ನಮ್ಮ ಮೆಟ್ರೋ 3ನೇ ಹಂತದ ಯೋಜನೆ : 45 ಎಕ್ರೆ ಬದಲು 9 ಎಕ್ರೆ ಸಾಕೆಂದಿದೆ

Published : Jun 18, 2025, 09:06 AM IST
Namma Metro

ಸಾರಾಂಶ

ನಮ್ಮ ಮೆಟ್ರೋದ 3ನೇ ಹಂತದ ಯೋಜನೆಗೆ ಹೆಬ್ಬಾಳದಲ್ಲಿ ಈ ಮೊದಲು 45 ಎಕರೆ ಕೇಳಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮವು ಇದೀಗ ಯೋಜನೆ ಸ್ವರೂಪ ಬದಲಿಸಿಕೊಳ್ಳುತ್ತಿದ್ದು ಕೇವಲ 9 ಎಕರೆ ನೀಡುವಂತೆ ಬೇಡಿಕೆ ಇಟ್ಟಿದೆ

 ಬೆಂಗಳೂರು :  ನಮ್ಮ ಮೆಟ್ರೋದ 3ನೇ ಹಂತದ ಯೋಜನೆಗೆ ಹೆಬ್ಬಾಳದಲ್ಲಿ ಈ ಮೊದಲು 45 ಎಕರೆ ಕೇಳಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮವು ಇದೀಗ ಯೋಜನೆ ಸ್ವರೂಪ ಬದಲಿಸಿಕೊಳ್ಳುತ್ತಿದ್ದು ಕೇವಲ 9 ಎಕರೆ ನೀಡುವಂತೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಹೆಬ್ಬಾಳ ಭೂಮಿ ಹಸ್ತಾಂತರ ವಿಚಾರದಲ್ಲಿ ರಿಯಲ್ ಎಸ್ಟೇಟ್ ಲಾಬಿ ಇದೆಯೆಂದು ಆರೋಪಗಳು ಕೇಳಿಬರುತ್ತಿತ್ತು. ಹೆಬ್ಬಾಳದ ಭೂಮಿಯನ್ನು ಕೆಐಎಡಿಬಿಯಿಂದ ಪಡೆಯುವ ಬಗ್ಗೆ ಮೂರು ಬಾರಿ ಸಭೆ ಆದರೂ ಯಾವುದೇ ತೀರ್ಮಾನ ಆಗಿರಲಿಲ್ಲ. ಒತ್ತಡ ಎದುರಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ತನ್ನ ಬೇಡಿಕೆಯನ್ನೇ ತಗ್ಗಿಸಿದೆ ಎನ್ನಲಾಗಿದೆ. ಇದರಿಂದ ಇಲ್ಲಿನ ಯೋಜನೆಗೆ ಹಿನ್ನಡೆಯಾಗಿದೆ ಎಂದು ಸಾರಿಗೆ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಬ್ಬಾಳ-ಸರ್ಜಾಪುರದ 36.59 ಕಿಮೀ ಉದ್ದದ ‘ಕೆಂಪು ಮಾರ್ಗ’ಕ್ಕಾಗಿ ಹೆಬ್ಬಾಳದಲ್ಲಿ ಸುಸಜ್ಜಿತ ಡಿಪೋ, ಇಂಟರ್‌ಚೇಂಜ್‌ ಸೇರಿದಂತೆ ಬಹುಮಾದರಿಯ ಸಾರಿಗೆ ವ್ಯವಸ್ಥೆ ರೂಪಿಸಲು ನಿರ್ಧಾರವಾಗಿತ್ತು. ಇದೀಗ ಕೈಗಾರಿಕೆ ಇಲಾಖೆಗೆ ಸಲ್ಲಿಕೆಯಾದ ಮರು ಪ್ರಸ್ತಾವನೆಯಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆಯ ಕಟ್ಟಡ ನಿರ್ಮಾಣದ ಪ್ರಸ್ತಾವ ಮಾತ್ರ ಇರಿಸಿಕೊಂಡಿದ್ದು, ಉಳಿದಂತೆ ಎತ್ತರಿಸಿದ ಡಿಪೋ ನಿರ್ಮಾಣ ಯೋಜನೆ ಕೈಬಿಡಲಾಗಿದೆ ಎನ್ನಲಾಗಿದೆ. ಇಲ್ಲಿ ಟನಲ್ ರಸ್ತೆಯ ಪ್ರವೇಶದ್ವಾರಕ್ಕಾಗಿ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ.

