;Resize=(412,232))
ಬೆಂಗಳೂರು : ಗ್ರಾಮೀಣ ಆಸ್ತಿಗಳಿಗೆ ಇ-ಸ್ವತ್ತು ನೀಡಿಕೆಯಲ್ಲಿನ ವಿಳಂಬ ನಿವಾರಣೆಗೆ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಪ್ರಸಕ್ತ ವರ್ಷದ ಡಿ.31ರೊಳಗೆ 8 ಲಕ್ಷ ಗ್ರಾಮ ಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇಂದು ಚಾಲನೆ ನೀಡಿರುವ ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನ ನಮ್ಮ ಸರ್ಕಾರದ 6ನೇ ಗ್ಯಾರಂಟಿ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 1,50,69,090 ಕೋಟಿ ಗ್ರಾಮೀಣ ಆಸ್ತಿ ಇದ್ದು, ಈ ಪೈಕಿ ಈಗಾಗಲೇ 42,92,484 ಆಸ್ತಿಗಳಿಗೆ ನಮೂನೆ 11 ಹಾಗೂ 10,16,730 ಸ್ವತ್ತುಗಳಿಗೆ ನಮೂನೆ ‘ಬಿ’ ವಿತರಿಸಲಾಗಿದೆ. ಇನ್ನೂ 97,59,867 ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಾಗಿದ್ದು, ವ್ಯಾಜ್ಯರಹಿತ, ಸರ್ಕಾರಿ, ಅರಣ್ಯ ಭೂಮಿಯಲ್ಲಿಲ್ಲದ 80 ಲಕ್ಷ ಗ್ರಾಮೀಣ ಆಸ್ತಿಗಳಿಗೆ 2027ರ ಡಿಸೆಂಬರ್ 31ರ ಒಳಗಾಗಿ ಇ-ಸ್ವತ್ತು ನೀಡಲು 5,927 ಗ್ರಾಪಂಗಳಿಗೂ ಗುರಿ ನಿಗದಿಪಡಿಸಿರುವುದಾಗಿ ಸಚಿವರು ತಿಳಿಸಿದರು.
ರಾಜ್ಯದಲ್ಲಿ ಶೇ.61ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯುವಲ್ಲಿ ಸಾಕಷ್ಟು ವಿಳಂಬ ಆಗುತ್ತಿತ್ತು. ಈ ತೊಡಕು ನಿವಾರಿಸಲು ಆರ್‌ಡಿಪಿಆರ್ ಇಲಾಖೆ ಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿ, ಸಮಿತಿ ಶಿಫಾರಸಿನಂತೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025’ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ, ನಿಖರ, ಡಿಜಟಲೀಕರಿಸಿದ ಮತ್ತು ಭೌಗೋಳಿಕವಾಗಿ ಉಲ್ಲೇಖಿಸಲಾದ ಭೂಮಿ ಮತ್ತು ಆಸ್ತಿ ದಾಖಲೆ ವಿತರಿಸಲು ಭೂ-ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ 5,927 ಗ್ರಾಪಂಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಗ್ರಾಮಠಾಣಾ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ಕಂದಾಯ ಭೂಮಿಯಲ್ಲಿ ಅಭಿವೃದ್ಧಿಪಡಿಸಲಾದ ಪರಿವರ್ತನೆ ಆದ ಭೂಮಿ ಮತ್ತು ಪರಿವರ್ತನೆ ಆಗದ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ಪರಿವರ್ತನೆ ಆದ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ‘ಬಿ’ ಖರಾಬು ಭೂಮಿ ಇಲ್ಲದ ಸರ್ವೆ ನಂಬರ್ ಸ್ವತ್ತುಗಳಿಗೂ ಇ-ಸ್ವತ್ತು ನೀಡಲಾಗುವುದು. ನಂತರ ಭೂಪರಿವರ್ತನೆ ಆಗದ ಭೂಮಿ ಸ್ವತ್ತಿಗೂ ಇ-ಸ್ವತ್ತು ನೀಡಲು ಕೆಲವೇ ತಿಂಗಳುಗಳಲ್ಲಿ ನಿಯಮಗಳಿಗೆ ಮಾರ್ಪಾಡು ಮಾಡಿ ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದರು.
