ಬನ್ನೇರುಘಟ್ಟ ಡಂಪಿಂಗ್ ಯಾರ್ಡ್‌ ಆಗುತ್ತಿದೆಯೇ?

Published : Jun 18, 2025, 09:23 AM IST
njeliyanparamba garbage issue

ಸಾರಾಂಶ

 ಪ್ರವಾಸಿಗರ ನೆಚ್ಚಿನ ತಾಣವಾಗಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬನ್ನೇರುಘಟ್ಟ ಇಂದು ಡಂಪಿಂಗ್ ಯಾರ್ಡ್‌ ಆಗಿ ಬದಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಎಂ.ನರಸಿಂಹಮೂರ್ತಿ

 ಬೆಂಗಳೂರು ದಕ್ಷಿಣ :  ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಐತಿಹಾಸಿಕ ಚಂಪಕಧಾಮಸ್ವಾಮಿ ದೇವಸ್ಥಾನ ಸೇರಿದಂತೆ ಪ್ರವಾಸಿಗರ ನೆಚ್ಚಿನ ತಾಣವಾಗಿ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಬನ್ನೇರುಘಟ್ಟ ಇಂದು ಡಂಪಿಂಗ್ ಯಾರ್ಡ್‌ ಆಗಿ ಬದಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಬನ್ನೇರುಘಟ್ಟಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಜೈವಿಕ ಉದ್ಯಾನದ ವೀಕ್ಷಣೆಗೆ ಆಗಮಿಸುತ್ತಾರೆ. ಬನ್ನೇರುಘಟ್ಟ ಸರ್ಕಲ್ ಗೆ ಬರುವ ಮುನ್ನವೇ ತ್ಯಾಜ್ಯದ ದುರ್ನಾತದಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಡೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮ ಪಂಚಾಯಿತಿಗೆ ಕೂಗಳತೆಯ ದೂರದಲ್ಲಿರುವ ಹಾಗೂ ಬನ್ನೇರುಘಟ್ಟ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಕೆಂಪನಾಯಕನಹಳ್ಳಿ ಬಂಡೆ ಕ್ವಾರಿಯಲ್ಲಿ ರಾತ್ರೋರಾತ್ರಿ ಕಸದ ಲಾರಿಗಳಲ್ಲಿ ಸಿಲಿಕಾನ್‌ ಸಿಟಿಯ ತ್ಯಾಜ್ಯ ತಂದು ಸುರಿಯಲಾಗುತ್ತಿದೆ.

ಕ್ವಾರಿಯಲ್ಲಿ ಕಸದರಾಶಿ ತುಂಬಿ ತುಳುಕುತ್ತಿದ್ದು, ಸೊಳ್ಳೆಗಳಿಗೆ ಪ್ರಶಸ್ತ ತಾಣವಾಗಿದ್ದು ಸ್ಥಳೀಯ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆದಾಗ್ಯೂ ಸ್ಥಳೀಯರು ಹೋರಾಟ ಮಾಡಿ ಕ್ವಾರಿಗೆ ಕಸದ ಲಾರಿ ಬರದಂತೆ ರಸ್ತೆಗೆ ಮಣ್ಣು ತುಂಬಿಸಿ ಪ್ರತಿಭಟನೆ ನಡೆಸಿ ಮಳೆಯ ಸಂದರ್ಭ ಕೊಳೆತ ತ್ಯಾಜ್ಯದಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದ್ದು, ಕ್ವಾರಿಯಲ್ಲಿ ಕಸ ವಿಲೇವಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕ್ವಾರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ತ್ಯಾಜ್ಯ ಸುರಿಯುತ್ತಿರುವವರ ಮೇಲೆ ಕೇಸು ದಾಖಲು ಮಾಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚಿಸಲಾಗಿದೆ.

- ಮಮತಾ, ಪಿಡಿಓ, ಬನ್ನೇರುಘಟ್ಟ ಗ್ರಾಪಂ.

ಕಸ ಸುರಿಯುತ್ತಿರುವ ವೀಡಿಯೋ ಹಾಗೂ ಲಾರಿ ನೋಂದಣಿ ಸಂಖ್ಯೆ ಲಭ್ಯವಾಗಿದೆ. ಈ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ಕಸ ಸುರಿಯಲು ಅನುಮತಿ ನೀಡಲಾಗಿತ್ತು ಎಂಬ ಮಾಹಿತಿಯಿದೆ. ಇನ್ನೆರಡು ದಿನಗಳಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು.

- ಸಿದ್ದರಾಜು, ಕಂದಾಯ ನಿರೀಕ್ಷಕ, ಬನ್ನೇರುಘಟ್ಟ

PREV
Read more Articles on

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