ಉತ್ತಮ ಮುಂಗಾರು : ಈ ಬಾರಿ ಗುರಿ ಮೀರಿ ಬಿತ್ತನೆ ಸಾಧ್ಯತೆ

Published : Aug 31, 2025, 08:50 AM IST
karnataka monsoon

ಸಾರಾಂಶ

 ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರಾಜ್ಯದಲ್ಲಿ ಬಿತ್ತನೆ ಚುರುಕಾಗಿದೆ. 82.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿತ್ತು. ಈಗಾಗಲೇ 78.33 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.95ರಷ್ಟು ಸಾಧನೆ  

 ಸಿದ್ದು ಚಿಕ್ಕಬಳ್ಳೇಕೆರೆ

  ಬೆಂಗಳೂರು :  ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರಾಜ್ಯದಲ್ಲಿ ಬಿತ್ತನೆ ಚುರುಕಾಗಿದೆ. 82.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ಅಂದಾಜಿಸಿತ್ತು. ಶುಕ್ರವಾರದವರೆಗೂ ಈಗಾಗಲೇ 78.33 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.95ರಷ್ಟು ಸಾಧನೆ ಆಗಿರುವುದರಿಂದ ಗುರಿ ಮೀರಿ ಬಿತ್ತನೆ ಆಗುವ ಸಾಧ್ಯತೆ ಇದೆ.

ಕೊಪ್ಪಳ ಜಿಲ್ಲೆಯಲ್ಲಿ 3.17ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯ ಪೈಕಿ 3.64 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.115 ರಷ್ಟು ಸಾಧನೆಯಾಗಿದೆ. ಬಾಗಲಕೋಟೆ (ಶೇ.109), ವಿಜಯನಗರ (ಶೇ.105), ಧಾರವಾಡ (ಶೇ.103) ಸೇರಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುರಿ ಮೀರಿ ಬಿತ್ತನೆಯಾಗಿದೆ. ಜುಲೈನಿಂದ ಇಲ್ಲಿಯವರೆಗೂ ಸಕಾಲಕ್ಕೆ ಮಳೆ ಬಂದಿದ್ದರಿಂದ ಇಲ್ಲಿ ಕೃಷಿಗೆ ಪೂರಕ ವಾತಾವರಣ ಉಂಟಾಗಿತ್ತು.

36.21 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಧಾನ್ಯ ಬಿತ್ತುವ ಗುರಿ ಹೊಂದಿದ್ದು, ಈಗಾಗಲೇ 34.91 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.96ರಷ್ಟು ಸಾಧನೆಯಾಗಿದೆ. 15.50 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿಗೆ ಬದಲಾಗಿ ಈಗಾಗಲೇ 18.14 ಲಕ್ಷ ಹೆಕ್ಟೇರ್‌ (ಶೇ.117)ನಲ್ಲಿ ಬಿತ್ತನೆಯಾಗಿದೆ. ಭತ್ತ, ರಾಗಿ, ಸಜ್ಜೆ ಸೇರಿ ಏಕದಳ ಧಾನ್ಯಗಳ ಬಿತ್ತನೆಯೂ ಆಶಾದಾಯಕವಾಗಿದೆ.

ವಾಣಿಜ್ಯ ಬೆಳೆ ಅಧಿಕ:

ವಾಣಿಜ್ಯ ಬೆಳೆಯಲ್ಲಿ ಈಗಾಗಲೇ ನಿರೀಕ್ಷೆಗಿಂತ ಅಧಿಕ ಬಿತ್ತನೆಯಾಗಿರುವುದು ವಿಶೇಷ. ಹತ್ತಿ, ಕಬ್ಬು, ತಂಬಾಕು ಸೇರಿ ವಾಣಿಜ್ಯ ಬೆಳೆಗಳು 15.12 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುವ ಅಂದಾಜು ಇತ್ತು. ಆದರೆ 15.80 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.104 ರಷ್ಟು ಸಾಧನೆಯಾಗಿದೆ. 23.06 ಲಕ್ಷ ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬಿತ್ತನೆ ಗುರಿ ಪೈಕಿ ಇಲ್ಲಿಯವರೆಗೂ 20.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.88 ರಷ್ಟು ಪ್ರಗತಿಯಾಗಿದೆ.

ಉದ್ದು ಬಿತ್ತನೆ ಭಾರೀ ಪ್ರಮಾಣದಲ್ಲಿ ಏರಿಕೆ (ಶೇ.126) ಆಗಿದೆ. ಅಲಸಂದೆ (ಶೇ.122), ಹೆಸರು (ಶೇ.102) ಬೆಳೆಗಳ ಬಿತ್ತನೆ ಪ್ರಮಾಣ ಹೆಚ್ಚಳವಾಗಿದೆ. ಆದರೆ ಎಣ್ಣೆ ಕಾಳುಗಳ ವಿಷಯಕ್ಕೆ ಬಂದರೆ, ಬಿತ್ತನೆ ಅಷ್ಟೊಂದು ಚುರುಕಾಗಿಲ್ಲ. 8.59 ಲಕ್ಷ ಹೆಕ್ಟೇರ್‌ನಲ್ಲಿ ಎಣ್ಣೆ ಕಾಳು ಬೆಳೆಗಳ ಬಿತ್ತನೆ ಗುರಿ ಇದ್ದು 7.30 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಇಲ್ಲಿಯವರೆಗೂ ಬಿತ್ತನೆಯಾಗಿದೆ. ಪ್ರಸಕ್ತ ರಸಗೊಬ್ಬರ ದಾಸ್ತಾನೂ ಸಾಕಷ್ಟು ಇರುವುದರಿಂದ ಒಟ್ಟಾರೆ ಬಿತ್ತನೆ ಗುರಿ ಮೀರುವ ಸಾಧ್ಯತೆ ಇದೆ.

ಕೆಲ ಜಿಲ್ಲೆಗಳ ಬಿತ್ತನೆ ವಿವರ ( ಲಕ್ಷ ಹೆಕ್ಟೇರ್‌ಗಳಲ್ಲಿ)

ಜಿಲ್ಲೆ ಬಿತ್ತನೆ ಗುರಿ ಸಾಧನೆ

ಕೊಪ್ಪಳ 3.17 3.64

ಬಾಗಲಕೋಟೆ 3.11 3.39

ವಿಜಯನಗರ 2.79 2.92

ಧಾರವಾಡ 2.82 2.91

ರಸಗೊಬ್ಬರ ಉಳಿಕೆ ದಾಸ್ತಾನು(ಮೆಟ್ರಿಕ್‌ ಟನ್‌)

ಡಿಎಪಿ 88,642

ಎಂಒಪಿ 54,899

ಕಾಂಪ್ಲೆಕ್ಸ್‌ 3,86,251

ಯೂರಿಯಾ 98,313

ಎಸ್‌ಎಸ್‌ಪಿ 30,811

ರಸಗೊಬ್ಬರ ಸರಬರಾಜಿನಲ್ಲಿ ಕೇಂದ್ರ ಸರ್ಕಾರ ವ್ಯತ್ಯಯ ಉಂಟು ಮಾಡಿದ್ದರೂ ಮುಂಗಾರು ಹಂಗಾಮಿನಲ್ಲಿ ಗುರಿ ಮೀರಿ ಬಿತ್ತನೆಯಾಗಲಿದೆ. ಉತ್ತರ ಪ್ರದೇಶ, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲೂ ರಸಗೊಬ್ಬರಕ್ಕೆ ಸಮಸ್ಯೆ ಉಂಟಾಗಿದೆ.

-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ

PREV
Read more Articles on

Recommended Stories

ಚಪ್ಪಲಿಯೊಳಗೆ ಸೇರಿಕೊಂಡಿದ್ದ ಕೊಳಕು ಮಂಡಲ ಕಚ್ಚಿ ಸಾವು!
ಪೊಲೀಸರು ಶೋಷಿತರ ಮೇಲಿನ ದೌರ್ಜನ್ಯ ತಡೆಯಲಿ: ಸಿಎಂ