ಪೆಟ್ರೋಲ್‌ ಅಳತೆಯಲ್ಲೂ ಅಕ್ರಮ : ಸಚಿವ ರಿಜ್ವಾನ್‌

Published : Nov 19, 2026, 06:34 AM IST
Rizwan Arshad

ಸಾರಾಂಶ

ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಗರಿಷ್ಠ ಶೇ.31.2 ಎಥೆನಾಲ್‌ ಮಿಶ್ರಣ ಪತ್ತೆಯಾಗಿರುವುದರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ20 ಇಂಧನ ನೀತಿಯನ್ನು ತಕ್ಷಣವೇ ಮರುಪರಿಶೀಲಿಸಬೇಕು ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.

ಬೆಂಗಳೂರು : ರಾಜ್ಯದಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಗರಿಷ್ಠ ಶೇ.31.2 ಎಥೆನಾಲ್‌ ಮಿಶ್ರಣ ಪತ್ತೆಯಾಗಿರುವುದರಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ20 ಇಂಧನ ನೀತಿಯನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.

ಬುಧವಾರ ಈ ಕುರಿತು ಕೇಂದ್ರದ ಪೆಟ್ರೋಲಿಯಂ ಸಚಿವ ಹರ್ದೀಪ್‌ಸಿಂಗ್‌ ಪುರಿ ಅವರಿಗೆ ಪತ್ರ ಬರೆದಿದ್ದು, ರಾಜ್ಯದ ಪೆಟ್ರೋಲ್‌ ಬಂಕ್‌ಗಳಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿತ ಮಿತಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಎಥೆನಾಲ್‌ ಕಲಬೆರಕೆ ಮಾಡಲಾಗುತ್ತಿದೆ. ಗುಣಮಟ್ಟದ ಜತೆಗೆ ಅಳತೆಯಲ್ಲೂ ಸಾರ್ವಜನಿಕರಿಗೆ ಭಾರೀ ವಂಚನೆಯಾಗುತ್ತಿರುವ ಆಘಾತಕಾರಿ ಸತ್ಯಾಂಶ ರಾಜ್ಯ ಸರ್ಕಾರದ ವಿಶೇಷ ತಪಾಸಣೆಯಲ್ಲಿ ಪತ್ತೆಯಾಗಿದೆ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಪೆಟ್ರೋಲ್‌ನಲ್ಲಿ ಗರಿಷ್ಠ ಶೇ.20ರಷ್ಟು ಮಾತ್ರ ಎಥೆನಾಲ್ ಬೆರೆಸಲು ಅವಕಾಶವಿದೆ. ಆದರೆ ರಾಜ್ಯದ ಕಾನೂನು ಮಾಪನಶಾಸ್ತ್ರ ಇಲಾಖೆಯು ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್‌, ಬಿಪಿಸಿಎಲ್‌, ಎಚ್‌ಪಿಸಿಎಲ್‌ ಮತ್ತು ಎಂಆರ್‌ಪಿಎಲ್‌ಗೆ ಸೇರಿದ 63 ಪೆಟ್ರೋಲ್ ಬಂಕ್‌ಗಳಿಂದ ಇಂಧನ ಮಾದರಿಗಳನ್ನು ಸಂಗ್ರಹಿಸಿತ್ತು. ಮೊದಲಿಗೆ ಕಂಪನಿಗಳ ಸ್ವಂತ ಲ್ಯಾಬ್‌ಗಳಿಂದ ಬಂದ 42 ವರದಿಗಳಲ್ಲಿ ಎಥೆನಾಲ್ ಪ್ರಮಾಣವನ್ನೇ ನಮೂದಿಸದೆ ಮುಚ್ಚಿಡಲಾಗಿತ್ತು. ಇದರಿಂದ ಅನುಮಾನಗೊಂಡ ಸರ್ಕಾರ, ಎನ್‌ಎಬಿಎಲ್‌ (ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿ) ಮಾನ್ಯತೆ ಪಡೆದ ಸ್ವತಂತ್ರ ಪ್ರಯೋಗಾಲಯಗಳಲ್ಲಿ 14 ಮಾದರಿಗಳ ಮರುಪರೀಕ್ಷೆ ನಡೆಸಿದಾಗ, 11 ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚು ಹಾಗೂ ಕೆಲವೆಡೆ ಶೇ.31.2ರವರೆಗೆ ಎಥೆನಾಲ್ ಇರುವುದು ದೃಢಪಟ್ಟಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರೀಮಿಯಂ ಪ್ರೆಟ್ರೋಲ್‌ನಲ್ಲೂ ಪತ್ತೆ:

