ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಾಲೆಡ್ಜ್‌-ಹೆಲ್ತ್‌-ಇನ್ನೋವೇಶನ್‌-ರೀಸರ್ಚ್‌ ಸಿಟಿ ನಿರ್ಮಾಣಕ್ಕೆ 26ಕ್ಕೆ ಚಾಲನೆ

ಸಾರಾಂಶ

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಾಲೆಡ್ಜ್‌-ಹೆಲ್ತ್‌-ಇನ್ನೋವೇಶನ್‌-ರೀಸರ್ಚ್‌ (ಕೆಎಚ್ಐಆರ್) ಸಿಟಿಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.26ರಂದು ಚಾಲನೆ ನೀಡಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಬೆಂಗಳೂರು  :  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನಾಲೆಡ್ಜ್‌-ಹೆಲ್ತ್‌-ಇನ್ನೋವೇಶನ್‌-ರೀಸರ್ಚ್‌ (ಕೆಎಚ್ಐಆರ್) ಸಿಟಿಯ ಮೊದಲ ಹಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.26ರಂದು ಚಾಲನೆ ನೀಡಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳ ಗಣ್ಯ ಉದ್ಯಮಿಗಳು, ಶಿಕ್ಷಣ ತಜ್ಞರು, ಸಂಶೋಧಕರು ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಯೋಜನೆಯಡಿ ಎರಡು ಸಾವಿರ ಎಕರೆ ವಿಸ್ತೀರ್ಣದಲ್ಲಿ ಯೋಜಿತ ಕೆಎಚ್‌ಐಆರ್‌ ನಗರ ಮೈದಳೆಯಲಿದೆ. ಮೊದಲ ಹಂತದಲ್ಲಿ 500 ಎಕರೆಯಲ್ಲಿ ಕೆಎಚ್ಐಆರ್ ಸಿಟಿ ಸಾಕಾರಗೊಳ್ಳಲಿದೆ. 40 ಸಾವಿರ ಕೋಟಿ ರು. ಹೂಡಿಕೆಯ ಈ ಯೋಜನೆಯಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಸಿಂಗಪುರದ ಬಯೊಪೋಲಿಸ್‌, ರೀಸರ್ಚ್ ಟ್ರ್ಯಾಂಗಲ್ ಪಾರ್ಕ್‌, ಸೈನ್ಸ್‌ ಪಾರ್ಕ್‌, ಕೆಬಿಐಸಿ, ಅಮೆರಿಕದ ಬೋಸ್ಟನ್‌ ಇನ್ನೋವೇಶನ್‌ ಕ್ಲಸ್ಟರ್‌ ಇದಕ್ಕೆ ಮಾದರಿಯಾಗಿದೆ. ಜತೆಗೆ ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿರುವ ಹೈಟೆಕ್ ಸಿಟಿ, ಎಲೆಕ್ಟ್ರಾನಿಕ್ ಸಿಟಿಯ ಮಾನದಂಡಗಳನ್ನೂ ಇಟ್ಟುಕೊಳ್ಳಲಾಗಿದೆ. ದೊಡ್ಡಬಳ್ಳಾಪುರ- ಡಾಬಸಪೇಟೆ ನಡುವೆ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ಕಿ.ಮೀ. ದೂರದಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ ಎಂದಿದ್ದಾರೆ.

ಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಯೇ ಈ ಪರಿಕಲ್ಪನೆಯ ಆಧಾರಸ್ತಂಭಗಳಾಗಿವೆ. ಜೀವವಿಜ್ಞಾನಗಳು, ಭವಿಷ್ಯದ ಸಂಚಾರ ವ್ಯವಸ್ಥೆ, ಸೆಮಿಕಂಡಕ್ಟರ್‌, ಅಡ್ವಾನ್ಸ್‌ ಮ್ಯಾನುಫ್ಯಾಕ್ಚರಿಂಗ್‌ , ರಕ್ಷಣೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಗಳಿಗೆ ಇಲ್ಲಿ ಆದ್ಯತೆ ನೀಡಲಾಗುವುದು. ಈ ವಲಯಗಳಿಗೆ ಸಂಬಂಧಿಸಿದ ಜಾಗತಿಕ ಮಟ್ಟದ ಉತ್ಕೃಷ್ಟ ವಿಶ್ವವಿದ್ಯಾಲಯಗಳು, ಸಂಶೋಧನಾಲಯಗಳು, ಆಸ್ಪತ್ರೆಗಳು ಮತ್ತು ಕಂಪನಿಗಳು ಈ ಸಿಟಿಯಲ್ಲಿ ನೆಲೆಯೂರಿ, ತಮ್ಮ ಚಟುವಟಿಕೆ ಆರಂಭಿಸಲಿವೆ ಎಂದು ಪ್ರಕಟಣೆ ಮೂಲಕ ವಿವರಿಸಿದ್ದಾರೆ.

 ಸಲಹಾ ಸಮಿತಿ ರಚನೆ 

ಉದ್ದೇಶಿತ ಕೆಎಚ್ಐಆರ್ ಸಿಟಿಯಲ್ಲಿ ವಿಖ್ಯಾತ ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಗ್ಲೋಬಲ್ ಕೆಪಾಸಿಟಿ ಸೆಂಟರ್‌ಗಳು ಬರಲಿವೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಡಾ.ದೇವಿ ಶೆಟ್ಟಿ, ಕಿರಣ್‌ ಮಜುಂದಾರ್‌ ಷಾ, ಪ್ರಶಾಂತ ಪ್ರಕಾಶ, ಥಾಮಸ್ ಓಶಾ, ರಾಂಚ್‌ ಕಿಂಬಾಲ್‌, ಮೋಹನದಾಸ್‌ ಪೈ, ನಿಖಿಲ್ ಕಾಮತ್‌ ಮುಂತಾದ ಖ್ಯಾತನಾಮರನ್ನು ಒಳಗೊಂಡ ಸಲಹಾ ಸಮಿತಿ ರಚಿಸಲಾಗಿದೆ. ಇಲ್ಲಿ ಪ್ರತಿ ಎಕರೆಗೆ 100 ಜನರ ವಸತಿ ಇರುವಂತೆ ನೋಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Share this article