸಿಬ್ಬಂದಿ ಕಸ ಸಾಗಿಸದ ಕಾರಣ ರಸ್ತೆ ಬದಿಯಲ್ಲಿ ಹಾಕಿರುವ ಕಸ ರಸ್ತೆ ಮಧ್ಯಕ್ಕೆ ಬರುತ್ತಿದ್ದು ವಾಹನಗಳ ಓಡಾಟಕ್ಕೂ ಅಡ್ಡಿಯಾಗುತ್ತಿದೆ. ಕಸ ಸಾಗಿಸಲು ನಿರ್ಲಕ್ಷ್ಯ ತೋರುತ್ತಿರುವ ಘನ ತ್ಯಾಜ್ಯ ನಿರ್ವಹಣಾ ಕಂಪನಿಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗಳಿಂದ ಸಂಗ್ರಹಿಸುವ ಕಸವನ್ನು ಕಸ ವರ್ಗಾವಣೆ ಕೇಂದ್ರಕ್ಕೆ ತರುವ ಸಿಬ್ಬಂದಿ, ಅಲ್ಲಿಂದ ತ್ವರಿತವಾಗಿ ಡಂಪಿಂಗ್ ಯಾರ್ಡ್, ಸಂಸ್ಕರಣೆ ಘಟಕಗಳಿಗೆ ಸಾಗಿಸುತ್ತಿಲ್ಲ. ಹೀಗಾಗಿ, ನಗರದ ಬಹುತೇಕ ಪ್ರದೇಶಗಳಲ್ಲಿ ಕಸದ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಮಳೆಗಾಲ ಹಿನ್ನೆಲೆಯಲ್ಲಿ ನಗರದ ವಿವಿಧ ಚರಂಡಿ, ಮೋರಿಗಳನ್ನು, ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಸ್ವಚ್ಛಗೊಳಿಸಿದ ಕಸವನ್ನು ಮೋರಿ, ಕಾಲುವೆ ಬದಿಯಲ್ಲಿ ಸುರಿಯಲಾಗುತ್ತದೆ. ಅದನ್ನು ಬೇರೆಡೆ ಸಾಗಿಸದ ಕಾರಣ ಮತ್ತೆ ಆ ಕಸ ಮಳೆಯಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಪಾಲಿಕೆಯ ಅರೆ ಬರೆ ಕಾಮಗಾರಿಯಿಂದ ರಸ್ತೆಗಳು ಜಲಾವೃತಗೊಳ್ಳುತ್ತಿವೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ರಸ್ತೆಯಲ್ಲಿ ಕಸ ಹಾಕಿ, ಸಾಗಿಸದ ಸಿಬ್ಬಂದಿ!: ಕಾಟನ್‌ಪೇಟೆಯಲ್ಲಿ ಕಸ ಸಂಗ್ರಹಿಸುವ ಸಿಬ್ಬಂದಿಯೇ ಕಸವನ್ನು ತಂದು ರಸ್ತೆ ಮಧ್ಯದಲ್ಲಿ ಹಾಕುತ್ತಿದ್ದಾರೆ. ಸಿಬ್ಬಂದಿ ಕಸವನ್ನು ರಸ್ತೆಯಲ್ಲಿ ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿವಿದೆಡೆ ಸಂಗ್ರಹಿಸಿದ ಕಸವನ್ನು ತಂದು ರಸ್ತೆ ಮಧ್ಯದಲ್ಲಿ ಬಿಸಾಡಿ ಹೋಗುವುದಕ್ಕೆ ಸ್ಥಳೀಯರು, ವ್ಯಾಪಾರಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಗರದ ಸೋಮೇಶ್ವರ ನಗರದ ನಿಮ್ಹಾನ್ಸ್ ಆಸ್ಪತ್ರೆ ಕಾಂಪೌಂಡ್ ಬಳಿಯು ಸಾರ್ವಜನಿಕರು ಕಸ ಸುರಿಯುತ್ತಿದ್ದಾರೆ. ಅನೇಕ ದಿನಗಳಿಂದ ಬಿದ್ದಿರುವ ಕಸವನ್ನು ಸಾಗಿಸದ ಕಾರಣ ದುರ್ವಾಸನೆ ಬರುತ್ತಿದೆ. ಮಳೆಗಾಲ ಆರಂಭವಾಗಿರುವುದರಿಂದ ಕಸದಿಂದ ರೋಗ ರುಜಿನಿಗಳ ಹಬ್ಬುವ ಆತಂಕವಿದೆ. ಕೂಡಲೇ ಪಾಲಿಕೆಯವರು ಕಸವನ್ನು ಸ್ವಚ್ಛಗೊಳಿಸುವಂತೆ ಸ್ಥಳೀಯರು ಪಾಲಿಕೆಗೆ ಮನವಿ ಮಾಡಿದ್ದಾರೆ.
ನಗರ ಹೊರವಲಯದ ಬೇಗೂರು ಹೋಬಳಿಯ ವಿಟ್ಟಸಂದ್ರ ಗ್ರಾಮದಲ್ಲಿ ಸುಮಾರು ನಾಲ್ಕು ಎಕರೆ ಸರ್ಕಾರಿ ಜಾಗದಲ್ಲಿ ಕಸ ವರ್ಗಾವಣೆ ಕೇಂದ್ರವನ್ನು ಸ್ಥಾಪಿಸಲು ದಕ್ಷಿಣ ನಗರ ಪಾಲಿಕೆ ಮುಂದಾಗಿದೆ. ಸುಮಾರು 65 ಎಕರೆ ವಿಸ್ತೀರ್ಣದ ಸರ್ಕಾರಿ ಜಾಗದ ಪೈಕಿ 4 ಎಕರೆ ಪ್ರದೇಶವನ್ನು ಕಸ ವರ್ಗಾವಣೆ ಕೇಂದ್ರಕ್ಕಾಗಿ ಗುರುತಿಸಬೇಕಾಗಿದೆ. ಅದಕ್ಕಾಗಿ ಗಡಿ ಗುರುತಿಸಲು ಸರ್ವೇ ಕಾರ್ಯ ಆರಂಭಿಸಲಾಗುತ್ತಿದೆ. ಅಲ್ಲದೇ ಈ ಜಾಗದಲ್ಲಿ ಸುಸಜ್ಜಿತ ಪ್ಲಾಂಟ್ ಮತ್ತು ಕಾಂಪೋಸ್ಟ್ ಸೆಂಟರ್ ನಿರ್ಮಾಣ ಮಾಡಲು ಸುಮಾರು 2 ಎಕರೆ ಜಾಗ ಬಳಕೆ ಮಾಡಲು ನಿರ್ಧರಿಸಲಾಗಿದೆ.