ಬೆಂಗಳೂರು : ರಾಜ್ಯ ಸರ್ಕಾರದ ಎಲ್ಲ ನಾಗರಿಕ ಸೇವಾ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
2027ರ ಡಿಸೆಂಬರ್ ಅಂತ್ಯದವರೆಗೆ ನಡೆಯುವ ನೇಮಕಾತಿಗೆ ಈ ಆದೇಶ ಅನ್ವಯಿಸುತ್ತದೆ. ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು 5 ವರ್ಷ ವಯೋಮಿತಿ ಸಡಿಲಿಕೆಗೆ ಕೋರಿ ಸಲ್ಲಿಸಿದ್ದ ಮನವಿ ಪರಿಶೀಲಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಮೂರು ವರ್ಷಗಳ ಸಡಿಲಿಕೆಗೆ ಅನುಮೋದನೆ ನೀಡಿದ್ದಾರೆ. ಅದರಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಪ್ರಕಟಿಸಿದೆ.
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ನೇಮಕಾತಿಗಳನ್ನು ತಡೆ ಹಿಡಿಯಲಾಗಿತ್ತು. ಹೀಗಾಗಿ, ನೇಮಕಾತಿ ಇಲ್ಲದೇ ವಯಸ್ಸು ಮೀರಿ ಹೋಗಿದೆ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದರು.