21ಕ್ಕೆ ರಾಜ್ಯದಲ್ಲಿ ಯೋಗ ಸಂಗಮ - 5 ಲಕ್ಷ ಜನರ ಯೋಗಾಭ್ಯಾಸ

Published : Jun 18, 2025, 11:31 AM IST
Yoga Day 2025

ಸಾರಾಂಶ

11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ರಾಜ್ಯಾದ್ಯಂತ ಬೆಳಗ್ಗೆ 6 ರಿಂದ 8ಗಂಟೆವರೆಗೆ ‘ಯೋಗ ಸಂಗಮ’ ಕಾರ್ಯಕ್ರಮ

  ಬೆಂಗಳೂರು :  11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂ.21ರಂದು ರಾಜ್ಯಾದ್ಯಂತ ಬೆಳಗ್ಗೆ 6 ರಿಂದ 8ಗಂಟೆವರೆಗೆ ‘ಯೋಗ ಸಂಗಮ’ ಕಾರ್ಯಕ್ರಮ ಆಯೋಜಿಸಿದ್ದು, 5 ಲಕ್ಷ ಜನರ ಯೋಗಾಭ್ಯಾಸಕ್ಕೆ ಅನುವಾಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ವಿಧಾನಸೌಧದ ಆವರಣದಲ್ಲಿ ನಡೆವ ಕಾರ್ಯಕ್ರಮದಲ್ಲಿ 3 ಸಾವಿರ ಯೋಗಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯುಷ್‌ ಇಲಾಖೆಯಿಂದ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ದೃಷ್ಟಿಕೋನದಡಿ ಕಾರ್ಯಕ್ರಮ ನಡೆಯಲಿದೆ. ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಳ್ಳುವರು. ಸಚಿವ, ಶಾಸಕರು, ಚಲನಚಿತ್ರ ತಾರೆಯರು ಆಗಮಿಸಲಿದ್ದಾರೆ. ಬೆಳಗ್ಗೆ 7 ರಿಂದ 7.45ರವರೆಗೆ ಯೋಗ ಪ್ರಾತ್ಯಕ್ಷಿಕೆ ನಡೆಯಲಿದ್ದು, ವಿಶೇಷವಾಗಿ ಈ ಬಾರಿ ಗ್ರಾಮೀಣ ಭಾಗದ 300 ಆಯುಷ್ಮಾನ್‌ ಆರೋಗ್ಯ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ 100 ದಿನದ ಕಾರ್ಯಕ್ರಮ ಆರಂಭಿಸಲಾಗಿದೆ. ಯುವಕರನ್ನು ಸೆಳೆಯಲು ‘ಯೋಗ ಅನ್‌ಪ್ಲಗ್ಡ್’ ಕಾರ್ಯಕ್ರಮದಡಿ 25ಸಾವಿರ ಯುವಕರಿಗೆ ಯೋಗ ತರಬೇತಿ ನೀಡಲಾಗುವುದು. ಅರಣ್ಯ ಇಲಾಖೆ ಸಹಕಾರದಲ್ಲಿ ಶಾಲಾ- ಕಾಲೇಜು ಸೇರಿ ಇತರೆಡೆ ‘ಹಸಿರು ಯೋಗ’ ದಡಿ 1ಲಕ್ಷ ಸಸಿ ನೆಡುವ ಗುರಿಯಿದೆ. ಜತೆಗೆ ಸರ್ಕಾರಿ ಕಚೇರಿ, ಸಂಸ್ಥೆಗಳಲ್ಲಿ ‘ವೈ ಬ್ರೇಕ್‌’ (ಯೋಗ ಬ್ರೇಕ್‌) ಮೂಲಕ ಯೋಗದ ಜಾಗೃತಿ ಮೂಡಿಸಲಾಗುವುದು ಎಂದರು.

ಇನ್ನು, ಜಿಲ್ಲಾ ಕೇಂದ್ರದಲ್ಲಿ, ತಾಲೂಕುಗಳ ಉದ್ಯಾನದಲ್ಲಿ ಯೋಗ ಸಂಬಂಧಿ ಚಟುವಟಿಕೆ ನಡೆಸಲು ‘ಯೋಗ ಪಾರ್ಕ್‌’ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು, ಯೋಗ ಧನುಷ್‌, ಯೋಗ ಸಂಯೋಗ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ‘ಮಾನಸ ಯೋಗ’ ವಿಚಾರ ಸಂಕಿರಣ ನಡೆಯಲಿದೆ. ಜಯದೇವ ಹೃದ್ರೋಗ ಸಂಸ್ಥೆ, ಮೈಸೂರಿನಲ್ಲಿ ಕಾರ್ಡಿಯೋ ಯೋಗ ಹಾಗೂ ಕಿದ್ವಾಯಿ ಗ್ರಂಥಿ ಸಂಸ್ಥೆಯಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಮೈಸೂರು ‘ಯೋಗ ಜಿಲ್ಲೆ’ ಘೋಷಣೆಗೆ ಪ್ರಸ್ತಾವ

ಮೈಸೂರನ್ನು ‘ಯೋಗ ಜಿಲ್ಲೆ’ ಎಂದು ಕೇಂದ್ರದಿಂದ ಘೋಷಿಸುವಂತೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಿದ್ದೇವೆ. ಯೋಗ ಕಲಿಕೆಗೆ ದೇಶ, ವಿದೇಶದಿಂದ ಮೈಸೂರಿಗೆ ಜನ ಆಗಮಿಸುತ್ತಾರೆ. ಹೀಗಾಗಿ ಮೈಸೂರಿನ ಪ್ರತಿ ಮನೆಯಲ್ಲೂ ಒಬ್ಬ ಯೋಗಪಟು, ಯೋಗ ಶಿಕ್ಷಕರು ರೂಪುಗೊಳ್ಳುವಂತೆ ಮಾಡಲಾಗುವುದು. ಮುಂದಿನ 2-3 ವರ್ಷದಲ್ಲಿ ಇದನ್ನು ಸಾಕಾರಗೊಳಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್‌ ತಿಳಿಸಿದರು. ಯೋಗದಿನದಂದು ಮೈಸೂರಿನಲ್ಲಿ ‘ಯೋಗ ಮಹಾಕುಂಭ’ ಹೆಸರಿನಡಿ ಮೈಸೂರು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಸಲಿದ್ದು, 15 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು. 

PREV
Read more Articles on

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