ಕಸ ವಿಲೇವಾರಿಗೆ ಹೊಸ ಟೆಂಡರ್‌ ಕರೆದಿರುವುದಕ್ಕೆ ಹೈಕೋರ್ಟ್‌ ತರಾಟೆ

Published : Jun 20, 2025, 07:08 AM IST
karnataka highcourt

ಸಾರಾಂಶ

ಹಸಿ ಮತ್ತು ಒಣ ತ್ಯಾಜ್ಯ ಸೇವೆ ನಿರ್ವಹಣೆಗೆ ಹೊಸದಾಗಿ ಟೆಂಡರ್ ಕರೆದಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ‘ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ’ವನ್ನು (ಬಿಎಸ್‌ ಡಬ್ಲೂಎಂಎಲ್‌) ಹೈಕೋರ್ಟ್‌ ತರಾಟೆಗೆ

ಬೆಂಗಳೂರು : ನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆ, ತ್ಯಾಜ್ಯದ ಸಂಗ್ರಹಣೆ, ಪ್ರಾಥಮಿಕ ಸಾಗಾಣಿಕೆ ಹಾಗೂ ದ್ವಿತೀಯ ಹಂತದ ಸಾಗಾಣಿಕೆ ಸೇವೆ ನಿರ್ವಹಣೆಗೆ ಹೊಸದಾಗಿ ಟೆಂಡರ್ ಕರೆದಿರುವುದಕ್ಕೆ ರಾಜ್ಯ ಸರ್ಕಾರ ಮತ್ತು ‘ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ’ವನ್ನು (ಬಿಎಸ್‌ ಡಬ್ಲೂಎಂಎಲ್‌) ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಬಿಎಸ್‌ ಡಬ್ಲೂಎಂಎಲ್‌ ಹೊಸದಾಗಿ ಟೆಂಡರ್‌ ಕರೆದು ಮೇ 28ರಂದು ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಮಹಾನಗರ ಸ್ವಚ್ಛತೆ ಮತ್ತು ಲಾರಿ ಮಾಲೀಕರ ಸಂಘ ಹಾಗೂ ಗುತ್ತಿಗೆದಾರರ ಸಂಘ ಸಲ್ಲಿಸಿರುವ ಕಾರ್ಯದರ್ಶಿ ಎಸ್.ಎನ್. ಬಾಲಸುಬ್ರಹ್ಮಣ್ಯಂ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸರ್ಕಾರ ಮತ್ತು ಬಿಎಸ್‌ಡಬ್ಲ್ಯೂಎಂಎಲ್‌ ಕ್ರಮವನ್ನು ಆಕ್ಷೇಪಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನ ಕುಮಾರ್‌, ಈ ಹಿಂದೆ ಕರೆಯಲಾಗಿದ್ದ ಟೆಂಡರ್‌ ಪ್ರಕ್ರಿಯೆಯನ್ನು ಮತ್ತೆ ನಡೆಸಬೇಕು. ಅದರಲ್ಲಿ ಟೆಂಡರ್‌ ಅನ್ನು ಪ್ರಶ್ನಿಸಿದ್ದ ಎಲ್ಲ ಅರ್ಜಿದಾರರನ್ನು ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರ್ಟ್‌ ಸೂಚಿಸಿತ್ತು. ಸರ್ಕಾರ ಸಹ ಮರು ಟೆಂಡರ್‌ ಕರೆಯಲಾಗುವುದು. ಹೊಸದಾಗಿ ಟೆಂಡರ್‌ ಕರೆಯುವುದಿಲ್ಲ ಎಂದು ಮುಚ್ಚಳಿಕೆ ನೀಡಿತ್ತು. ಅದನ್ನು ಉಲ್ಲಂಘಿಸಿ ಹೊಸ ಟೆಂಡರ್‌ ಕರೆಯಲಾಗಿದೆ. ಇದು ನ್ಯಾಯಾಂಗ ನಿಂದನೆಯಾಗಿದೆ ಎಂದು ಪೀಠದ ಗಮನಕ್ಕೆ ತಂದರು.

