ರಾಜ್ಯಾದ್ಯಂತ ಹಿಂಗಾರು ಮಳೆಯ ಅಬ್ಬರ - ಬೆಂಗಳೂರು ಸೇರಿ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಅವಾಂತರ

Published : Oct 22, 2024, 08:08 AM ISTUpdated : Oct 22, 2024, 08:09 AM IST
Crop Loss

ಸಾರಾಂಶ

ರಾಜಧಾನಿ ಬೆಂಗಳೂರು, ಹಾವೇರಿ, ಕೊಪ್ಪಳ, ದಾವಣಗೆರೆ ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದೆ.

ಬೆಂಗಳೂರು : ರಾಜಧಾನಿ ಬೆಂಗಳೂರು, ಹಾವೇರಿ, ಕೊಪ್ಪಳ, ದಾವಣಗೆರೆ ಸೇರಿ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದೆ.

ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಹಾವೇರಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಸವಣೂರು ತಾಲೂಕಿನ ಬರದೂರ, ಹಾನಗಲ್ಲ ತಾಲೂಕಿನ ಕಂಚಿನೆಗಳೂರು, ಹಾವೇರಿ ತಾಲೂಕಿನ ತಿಮ್ಮಾಪುರ ಗ್ರಾಮಗಳು ಜಲಾವೃತಗೊಂಡಿವೆ. ಬರದೂರ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳು ನೀರಲ್ಲಿ ಮುಳುಗಿವೆ. ಈ ಮಧ್ಯೆ, ಬರದೂರ ಗ್ರಾಮದ ಹೊರವಲಯದ ಮಠದಲ್ಲಿ ವಾಸ್ತವ್ಯ ಮಾಡಿದ್ದ ಪಂಡರಾಪುರಕ್ಕೆ ಹೊರಟಿದ್ದ ಸುಮಾರು 28 ಭಕ್ತರನ್ನು ಸೋಮವಾರ ರಕ್ಷಣೆ ಮಾಡಲಾಗಿದೆ. ಬಾಜಿರಾಯನ ಹಳ್ಳದ ನೀರಿನಿಂದ ಮಠ ಜಲದಿಗ್ಭಂದನಕ್ಕೆ ಒಳಗಾಗಿದೆ. ಬರದೂರು ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಹಾನಗಲ್‌ ತಾಲೂಕಿನ ಕಂಚಿನೆಗಳೂರು ಗ್ರಾಮಕ್ಕೂ ನೀರು ನುಗ್ಗಿದ್ದು, ಸುಮಾರು 50ಕ್ಕೂ ಹೆಚ್ಚು ಮನೆಗಳು ನೀರಲ್ಲಿ ಮುಳುಗಿವೆ.

ಬೀದರ್‌ ಜಿಲ್ಲೆಯ ಹುಲಸೂರ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಸಿಡಿಲಿನ ಹೊಡೆತಕ್ಕೆ ಎಮ್ಮೆಯೊಂದು ಬಲಿಯಾಗಿದೆ. ಜಮೀನಿನಲ್ಲಿನ ಬೇವಿನ ಮರದ ಕೆಳಗೆ ಕಟ್ಟಿ ಹಾಕಿದ್ದಾಗ ಸಿಡಿಲು ಬಡಿಯಿತು. ರಾಮನಗರ ಜಿಲ್ಲೆ ಕುದೂರಿನಲ್ಲಿ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು, ಸುತ್ತಮುತ್ತಲ 8-10 ಗ್ರಾಮಗಳ ಸಂಪರ್ಕ ಕಡಿದು ಹೋಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಸೋಮವಾರ 6ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ.

ಮೈಸೂರಿನಲ್ಲಿ ಸುಮಾರು 3 ತಾಸು ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದರೆ, ಅನೇಕ ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು.

ಇದೇ ವೇಳೆ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಒಂದು ವಾರ ಮುಂದೂಡುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ. ಈ ಮಧ್ಯೆ ಮಂಗಳವಾರವೂ ರಾಜ್ಯದ ವಿವಿಧೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾರಿ ಪ್ರಮಾಣದ ಬೆಳೆ ಹಾನಿ

ಕಳೆದ 2-3 ದಿನಗಳಿಂದ ರಾಜ್ಯಾದ್ಯಂತ ಸುರಿಯುತ್ತಿರುವ ಮಳೆಗೆ ಸುಮಾರು 36 ಸಾವಿರ ಹೆಕ್ಟೇರ್‌ ಪ್ರದೇಶವ್ಯಾಪ್ತಿಯ ಬೆಳೆ ಹಾನಿಗೊಳಗಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 25 ಸಾವಿರ ಹೆಕ್ಟೇರ್‌ ಅಡಕೆ ಬೆಳೆಗೆ ಕೊಳೆ ರೋಗ ತಗುಲಿದೆ. 3,000 ಹೆಕ್ಟೇರ್‌ ಪ್ರದೇಶದಲ್ಲಿನ ಈರುಳ್ಳಿ ಬೆಳೆ ಹಾನಿಯಾಗಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನಲ್ಲಿ 850 ಎಕರೆಗೂ ಹೆಚ್ಚು ಪ್ರದೇಶವ್ಯಾಪ್ತಿಯ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ.

 ಕೊಪ್ಪಳ ಜಿಲ್ಲೆಯಲ್ಲಿ 350 ಹೆಕ್ಟೇರ್ ಭತ್ತದ ಬೆಳೆ ಹಾನಿಯಾಗಿದ್ದರೆ, 900 ಹೆಕ್ಟೇರ್‌ಗೂ ಅಧಿಕ ವ್ಯಾಪ್ತಿಯ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಬೆಳೆಗಳು ಹಾನಿಗೊಳಗಾಗಿವೆ ಹಾವೇರಿ ಜಿಲ್ಲೆಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ, ಕಡ್ಲೆ ಬೆಳೆ ಹಾನಿಯಾಗಿದೆ. ತುಮಕೂರಿನ ಪಾವಗಡದಲ್ಲಿ ಕಟಾವಿಗೆ ಬಂದಿದ್ದ 3 ಎಕರೆ ಭತ್ತದ ಬೆಳೆ ಸಂಪೂರ್ಣ ನೀರು ಪಾಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ದ್ವೇಷ ಭಾಷಣ ತಡೆ ಬಿಲ್‌ ತಮ್ಮ ಬಳಿಯೇ ಇಟ್ಟುಕೊಂಡ ಗೌರ್‍ನರ್‌
ವಸತಿ ಯೋಜನೆಯಡಿ ಜಿಲ್ಲೆಗೆ 2500 ನಿವೇಶನ ಮಂಜೂರು