;Resize=(412,232))
ಬೆಂಗಳೂರು : ಹಣಕಾಸು ಇಲಾಖೆಯು ಸಹಮತಿ ನೀಡಿರುವ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 65 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಶೀಘ್ರ ಅಧಿಸೂಚನೆ ಹೊರಡಿಸಿ, ನೇಮಕಾತಿ ಪರೀಕ್ಷೆ ನಡೆಸಿ ಆರು ತಿಂಗಳಲ್ಲಿ ಇಡೀ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಮಾಡಿದೆ.
ಈ ನಿಟ್ಟಿನಲ್ಲಿ ಅನುಮತಿ ನೀಡಿರುವ ಎಲ್ಲಾ ಹುದ್ದೆಗಳ ನೇಮಕಾತಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಚಿವ ಸಂಪುಟದ ನಿರ್ಧಾರದಂತೆ ಸರ್ಕಾರ ಇಬ್ಬರು ಉನ್ನತ ಅಧಿಕಾರಿಗಳಿಗೆ ಮೇಲುಸ್ತುವಾರಿ ಜವಾಬ್ದಾರಿ ವಹಿಸಿ ಆದೇಶಿಸಿದೆ.
2023-24ನೇ ಸಾಲಿನಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 40,009 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದದಲ್ಲಿ ಖಾಲಿ ಇರುವ 32,177 ಹುದ್ದೆಗಳ ಪೈಕಿ ಶೇ.80ರಷ್ಟು(25,741) ಹುದ್ದೆಗಳನ್ನು ಭರ್ತಿ ಮಾಡಲು ಸಹಮತಿ ನೀಡಲಾಗಿದೆ. ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಆಯ್ಕೆ ಪ್ರಾಧಿಕಾರಗಳಿಂದ ಕ್ರಿಯಾ ಯೋಜನೆಗಳನ್ನು ಪಡೆದು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲಾಗಿತ್ತು.
ಸಚಿವ ಸಂಪುಟವು 17 ಇಲಾಖೆಗಳಲ್ಲಿನ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ತ್ವರಿತಗತಿಯಲ್ಲಿ ಭರ್ತಿ ಮಾಡುವ ಜವಾಬ್ದಾರಿಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಿಗೆ, 34 ಇಲಾಖೆಗಳಲ್ಲಿನ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾದ ಹುದ್ದೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಜವಾಬ್ದಾರಿ ನೀಡಲು ನಿರ್ಣಯಿಸಿತ್ತು.
ಅದರಂತೆ, ಸರ್ಕಾರ ಇದೀಗ ಆ ಅಧಿಕಾರಿಗಳಿಗೆ 65,750 ಹುದ್ದೆಗಳ ನೇಮಕಾತಿಯ ಸಂಪೂರ್ಣ ಮೇಲುಸ್ತುವಾರಿ ಜವಾಬ್ದಾರಿ ವಹಿಸಿ ಆದೇಶಿಸಿದೆ. ಈ ಎಲ್ಲಾ ನೇರ ನೇಮಕಾತಿ ಹುದ್ದೆಗಳಿಗೆ ಮುಂದಿನ ಎರಡು ತಿಂಗಳುಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಮುಂದಿನ ನಾಲ್ಕು ತಿಂಗಳುಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನು ನಡೆಸಿ, ಆರು ತಿಂಗಳುಗಳಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನೇಮಕಾತಿ ಆದೇಶಗಳನ್ನು ಹೊರಡಿಸಬೇಕೆಂದು ಸೂಚಿಸಲಾಗಿದೆ.