ಈ ವಾದ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಅರ್ಜಿದಾರರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಹಿಂದಿನ ಹಾಗೂ 2025ರ ಮೇ 28ರಂದು ಕರೆದಿರುವ ಟೆಂಡರ್‌ಗಳು ಒಂದಕ್ಕೊಂದು ಭಿನ್ನವಾಗಿವೆ. ಇವೆರಡನ್ನೂ ಪರಸ್ಪರ ತುಲನೆ ಮಾಡುವುದು ಸರಿಯಲ್ಲ. ಕಸ ವಿಲೇವಾರಿಗೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ವಿಮ ವಲಯದಲ್ಲಿ ಎಂದು ಪ್ರತ್ಯೇಕವಾಗಿ ಪ್ಯಾಕೇಜ್‌ ಮಾಡಲಾಗಿದೆ ಎಂದು ಪ್ರತಿಪಾದಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಹೊಸದಾಗಿ ಟೆಂಡರ್‌ ಕರೆದಿರುವ ಪ್ರಕ್ರಿಯೆಯು ಹೈಕೋರ್ಟ್ ಈ ಮೊದಲು ನೀಡಿರುವ ಆದೇಶ ಮತ್ತು ಸರ್ಕಾರ ನ್ಯಾಯಾಲಯಕ್ಕೆ ನೀಡಿದ್ದ ಮುಚ್ಚಳಿಕೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಸರ್ಕಾರ ತನ್ನ ಮಾತು ಮೀರಿ ನಡೆದಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಇದರಿಂದ ಪ್ರಕರಣದಲ್ಲಿ ಸರ್ಕಾರದ ನಿಲುವು ಸ್ಪಷ್ಟಪಡಿಸಿ ಎಂದು ಸರ್ಕಾರಿ ವಕೀಲರಿಗೆ ಸೂಚಿಸಿತು.

ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ವಿಲೇವಾರಿ ಮಾಡುವುದಕ್ಕಿಂತಲೂ ಟೆಂಡರ್‌ ಕರೆಯುವ ಬಗ್ಗೆಯೇ ಬಿಬಿಎಂಪಿ, ಬಿಎಸ್‌ ಡಬ್ಲೂಎಂಎಲ್‌ ಮತ್ತು ಸರ್ಕಾರಕ್ಕೆ ಹೆಚ್ಚು ಆಸಕ್ತಿ ಇದ್ದಂತಿದೆ. ಟೆಂಡರ್‌ ಕರೆದ ನಂತರ ಕಸ ವಿಲೇವಾರಿಗೆ ಜಾಗ ಹುಡುಕುತ್ತಿರುವಂತಿದೆ ಎಂದು ನುಡಿದ ಪೀಠ, ಕಸ ವಿಲೇವಾರಿಯ ಪ್ಯಾಕೇಜ್‌ ಸಮಸ್ಯೆಯನ್ನು ಏನಾದರೂ ಎದುರಿಸುತ್ತಿದ್ದೀರಾ ಎಂದು ಸರ್ಕಾರಿ ವಕೀಲರನ್ನು ಕಟುವಾಗಿ ಪ್ರಶ್ನಿಸಿತು.

ಅಂತಿಮವಾಗಿ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ ಕಂಪನಿಯ ತಾಂತ್ರಿಕ ವಿಭಾಗದ ಮುಖ್ಯ ಮಹಾಪ್ರಬಂಧಕ ಹಾಗೂ ಘನತ್ಯಾಜ್ಯ ನಿರ್ವಹಣಾ ಕಾರ್ಯಕಾರಿ ಎಂಜಿನಿಯರ್‌ಗೆ ನೋಟಿಸ್‌ ಜಾರಿಗೊಳಿಸಿದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಜೂ.30ಕ್ಕೆ ಮುಂದೂಡಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