ಬೆಂಗಳೂರು : ಭಾರತದ ಆರ್ಥಿಕತೆ ಸತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಬಹುಶಃ ಟ್ರಂಪ್ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ.
ಭಾರತದಲ್ಲಿ ಒಬ್ಬ ಸಣ್ಣ ವ್ಯಾಪಾರಿ ಮತ್ತು ಬಡರೈತ ಕೂಡ ತನ್ನ ವ್ಯವಹಾರವನ್ನು ಬಹಳ ಘನತೆ, ಸಮಗ್ರತೆ ಮತ್ತು ಮಾನವೀಯತೆಯಿಂದ ನಡೆಸುತ್ತಿದ್ದಾನೆ. ಈ ಮೂಲಕ ಟ್ರಂಪ್ ಅವರಿಗೆ ಅನೇಕ ಪಾಠಗಳನ್ನು ಕಲಿಸಬಹುದು. ಎಲ್ಲರಂತೆ ನಾನು ಕೂಡ ಭಾರತದ ಆರ್ಥಿಕತೆಯ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಆಧಾರರಹಿತ ಮತ್ತು ಕೋಪದ ಹೇಳಿಕೆಗಳಿಂದ ಆಶ್ಚರ್ಯಚಕಿತನಾಗಿದ್ದೇನೆ.
ಆಧುನಿಕ ಇತಿಹಾಸದಲ್ಲಿ ಇಷ್ಟೊಂದು ಅಸ್ಥಿರ, ಅನಾಗರಿಕ ಮತ್ತು ಬೇಜವಾಬ್ದಾರಿಯುತ ರಾಷ್ಟ್ರಮುಖ್ಯಸ್ಥರನ್ನು ನಾನು ಕಂಡಿಲ್ಲ ಎಂದು ಹೇಳಿದ್ದಾರೆ. ಟ್ರಂಪ್ ಅವರು ಭಾರತದೊಂದಿಗೆ ಮಾತ್ರವಲ್ಲ, ಜಗತ್ತಿನಾದ್ಯಂತ ಪ್ರತೀ ದೇಶದೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ. ಅವರು ತಮ್ಮ ದೀರ್ಘಕಾಲದ ಮಿತ್ರರಾಷ್ಟ್ರಗಳನ್ನು ಸಹ ಬಿಟ್ಟಿಲ್ಲ. ಅವರಲ್ಲಿ ಮೂಲಭೂತವಾಗಿ ಏನೋ ಸಮಸ್ಯೆ ಇದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತವು ನಮ್ಮ ರಾಷ್ಟ್ರೀಯ ಹಿತಾಸಕ್ತಿಯನ್ನು ರಾಜಿ ಮಾಡಿಕೊಂಡಿಲ್ಲ. ಈ ಬಗ್ಗೆ ನನಗೆ ಅತೀವ ಸಂತೋಷ ಮತ್ತು ಹೆಮ್ಮೆ ಇದೆ ಎಂದಿದ್ದಾರೆ.
ರಾಜತಾಂತ್ರಿಕತೆ ಅಥವಾ ರಾಜಕೀಯದ ಮೂಲಕ ಅದನ್ನು ಪತ್ತೆ ಹಚ್ಚಲು ಅಥವಾ ಪರಿಹರಿಸಲು ಸಾಧ್ಯವಿಲ್ಲ. ಅವರ ಕೋಪದ ಸ್ವಭಾವದ ಬಗ್ಗೆ ಇದಕ್ಕಿಂತ ಹೆಚ್ಚಿಗೆ ಹೇಳುವುದು ಸರಿಯಲ್ಲ. ಏಕೆಂದರೆ, ಅದು ನಮ್ಮ ತತ್ವಾದರ್ಶಗಳಿಗೆ ಬದ್ಧತೆ ಕಡಿಮೆ ಎನಿಸುತ್ತದೆ ಎಂದಿದ್ದಾರೆ. ಟ್ರಂಪ್ ಅವರ ಬೆದರಿಕೆಗೆ ಭಾರತ ಹೆದರುವುದಿಲ್ಲ ಮತ್ತು ಅಂಥ ಬೆದರಿಕೆಗಳಿಂದ ಭಾರತ ಎಂದಿಗೂ ಇನ್ನೊಬ್ಬರ ತಾಳಕ್ಕೆ ತಕ್ಕಂತೆ ನಡೆಯುವುದಿಲ್ಲ ಎಂದು ಈಗಾಗಲೇ ತೋರಿಸಿಕೊಟ್ಟಿದೆ ಎಂದು ಗೌಡರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಮತ್ತು ಜಗತ್ತಿನ ಐದನೇ ಅತೀದೊಡ್ಡ ಆರ್ಥಿಕತೆ ಆಗಿದೆ. ನಮ್ಮ ಆರ್ಥಿಕತೆಯನ್ನು ‘ಸತ್ತಿದೆ’ ಎಂದು ಹೇಳಲು ಟ್ರಂಪ್ ಅವರು ಕುರುಡರಾಗಿರಬೇಕು ಇಲ್ಲವೇ ಅಜ್ಞಾನಿಗಳಾಗಿರಬೇಕು. ಅವರ ಹೇಳಿಕೆಗಳನ್ನು ಆನಂದಿಸಿ ಭಾರತದಲ್ಲಿ ಅವರ ಭ್ರಮೆಯ ವಕ್ತಾರರಾಗಲು ಹೊರಟಿರುವ ವಿರೋಧ ಪಕ್ಷದ ಕೆಲ ನಾಯಕರಿಗೆ ಎಚ್ಚರಿಕೆಯ ಮಾತು ಹೇಳ ಬಯಸುತ್ತೇನೆ. ಅವರ ಹತಾಶೆಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಅವರು ತಮ್ಮನ್ನು ಮತ್ತು ತಮ್ಮ ಪಕ್ಷಗಳಿಗೆ ಹಾನಿ ಮಾಡಿಕೊಳ್ಳಬಾರದು. ಟ್ರಂಪ್ ಅವರೊಂದಿಗೆ ಇತಿಹಾಸದ ಕಸದ ಬುಟ್ಟಿಗೆ ಬಹುಬೇಗನೆ ಸೇರಬಾರದು ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.