ಕೆಪಿಎಸ್ಸಿ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆ ವೇಳೆ ರಾಜ್ಯದ ಐಪಿಎಸ್‌ ಅಧಿಕಾರಿಯೊಬ್ಬರ ಇಬ್ಬರು ಹೆಣ್ಣುಮಕ್ಕಳಿಗೆ ಕೆಎಎಸ್‌ ಹುದ್ದೆ ಕೊಡಿಸಲು ಬರೋಬ್ಬರಿ ಎರಡು ಕೋಟಿ ರು. ಡೀಲ್‌ ನಡೆದಿರುವ ಆರೋಪದ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಬೆಂಗಳೂರು : ಕೆಪಿಎಸ್ಸಿ ನೇಮಕಾತಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ತನಿಖೆ ವೇಳೆ ರಾಜ್ಯದ ಐಪಿಎಸ್‌ ಅಧಿಕಾರಿಯೊಬ್ಬರ ಇಬ್ಬರು ಹೆಣ್ಣುಮಕ್ಕಳಿಗೆ ಕೆಎಎಸ್‌ ಹುದ್ದೆ ಕೊಡಿಸಲು ಬರೋಬ್ಬರಿ ಎರಡು ಕೋಟಿ ರು. ಡೀಲ್‌ ನಡೆದಿರುವ ಆರೋಪದ ಸ್ಫೋಟಕ ವಿಷಯ ಬೆಳಕಿಗೆ ಬಂದಿದೆ.

ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಬಂಧಿತ ಮಧ್ಯವರ್ತಿ ಬಸವರಾಜ ಕನ್ನಾಳೆ ಇ.ಡಿ ವಿಚಾರಣೆ ವೇಳೆ ಈ ವಿಚಾರ ಬಾಯ್ಬಿಟ್ಟಿದ್ದಾನೆ. ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರು ಕೆಎಎಸ್‌ ಸಂದರ್ಶನದ ವೇಳಾಪಟ್ಟಿ ಪ್ರಕಟಿಸುವ ಮುನ್ನ ನನ್ನನ್ನು ಸಂಪರ್ಕಿಸಿದ್ದರು. ಐಪಿಎಸ್ ಅಧಿಕಾರಿ ಎಂ.ವಿ.ಚಂದ್ರಕಾಂತ್‌ ಅವರ ಮನೆಗೆ ತೆರಳಿ ಅವರಿಂದ 2 ಕೋಟಿ ರು. ನಗದು ಪಡೆದುಕೊಂಡು ಬರುವಂತೆ ಸೂಚಿಸಿದ್ದರು. ಅದರಂತೆ ನಾನು ಐಪಿಎಸ್ ಅಧಿಕಾರಿ ಚಂದ್ರಕಾಂತ್‌ ಅವರ ಮನೆಗೆ ತೆರಳಿ ಎರಡು ಕೋಟಿ ಸಂಗ್ರಹಿಸಿದ್ದೆ. ಬಳಿಕ ಆ ಹಣವನ್ನು ಗಂಗ್ವಾರ್‌ಗೆ ತಲುಪಿಸಿದ್ದೆ ಎಂದು ವಿಚಾರಣೆ ವೇಳೆ ಕನ್ನಾಳೆ ಹೇಳಿಕೆ ನೀಡಿದ್ದಾನೆ.

