ಜೀವನಾಂಶ ಬಾಕಿ ಇದ್ದರೆ ವಿಚ್ಛೇದನ ಅರ್ಜಿ ವಿಚಾರಣೆಗೆ ತಡೆ- ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್‌ ಸೂಚನೆ

Published : Oct 05, 2024, 12:24 PM IST
Karnataka highcourt

ಸಾರಾಂಶ

ನ್ಯಾಯಾಲಯದ ಆದೇಶದಂತೆ ಪತ್ನಿಗೆ ಜೀವನಾಂಶ ಪಾವತಿಸುವವರೆಗೂ ಪತಿ ದಾಖಲಿಸಿರುವ ವಿಚ್ಛೇದನ ಅರ್ಜಿ ಕುರಿತ ವಿಚಾರಣೆಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು : ನ್ಯಾಯಾಲಯದ ಆದೇಶದಂತೆ ಪತ್ನಿಗೆ ಜೀವನಾಂಶ ಪಾವತಿಸುವವರೆಗೂ ಪತಿ ದಾಖಲಿಸಿರುವ ವಿಚ್ಛೇದನ ಅರ್ಜಿ ಕುರಿತ ವಿಚಾರಣೆಗೆ ನ್ಯಾಯಾಲಯಗಳು ತಡೆಯಾಜ್ಞೆ ನೀಡಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.

ಮಧ್ಯಂತರ ಜೀವನಾಂಶದ ಹಿಂಬಾಕಿ ಪಾವತಿಸದ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿ ಪತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಹೈಕೋರ್ಟ್‌ ಮೊರೆ ಹೋಗಿದ್ದರು.

ಮಹಿಳೆಯ ಮನವಿ ಆಲಿಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಪೀಠ, ವಿಚ್ಛೇದನ ಕೋರಿದ ಅರ್ಜಿಗಳಲ್ಲಿ ಪತ್ನಿಗೆ ಮಧ್ಯಂತರ ಜೀವನಾಂಶ ಪಾವತಿಸುವಂತೆ ಹೊರಡಿಸಿದ ನ್ಯಾಯಾಲಯದ ಆದೇಶ ಪಾಲಿಸದ ಹಲವು ಪ್ರಕರಣಗಳು ಹೈಕೋರ್ಟ್‌ ಮುಂದೆ ಬರುತ್ತಿವೆ. ಹೀಗಾಗಿ ಮಧ್ಯಂತರ ಜೀವನಾಂಶ ಪಾವತಿ ಮಾಡದ ಸಂದರ್ಭದಲ್ಲಿ ನ್ಯಾಯಾಲಯಗಳು ವಿಚ್ಛೇದನಕ್ಕಾಗಿ ಪತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ತಡೆ ನೀಡಬಹುದು. ಅದನ್ನು ಬಿಟ್ಟು ಮಧ್ಯಂತರ ಜೀವನಾಂಶದ ವಸೂಲಾತಿಗೆ ಸಂಬಂಧಪಟ್ಟ ಅಮಲ್ಜಾರಿ ಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಪತ್ನಿಗೆ ಸೂಚಿಸಲಾಗದು ಎಂದು ತಿಳಿಸಿದೆ.

ಪ್ರಕರಣದ ವಿವರ:

ಪ್ರಕರಣದಲ್ಲಿ ಅರ್ಜಿದಾರೆಯ ಪತಿಯು ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ 2016ರಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ ಪತ್ನಿಗೆ 2016ರಿಂದ ವಿಚ್ಛೇದನ ಕೋರಿದ ಮುಖ್ಯ ಅರ್ಜಿಯ ಇತ್ಯರ್ಥವರೆಗೆ ಮಧ್ಯಂತರ ಜೀವನಾಂಶವಾಗಿ ಪತ್ನಿಗೆ ಮಾಸಿಕ 15 ಸಾವಿರ ರು. ಮಧ್ಯಂತರ ಪರಿಹಾರ ನೀಡಬೇಕು. ಜೀವನಾಂಶದ ಹಿಂಬಾಕಿಯನ್ನು ಒಂದು ತಿಂಗಳಲ್ಲಿ ಪಾವತಿಸಬೇಕು ಎಂದು 2019ರಲ್ಲಿ ಪತಿಗೆ ಆದೇಶಿಸಿತ್ತು. ಆದರೆ, ಪತಿ ಜೀವನಾಂಶದ ಹಿಂಬಾಕಿ ಪಾಲಿಸದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿ, ಪತಿ ಜೀವನಾಂಶದ ಹಿಂಬಾಕಿ ಪಾವತಿಸುವರೆಗೆ ವಿಚ್ಛೇದನ ಕೋರಿಕೆ ಕುರಿತ ಮುಖ್ಯ ಅರ್ಜಿ ವಿಚಾರಣೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಆ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಅದರ ವಿಚಾರಣೆ ನಡೆಸಿದ ಹೈಕೋರ್ಟ್‌, ಮಧ್ಯಂತರ ಜೀವನಾಂಶ ಪಾವತಿಗೆ ಕೋರ್ಟ್‌ ಹೊರಡಿಸಿದ ಆದೇಶವನ್ನು ಪತಿ ಪಾಲಿಸದಿರುವ ನಡೆಯನ್ನು ನ್ಯಾಯಾಲಯ ಸಹಿಸುವುದಿಲ್ಲ. ನ್ಯಾಯಾಲಯ ಆದೇಶಕ್ಕೆ ಗೌರವ ತೋರದ ಪಕ್ಷಗಾರನ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಪತ್ನಿಯ ಅರ್ಜಿ ಪುರಸ್ಕರಿಸಿದ ಹೈಕೋರ್ಟ್‌, ಪತ್ನಿಯ ಅರ್ಜಿ ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು. ಹಾಗೆಯೇ, ಪತ್ನಿಗೆ ಮಧ್ಯಂತರ ಜೀವನಾಂಶದ ಹಿಂಬಾಕಿ ಪಾವತಿಸುವರೆಗೂ ವಿಚ್ಛೇದನ ಕೋರಿದ ಪತಿಯ ಅರ್ಜಿ ಕುರಿತ ಕೌಟುಂಬಿಕ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲಾಗುತ್ತಿದೆ. ಪತಿಯು ಪತ್ನಿಗೆ ಜೀವನಾಂಶವನ್ನು ಪಾವತಿಸಿದರೆ, ವಿಚ್ಛೇದನ ಕೋರಿದ ಅರ್ಜಿಯನ್ನು ಆರು ತಿಂಗಳಲ್ಲಿ ಕೌಟುಂಬಿಕ ನ್ಯಾಯಾಲಯವು ವಿಲೇವಾರಿ ಮಾಡಬೇಕು ಎಂದು ಆದೇಶಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಹಣ್ಣು ಬದಲು ಬಟ್ಟೆ ಸಂಗ್ರಹಿಸಿದ್ದ ಕೋಲ್ಡ್‌ ಸ್ಟೋರೇಜ್‌!
ರಾಜಧಾನಿಯಲ್ಲಿ ನಿಲ್ಲದ ಡ್ರಗ್ಸ್ ದಂಧೆ : ಪೊಲೀಸರಿಂದ ₹24.5 ಕೋಟಿಯ ಗಾಂಜಾ ಜಪ್ತಿ