ಗ್ಯಾರಂಟಿ ಯೋಜನೆ ಅನುದಾನ ಈ ಬಾರಿ 966 ಕೋಟಿ ರು. ಕಡಿತ - ಒಟ್ಟು 51,034 ಕೋಟಿ ರು. ಗ್ಯಾರಂಟಿಗೆ ಮೀಸಲು

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ಈ ಬಾರಿ 51,034 ಕೋಟಿ ರು. ಒದಗಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 966 ಕೋಟಿ ರು. ಕಡಿತ ಮಾಡಲಾಗಿದೆ

  ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ಈ ಬಾರಿ 51,034 ಕೋಟಿ ರು. ಒದಗಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 966 ಕೋಟಿ ರು. ಕಡಿತ ಮಾಡಲಾಗಿದೆ

ಕಳೆದ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರು. ಮೀಸಲಿಡಲಾಗಿತ್ತು. ಈ ಬಾರಿ ಬಜೆಟ್‌ನಲ್ಲಿ 51.034 ಕೋಟಿ ರು. ನೀಡಲಾಗಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಮತ್ತು ಅನ್ನಭಾಗ್ಯ ಯೋಜನೆಗಳ ಮೂಲಕ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲಾಗಿದೆ.

ಬಜೆಟ್ ಮಂಡಿಸುವ ವೇಳೆ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜದಲ್ಲಿ ಬಡವರ ನೋವನ್ನು ನಿವಾರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಅವು ಉಚಿತ ಉಡುಗೊರೆಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಎರಡು ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವ ಜೊತೆಗೆ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿಎಸ್‌ಡಿಪಿಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತು ಪಾಲಿಸಲಾಗಿದೆ ಎಂದಿದ್ದಾರೆ.

ಅನ್ನಭಾಗ್ಯ ಯೋಜನೆಗೆ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಅನುದಾನ ನೀಡಲಾಗಿದ್ದು, ಇನ್ನುಳಿದ ಗ್ಯಾರಂಟಿ ಯೋಜನೆಗಳು ಹೆಚ್ಚಿನ ಪಾಲು ನೀಡಲಾಗಿದೆ. ಅನ್ನಭಾಗ್ಯ ಯೋಜನೆಗೆ ಕಳೆದ ಬಾರಿ 9,963 ಕೋಟಿ ರು. ಅನುದಾನ ನೀಡಿದರೆ, ಈ ಬಾರಿ 8,275 ಕೋಟಿ ರು. ಒದಗಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಕಳೆದ ಬಾರಿಯಂತೆ ಈ ಬಾರಿಯೂ 28,608 ಕೋಟಿ ರು. ಒದಗಿಸಲಾಗಿದೆ. ಶಕ್ತಿ ಯೋಜನೆಗೆ ಕಳೆದ ಬಾರಿ 5,015 ಕೋಟಿ ರು. ಒದಗಿಸಿದರೆ, ಈ ಬಾರಿ 5300 ಕೋಟಿ ರು. ನೀಡಲಾಗಿದೆ. ಗೃಹಜ್ಯೋತಿಗೆ ಕಳೆದ ಬಜೆಟ್‌ನಲ್ಲಿ 9,657 ಕೋಟಿ ರು. ಮೀಸಲಿಟ್ಟಿದ್ದರೆ, ಈ ಬಾರಿ 10,100 ಕೋಟಿ ರು. ಒದಗಿಸಲಾಗಿದೆ. ಯುವ ನಿಧಿಗೆ ಅನುದಾನ ಒದಗಿಸಿರುವ ಬಗ್ಗೆ ತಿಳಿಸಿಲ್ಲ. ಆದರೆ, 286 ಕೋಟಿ ರು. ನೇರನಗದು ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Share this article