ಮುಂದುವರೆದು ಇದು ಐಪಿಎಸ್ ಅಧಿಕಾರಿ ಎಂ.ವಿ.ಚಂದ್ರಕಾಂತ್‌ ಅವರ ಇಬ್ಬರು ಹೆಣ್ಣು ಮಕ್ಕಳಿಗೆ ಕೆಎಎಸ್‌ ಸಂದರ್ಶನದಲ್ಲಿ ಹೆಚ್ಚಿನ ಅಂಕ ನೀಡಲು ಪಡೆದಿರುವ ಮುಂಗಡ ಹಣವಾಗಿದೆ. ಈ ಹಣವನ್ನು ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ಗೆ ಹಸ್ತಾಂತರಿಸಬೇಕು ಎಂಬ ವಿಚಾರವನ್ನು ಗಂಗ್ವಾರ್‌ ಹೇಳಿದ್ದರು. ಅಂತೆಯೇ ಐಪಿಎಸ್ ಆಧಿಕಾರಿಯ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬರು ಕೆಎಎಸ್ ಸಂದರ್ಶನಕ್ಕೆ ಅರ್ಹತೆ ಪಡೆಯಲಿಲ್ಲ. ಈ ವಿಚಾರವಾಗಿ ಐಪಿಎಸ್‌ ಅಧಿಕಾರಿ ಮತ್ತು ಅವರ ಪತ್ನಿ ವಾಟ್ಸಾಪ್‌ ಕರೆ ಮಾಡಿ ಮಾಡಿದ್ದರು ಎಂದು ಕನ್ನಾಳೆ ಈ 2 ಕೋಟಿ ರು. ಡೀಲ್‌ ವೃತ್ತಾಂತವನ್ನು ಇ.ಡಿ ಅಧಿಕಾರಿಗಳ ಎದುರು ವಿವರಿಸಿದ್ದಾನೆ ಎಂದು ಇ.ಡಿ ಉನ್ನತ ಮೂಲಗಳು ತಿಳಿಸಿವೆ.

ಆಪ್ತ ಸ್ನೇಹಿತರಾದ ಬಳಿಕ ವ್ಯವಹಾರ:

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ 2019ನೇ ಸಾಲಿನಲ್ಲಿ ಬೀದರ್‌ ಜಿಪಂ ಸಿಇಒ ಆಗಿದ್ದಾಗ ಮೊದಲ ಬಾರಿಗೆ ನಾನು ಅವರನ್ನು ಭೇಟಿಯಾಗಿದ್ದೆ. ಬಳಿಕ ಅವರು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವಿಜಿಲೆನ್ಸ್‌ ಮತ್ತು ಐಟಿ ಹೆಚ್ಚುವರಿ ನಿರ್ದೇಶಕರಾಗಿದ್ದಾಗ ಇಬ್ಬರ ನಡುವೆ ಆಪ್ತ ಸ್ನೇಹ ಬೆಳೆಯಿತು. ನಂತರ ಗಂಗ್ವಾರ್‌ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿದ್ದಾಗ ಅವರ ಹಣಕಾಸು ವಹಿವಾಟು ನಿರ್ವಹಿಸಲು ನನ್ನನ್ನು ಬಳಸಿಕೊಂಡರು. ಇವರ ಹಣಕಾಸು ವಹಿವಾಟು ನಡೆಸಲು ಆನಂದರಾವ್‌ ವೃತ್ತದ ಆಕ್ಸಿಸ್‌ ಬ್ಯಾಂಕ್‌ ಶಾಖೆಯಲ್ಲಿ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಲಾಯಿತು. ಈ ಖಾತೆಯನ್ನು ಇಬ್ಬರು ನಿರ್ವಹಿಸುತ್ತಿದ್ದೆವು ಎಂದು ಗಂಗ್ವಾರ್‌ ಮತ್ತು ತನ್ನ ನಡುವಿನ ಸಂಬಂಧ, ವ್ಯವಹಾರಗಳ ಕುರಿತು ಇ.ಡಿ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಗಂಗ್ವಾರ್‌ಗೆ ಸೇರಿದ 15 ಕೋಟಿ ರು. ವ್ಯವಹಾರ:

ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕನಾಗಿದ್ದ ಜ್ಞಾನೇಂದ್ರ ಕುಮಾರ್‌ ಅವಧಿಯಲ್ಲಿ ನಡೆದ ಪಿಡಿಒ(ಹೈಕ.), ಕಿರಿಯ ಅಭಿಯಂತರ(ಜೆಇ) ಮತ್ತು ಕೃಷಿ ಅಧಿಕಾರಿ, ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ನಾನು ಶಿಫಾರಸು ಮಾಡಿದ ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ಒದಗಿಸಿದ್ದರು. ಜ್ಞಾನೇಂದ್ರ ಕುಮಾರ್‌ ಮತ್ತು ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಆಪ್ತರಾಗಿದ್ದು, ಕೆಪಿಎಸ್ಸಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಲ್ಲಿ ಭಾಗಿಯಾಗಿರಬಹುದು. ಆದರೆ, ನಾನು ಮಾತ್ರ ಕೆಪಿಎಸ್ಸಿಯ ಯಾವುದೇ ಸದಸ್ಯರು ಅಥವಾ ಅಧಿಕಾರಿಯನ್ನು ಭೇಟಿಯಾಗಿಲ್ಲ. ಗಂಗ್ವಾರ್‌ಗೆ ಸೇರಿದ ಸುಮಾರು 15 ಕೋಟಿ ರು. ಅನ್ನು ನಾನು ನಿರ್ವಹಿಸಿದ್ದೇನೆ ಎಂದು ಬಸವರಾಜ ಕನ್ನಾಳೆ ಇ.ಡಿ. ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳಿಂದ ತಿಂದು ಬಂದಿದೆ.

ಕರೆ ಸ್ವೀಕರಿಸದ ಐಪಿಎಸ್‌ ಅಧಿಕಾರಿ

ಐಪಿಎಸ್‌ ಅಧಿಕಾರಿ ಎಂ.ವಿ.ಚಂದ್ರಕಾಂತ್‌ ಅವರು ತಮ್ಮ ಇಬ್ಬರು ಪುತ್ರಿಯರಿಗೆ ಕೆಎಎಸ್‌ ಸಂದರ್ಶನದಲ್ಲಿ ಹೆಚ್ಚಿನ ಅಂಕ ಕೊಡಿಸಲು 2 ಕೋಟಿ ರು. ನೀಡಿದ ಆರೋಪದ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ವು ಹಲವು ಬಾರಿ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿತು. ಆದರೆ, ಐಪಿಎಸ್‌ ಅಧಿಕಾರಿ ಕರೆ ಸ್ವೀಕರಿಸಲಿಲ್ಲ.

ಬೆಳಕಿಗೆ ಬಂದಿದ್ದು ಹೇಗೆ?

ಪಶುವೈದ್ಯ ನೇಮಕ ಅಕ್ರಮ ಬಗ್ಗೆ ಇ.ಡಿ ಅಧಿಕಾರಿಗಳ ತನಿಖೆ

ಈ ವೇಳೆ ಐಪಿಎಸ್‌ ಚಂದ್ರಕಾಂತ್‌ ಅಕ್ರಮ ಬಗ್ಗೆ ಕನ್ನಾಳೆ ಮಾಹಿತಿ

ಇಬ್ಬರು ಪುತ್ರಿಯರಿಗೆ ಕೆಎಎಸ್‌ ಹುದ್ದೆ ಕೊಡಿಸಲು ಐಪಿಎಸ್‌ ಅಕ್ರಮ

ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಸಾಹುಕಾರ್‌ ಜೊತೆ ₹2 ಕೋಟಿ ಡೀಲ್‌

ಚಂದ್ರಕಾಂತ್‌ರಿಂದ ₹2 ಕೋಟಿ ಸಂಗ್ರಹಿಸಿ ಜ್ಞಾನೇಂದ್ರಗೆ ನೀಡಿದ್ದೆ

ಈ ಹಣವನ್ನು ಸಾಹುಕಾರ್‌ಗೆ ನೀಡಬೇಕು ಎಂದಿದ್ದರು ಜ್ಞಾನೇಂದ್ರ