ಇ-ಸ್ವತ್ತು ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಇ-ಸ್ವತ್ತು 2.0 ತಂತ್ರಾಂಶ ಜಾರಿಯಲ್ಲಿದೆ. ಆದರೆ ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಸುರಕ್ಷಿತಗೊಳಿಸಲು ಮತ್ತು ಸರ್ಕಾರಿ ಆಸ್ತಿಗೆ, ಬಿ ಖರಾಬು ಭೂಮಿಗೆ ಇ-ಸ್ವತ್ತು ನೀಡುವುದನ್ನು ತಡೆಯಲು ಕಂದಾಯ ಇಲಾಖೆ ತಂತ್ರಾಂಶದ ಮಾಹಿತಿ ಸ್ವಯಂಚಾಲಿತವಾಗಿ ಪಡೆಯುವಂತೆ ಇ-ಸ್ವತ್ತು 03 ತಂತ್ರಾಂಶ ಅಭಿವೃದ್ದಿಪಡಿಸುತ್ತಿರುವುದಾಗಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಈ ಸ್ವತ್ತು ಏಕೆ ಬೇಕು?
ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ, ನಿಖರ, ಡಿಜಟಲೀಕರಿಸಿದ ಮತ್ತು ಭೌಗೋಳಿಕವಾಗಿ ಉಲ್ಲೇಖಿಸಲಾದ ಭೂಮಿ ಮತ್ತು ಆಸ್ತಿ ದಾಖಲೆ ವಿತರಿಸಲು ಭೂ-ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ 5,927 ಗ್ರಾಪಂಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಗ್ರಾಮಠಾಣಾ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ.
ಸಮಸ್ಯೆ ಆದರೆ ಇಲ್ಲಿಗೆ ಕರೆ ಮಾಡಿ
ಇ-ಸ್ವತ್ತು ಪಡೆಯುವಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಎದುರಾದರೆ, ಉಚಿತ ಸಹಾಯವಾಣಿ ಸಂಖ್ಯೆ 94834 76000 ಸಂಪರ್ಕಿಸಬಹುದು.
ಆಸ್ತಿ ಡಿಜಿಟಲೀಕರಣ
- ರಾಜ್ಯದಲ್ಲಿದೆ ಒಟ್ಟಾರೆ 1.50 ಕೋಟಿಯಷ್ಟು ಗ್ರಾಮೀಣ ಆಸ್ತಿ
- ಈ ಪೈಕಿ 32 ಲಕ್ಷ ಆಸ್ತಿಗೆ ಈಗಾಗಲೇ ನಮೂನೆ ಬಿ ವಿತರಣೆ
- ಬಾಕಿ ಉಳಿದ 80 ಆಸ್ತಿಗೆ ಇ ಸ್ವತ್ತು ನೀಡಲು ಈಗ ಯೋಜನೆ
- ವ್ಯಾಜ್ಯರಹಿತ, ಸರ್ಕಾರಿ, ಅರಣ್ಯ ಭೂಮಿ ಅಲ್ಲದ ಆಸ್ತಿಗೆ ಜಾರಿ
- ಈ ವರ್ಷದೊಳಗೆ 8 ಲಕ್ಷ ಆಸ್ತಿಗೆ ಇ ಸ್ವತ್ತು ವಿತರಣೆಯ ಗುರಿ
- ಮುಂದಿನ ವರ್ಷ ಅಂತ್ಯದೊಳಗೆ 80 ಲಕ್ಷ ಆಸ್ತಿಗೆ ಇ ಸ್ವತ್ತು