ತಿಂಗಳ ಹಿಂದಷ್ಟೇ ಈ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರು ಕೆಐಎಡಿಬಿ, ಬಿಎಂಆರ್‌ಸಿಎಲ್‌, ಬಿಬಿಎಂಪಿ ಹಾಗೂ ಇತರೆ ಇಲಾಖೆಗಳ ಸಭೆ ನಡೆಸಿದ್ದರು. ಈ ವೇಳೆ ಬಿಎಂಆರ್‌ಸಿಎಲ್‌ ಗೆ ಅಗತ್ಯ ಭೂಮಿ ನೀಡುವುದಾಗಿ ತಿಳಿಸಲಾಗಿತ್ತು.

2004ರ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಹೆಬ್ಬಾಳದ 45 ಎಕರೆಯನ್ನು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಲೇಕ್‌ ವ್ಯೂ ಟೂರಿಸಂ ಕಾರ್ಪೋರೇಷನ್‌ ಕಂಪನಿಗೆ ನೀಡಲಾಗಿತ್ತು. ಜತೆಗೆ 21 ವರ್ಷವಾದರೂ ಈ ಜಾಗದಲ್ಲಿ ಕಂಪನಿ ಯಾವುದೇ ಚಟುವಟಿಕೆ ನಡೆಸಿರಲಿಲ್ಲ. ಹೀಗಾಗಿ ಬಿಎಂಆರ್‌ಸಿಎಲ್‌ ಈ ಭೂಮಿಯನ್ನು ತನಗೆ ನೀಡುವಂತೆ ಕೋರಿತ್ತು.

ಖಾಸಗೀ ಕಂಪನಿಗಾಗಿ ಕೆಐಎಡಿಬಿ ಭೂಸ್ವಾದೀನ ಮಾಡಿಕೊಂಡಿದ್ದು ಇಂದಿಗೂ ಅದರ ವಶದಲ್ಲಿದೆ. ಆದರೆ, ಈಗ ಬಿಎಂಆರ್‌ಸಿಎಲ್‌ಗಾಗಿ ಹಸ್ತಾಂತರ ಮಾಡಿಕೊಂಡರೆ ಕಂಪನಿ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇತ್ತು. ಜತೆಗೆ ಈ ಭೂಮಾಲೀಕರಿಗೆ ಪರಿಹಾರ ಮೊತ್ತ ನೀಡುವುದು ಬಾಕಿ ಉಳಿದಿದೆ.

ಇನ್ನು, 2024ರ ಜುಲೈನಲ್ಲಿ ನಮ್ಮ ಮೆಟ್ರೋ 45ಎಕರೆ ನೀಡುವಂತೆ ಕೇಳಿದ್ದ ಬಿಎಂಆರ್‌ಸಿಎಲ್‌ ಇದಕ್ಕಾಗಿ ₹ 551.15 ಕೋಟಿ ನೀಡುವುದಾಗಿ ಹೇಳಿತ್ತು. ಅದಕ್ಕೂ ಮುನ್ನ 6712 ಚ.ಮೀ. ಜಾಗವನ್ನು ನಮ್ಮ ಮೆಟ್ರೋಗೆ ಹಾಗೂ 4ಎಕರೆಯನ್ನು ರಾಷ್ಟ್ರೀಯ ಹೆದ್ದಾರಿಗಾಗಿ ಕೆಐಎಡಿಬಿ ಹಸ್ತಾಂತರ ಮಾಡಿತ್ತು. ಆದರೆ, ರಿಯಲ್ ಎಸ್ಟೆಟ್‌ ಲಾಬಿ ಇದಕ್ಕೆ ಅಡ್ಡಿಯಾಗಿದ್ದು, ಭೂಮಿಯನ್ನು ಹಸ್ತಾಂತರ ಮಾಡಲು ಹಿಂದೇಟು ಹಾಕಲು ಕಾರಣವಾಗಿದೆ ಎನ್ನಲಾಗಿದೆ.

PREV
Read more Articles on

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