ಸಾಮಾನ್ಯ ಇಂಧನ ಮಾತ್ರವಲ್ಲದೆ, ವಾಹನ ಸವಾರರು ಎಂಜಿನ್ ಸುರಕ್ಷತೆಗಾಗಿ ಲೀಟರ್‌ಗೆ 120 ರಿಂದ 140 ಕೊಟ್ಟು ಖರೀದಿಸುವ ಪ್ರೀಮಿಯಂ ಪೆಟ್ರೋಲ್‌ನಲ್ಲೂ ಮಿತಿಮೀರಿದ ಎಥೆನಾಲ್ ಬೆರೆಸಿರುವುದು ಪತ್ತೆಯಾಗಿದೆ. ಇದರಿಂದಾಗಿ ವಾಹನಗಳ ಮೈಲೇಜ್ ಗಣನೀಯವಾಗಿ ಕುಸಿಯುತ್ತಿದ್ದು, ಎಂಜಿನ್ ವೈಫಲ್ಯ ಹಾಗೂ ರಿಪೇರಿ ವೆಚ್ಚದಿಂದ ಗ್ರಾಹಕರು ಹೈರಾಣಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದ 805 ಬಂಕ್‌ಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಬರೋಬ್ಬರಿ 768 ಬಂಕ್‌ಗಳಲ್ಲಿ (ಸುಮಾರು ಶೇ.90) ಅಳತೆ ಸಾಧನಗಳ ಮರು-ಮಾಪನಾಂಕ ನಿರ್ಣಯದ ಅಗತ್ಯ ಕಂಡುಬಂದಿದೆ. ಪರಿಶೀಲಿಸಲಾದ 3,071 ಮಾದರಿಗಳ ಪೈಕಿ 2,618 ಮಾದರಿಗಳಲ್ಲಿ ನಿಖರತೆ ಇರಲಿಲ್ಲ. ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇಂಧನ ಪೂರೈಸುತ್ತಿದ್ದ 101 ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿ, 6.66 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದಿದ್ದಾರೆ.

ಡಿಸ್ಪೆನ್ಸರ್‌ಗಳ ತಪಾಸಣಾ ಅವಧಿಯನ್ನು 1 ವರ್ಷದಿಂದ 2 ವರ್ಷಕ್ಕೆ ವಿಸ್ತರಿಸಿರುವುದು ಮತ್ತು ಖಾಸಗಿ ಏಜೆನ್ಸಿಗಳಿಗೆ ತಪಾಸಣೆಗೆ ಅವಕಾಶ ನೀಡಿರುವ ಕೇಂದ್ರದ ಹೊಸ ಆದೇಶವನ್ನು ಕರ್ನಾಟಕದಲ್ಲಿ ಜಾರಿಗೊಳಿಸದಿರಲು ನಿರ್ಧರಿಸಲಾಗಿದೆ. ಈ ಎರಡೂ ಅಧಿಸೂಚನೆಗಳನ್ನು ಮರುಪರಿಶೀಲಿಸುವಂತೆ ಕೋರಿ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಪ್ರಲ್ಹಾದ್ ಜೋಶಿ ಅವರಿಗೆ ರಾಜ್ಯ ಸರ್ಕಾರ ಪತ್ರವನ್ನೂ ಬರೆದಿದೆ. ಈ ವಿಷಯದಲ್ಲಿ ಎರಡೂ ಸಚಿವಾಲಯಗಳು ಒಟ್ಟಾಗಿ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. =

ಪ್ರಮುಖ ಬೇಡಿಕೆಗಳು:

ಬಂಕ್‌ಗಳಲ್ಲಿ ಮಾರಾಟವಾಗುವ ಪೆಟ್ರೋಲ್‌ನಲ್ಲಿರುವ ಎಥೆನಾಲ್ ಶೇಕಡಾವಾರು ಪ್ರಮಾಣವನ್ನು ಕಡ್ಡಾಯವಾಗಿ ನಾಮಫಲಕದಲ್ಲಿ ಪ್ರದರ್ಶಿಸಬೇಕು. ಗ್ರಾಹಕರಿಗೆ ನೀಡುವ ಪ್ರತಿ ರಸೀದಿಯಲ್ಲೂ ಎಥೆನಾಲ್ ಮಿಶ್ರಣದ ನಿಖರ ಪ್ರಮಾಣ ನಮೂದಿಸಬೇಕು. ವಾಹನಗಳ ಎಂಜಿನ್‌ಗಳು ‘ಇ20’ಗೆ ಸಂಪೂರ್ಣವಾಗಿ ಹೊಂದುವವರೆಗೆ ‘ಇ10’ ಹಾಗೂ ಎಥೆನಾಲ್ ರಹಿತ ಶುದ್ದ ಪೆಟ್ರೋಲ್ ಲಭ್ಯತೆ ಮುಂದುವರಿಸಬೇಕು. ತೈಲ ಕಂಪನಿಗಳ ಬದಲಿಗೆ ಎನ್‌ಎಬಿಎಲ್‌ ಮಾನ್ಯತೆ ಪಡೆದ ಸ್ವತಂತ್ರ ತೃತೀಯ ಸಂಸ್ಥೆಗಳ ಮೂಲಕ ನಿರಂತರ ಪರೀಕ್ಷೆ ನಡೆಸಬೇಕು. ಮಿತಿಮೀರಿದ ಎಥೆನಾಲ್ ಮಿಶ್ರಣದಿಂದ ವಾಹನದ ಎಂಜಿನ್ ಹಾನಿಗೊಳಗಾದರೆ ವಾಹನ ಮಾಲೀಕರಿಗೆ ಸೂಕ್ತ ನಷ್ಟ ಪರಿಹಾರ ನೀಡಲು ವಿಶೇಷ ನಿಧಿ ಸ್ಥಾಪಿಸಬೇಕು ಎಂದು ಸಚಿವ ರಿಜ್ವಾನ್‌ ಅರ್ಷದ್‌ ಪತ್ರದಲ್ಲಿ ಒತ್ತಾಯಿಸಿದ್ದಾರೆ. ==

ಸರ್ಕಾರದ ಜವಾಬ್ದಾರಿ

ಪರಿಸರಸ್ನೇಹಿ ಎಥೆನಾಲ್ ಮಿಶ್ರಣ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ, ಯೋಜನೆಯ ಹೆಸರಿನಲ್ಲಿ ಜನಸಾಮಾನ್ಯರನ್ನು ವಂಚಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಜನರ ಬೆವರಿನ ಹಣ ಹಾಗೂ ವಾಹನಗಳ ಸುರಕ್ಷತೆಯ ಜವಾಬ್ದಾರಿ ಸರ್ಕಾರದ ಮೇಲಿದೆ.

- ರಿಜ್ವಾನ್ ಅರ್ಷದ್, ಸಚಿವರು, ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ

ಗಂಭೀರ ಆರೋಪ

ಇತ್ತೀಚಿನ ತಪಾಸಣೆ ವೇಳೆ ಪೆಟ್ರೋಲ್‌ನಲ್ಲಿ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್‌ ಅಂಶ ಪತ್ತೆ

ಈ ಬಗ್ಗೆ ಕೇಂದ್ರ ಸಚಿವ ಪುರಿಗೆ ಪತ್ರ ಬರೆದು ಪೆಟ್ರೋಲಿಯಂ ನೀತಿ ಬದಲಾವಣೆಗೆ ಮನವಿ

ಪತ್ರದಲ್ಲಿ ಪೆಟ್ರೋಲ್‌ ವಿತರಣೆ ವೇಳೆ ಅಳತೆಯಲ್ಲೂ ಅಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ

ಜತೆಗೆ ಎಥೆನಾಲ್‌ ಪ್ರಮಾಣ ಹೆಚ್ಚಳದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ರಿಜ್ವಾನ್‌ ಉಲ್ಲೇಖ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರದ 6ನೇ ಗ್ಯಾರಂಟಿ ಇದೀಗ ಹಳ್ಳಿಗೂ ವಿಸ್ತರಣೆ
ಮಕ್ಕಳಿಗೆ ಕೆಎಎಸ್‌ ಹುದ್ದೆ ಕೊಡಲಿಸಲು ಐಪಿಎಸ್‌ ಅಧಿಕಾರಿಯಿಂದ ₹2 ಕೋಟಿ ಡೀಲ್‌