ಚಿನ್ನ ಕಳ್ಳ ಸಾಗಣೆ ಸಂಬಂಧ ಡಿಜಿಪಿ ಮಲಮಗಳೂ ಆಗಿರುವ ನಟಿ ರನ್ಯಾ ರಾವ್ ಹಾಗೂ ಆಕೆಯ ಸ್ನೇಹಿತ, ಏಟ್ರಿಯಾ ಹೋಟಲ್ ಮಾಲೀಕರ ಮೊಮ್ಮಗ ತರುಣ್ ರಾಜು ಅವರು 25 ಬಾರಿ ದುಬೈಗೆ ಒಟ್ಟಿಗೆ ಪ್ರಯಾಣಿಸಿದ್ದರು ಎಂಬ ವಿಚಾರ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ತನಿಖೆಯಲ್ಲಿ ಬಯಲಾಗಿದೆ.
ಬೆಂಗಳೂರು : ಚಿನ್ನ ಕಳ್ಳ ಸಾಗಣೆ ಸಂಬಂಧ ಡಿಜಿಪಿ ಮಲಮಗಳೂ ಆಗಿರುವ ನಟಿ ರನ್ಯಾ ರಾವ್ ಹಾಗೂ ಆಕೆಯ ಸ್ನೇಹಿತ, ಏಟ್ರಿಯಾ ಹೋಟಲ್ ಮಾಲೀಕರ ಮೊಮ್ಮಗ ತರುಣ್ ರಾಜು ಅವರು 25 ಬಾರಿ ದುಬೈಗೆ ಒಟ್ಟಿಗೆ ಪ್ರಯಾಣಿಸಿದ್ದರು ಎಂಬ ವಿಚಾರ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ತನಿಖೆಯಲ್ಲಿ ಬಯಲಾಗಿದೆ.
ಹಲವು ವರ್ಷಗಳಿಂದ ರನ್ಯಾ ಹಾಗೂ ತರುಣ್ ಸ್ನೇಹಿತರಾಗಿದ್ದು, 2023ರಲ್ಲಿ ದುಬೈನಲ್ಲಿ ಅವರು ಪಾಲುದಾರಿಕೆಯಲ್ಲಿ ವಜ್ರ ಮಾರಾಟ ಕಂಪನಿ ಆರಂಭಿಸಿದ್ದರು. ನಂತರ 2024ರ ಡಿಸೆಂಬರ್‌ನಲ್ಲಿ ಆ ಕಂಪನಿಯಿಂದ ತರುಣ್ ಹೊರಗೆ ಬಂದಿದ್ದ. ಆದರೆ ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಇಬ್ಬರೂ ಕೈ ಜೋಡಿಸಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ದುಬೈನಲ್ಲಿ ಚಿನ್ನ ಖರೀದಿ ಸಲುವಾಗಿ ತರುಣ್‌ನ ಅಮೆರಿಕ ಮೂಲದ ಬ್ಯಾಂಕ್ ಖಾತೆಗೆ ರನ್ಯಾ ಹಣ ವರ್ಗಾಯಿಸಿದ್ದಾರೆ. ಬಳಿಕ ಆ ಹಣ ಬಳಸಿ ಚಿನ್ನ ಖರೀದಿಸಿದ ತರುಣ್, ನಂತರ ದುಬೈ ಕಸ್ಟಮ್ಸ್‌ನಲ್ಲಿ ತಾನು ಜಿನೇವಾ ಹಾಗೂ ಬ್ಯಾಂಕಾಂಗ್‌ಗೆ ಚಿನ್ನ ಸಾಗಿಸುವುದಾಗಿ ಘೋಷಿಸಿಕೊಂಡಿದ್ದ. ಇಲ್ಲಿ ಅಮೆರಿಕ ಪೌರತ್ವ ಹೊಂದಿದ್ದ ಕಾರಣ ಆತನಿಗೆ ಚಿನ್ನ ಸಾಗಣೆಗೆ ದುಬೈನಲ್ಲಿ ಅನುಕೂಲವಾಗಿದೆ. ಭಾರತದಲ್ಲಿ ಆತ ಅನಿವಾಸಿ ಭಾರತೀಯ ಗುರುತಿನ ಪತ್ರ ಸಹ ಪಡೆದಿದ್ದ. ತರುವಾಯ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾಗೆ ಆತ ಚಿನ್ನ ನೀಡುತ್ತಿದ್ದ. ಹೀಗೆ ಅವರು ದುಬೈಗೆ 25 ಬಾರಿ ಒಟ್ಟಿಗೆ ತೆರಳಿದ್ದರು. ಅದರಲ್ಲೂ ಬಹುತೇಕ ಬಾರಿ ರಾತ್ರಿ ಹೋಗಿ ಮರುದಿನ ಸಂಜೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಚಿನ್ನ ಕಳ್ಳ ಸಾಗಣೆ ವೇಳೆ ರನ್ಯಾ ದುಬೈನಿಂದ ಬೆಂಗಳೂರಿನ ವಿಮಾನ ಹತ್ತಿದರೆ, ತರುಣ್ ಹೈದಾರಾಬಾದ್‌ಗೆ ತೆರಳುತ್ತಿದ್ದ. ಹೀಗಾಗಿ ಚಿನ್ನ ಕಳ್ಳ ಸಾಗಣೆ ವೇಳೆ ಮಾಲಿನ ಸಮೇತ ರನ್ಯಾ ಮಾತ್ರ ಡಿಆರ್‌ಐ ಬಲೆಗೆ ಬಿದ್ದಿದ್ದರು. ಈ ಟ್ರಾವೆಲ್ ಹಿಸ್ಟರಿ ಸಹ ತರುಣ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಲು ಪ್ರಮುಖ ಕಾರಣ ಎಂದು ಮೂಲಗಳು ಹೇಳಿವೆ.