100 ದಿನದಲ್ಲಿ 5.15 ಲಕ್ಷ ಉತ್ತರ ನೀಡಿದ ಕೆಇಎ ಚಾಟ್‌ ಬಾಟ್‌!

Published : Jun 18, 2025, 08:59 AM IST
chat bot

ಸಾರಾಂಶ

ವೃತ್ತಿಪರ ಕೋರ್ಸುಗಳ ಪ್ರವೇಶಾಕಾಂಕ್ಷಿಗಳ ಪ್ರಶ್ನೆ, ಗೊಂದಲಗಳ ನಿವಾರಣೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿರುವ ‘ಕೆಇಎ ಬಾಟ್‌’ ಕೇವಲ ನೂರು ದಿನಗಳಲ್ಲಿ 5.15 ಲಕ್ಷ ಪ್ರಶ್ನೆಗಳಿಗೆ ಉತ್ತರ ನೀಡಿ ದಾಖಲೆ ಬರೆದಿದೆ!

 ಬೆಂಗಳೂರು : ವೃತ್ತಿಪರ ಕೋರ್ಸುಗಳ ಪ್ರವೇಶಾಕಾಂಕ್ಷಿಗಳ ಪ್ರಶ್ನೆ, ಗೊಂದಲಗಳ ನಿವಾರಣೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆರಂಭಿಸಿರುವ ‘ಕೆಇಎ ಬಾಟ್‌’ ಕೇವಲ ನೂರು ದಿನಗಳಲ್ಲಿ 5.15 ಲಕ್ಷ ಪ್ರಶ್ನೆಗಳಿಗೆ ಉತ್ತರ ನೀಡಿ ದಾಖಲೆ ಬರೆದಿದೆ!

ವಿವಿಧ ನೇಮಕಾತಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಲಿಖಿತ ಪರೀಕ್ಷೆ ಮತ್ತು ಸೀಟು ಹಂಚಿಕೆ ಪ್ರಕ್ರಿಯೆ ನಡೆಸುವ ಕೆಇಎ, ಅಭ್ಯರ್ಥಿಗಳು ಮತ್ತು ಪೋಷಕರಿಗೆ ಅಗತ್ಯವಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುವುದರ ಮೂಲಕ ಜನಸ್ನೇಹಿಯಾಗುತ್ತಿದೆ.

ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳು/ಪೋಷಕರ ಪ್ರಶ್ನೆಗಳಿಗೆ ಯಾರ ಮಧ್ಯಸ್ಥಿಕೆಯೂ ಇಲ್ಲದೆ ಉತ್ತರ ಪಡೆಯುವ ಈ ವ್ಯವಸ್ಥೆ ಇದಾಗಿದ್ದು, ಆರಂಭದಲ್ಲಿ ಇಂಗ್ಲಿಷ್‌ನಲ್ಲಿ ಉತ್ತರಿಸುತ್ತಿದ್ದ ಬಾಟ್‌ ಈಗ ಕನ್ನಡದಲ್ಲಿ ಕೇಳುವ ಪ್ರಶ್ನೆಗೂ ಉತ್ತರಿಸುತ್ತಿದೆ. ನಿತ್ಯವೂ ಅದಕ್ಕೆ ಮಾಹಿತಿ ನೀಡುವ ಕೆಲಸವನ್ನು ಕೆಇಎ ತಂಡ ಮಾಡುತ್ತಿದ್ದು, ಯಾರು ಏನೇ ಕೇಳಿದರೂ ಅದಕ್ಕೆ ಉತ್ತರಿಸುವ ಕೆಲಸ ಮಾಡುತ್ತಿದೆ. ಕೇಳಿರುವ ಪ್ರಶ್ನೆಗಳ ಪೈಕಿ ಕಳೆದ ವರ್ಷದ ಕಟ್‌ ಆಫ್‌ ರ್‍ಯಾಂಕ್‌ ಕುರಿತ ಪ್ರಶ್ನೆಗಳೇ ಅಧಿಕ. ಇದುವರೆಗೂ 2.7 ಲಕ್ಷ ಮಂದಿ ಕಟ್‌ ಆಫ್‌ ರ್‍ಯಾಂಕ್‌ ಕುರಿತು ಪ್ರಶ್ನೆ ಕೇಳಿ ಉತ್ತರ ಪಡೆದಿದ್ದಾರೆ. ಪ್ರವೇಶಾತಿ, ಅರ್ಹತೆ, ಪರೀಕ್ಷಾ ವೇಳಾಪಟ್ಟಿ, ಮುಖ್ಯವಾದ ದಿನಾಂಕಗಳು, ಪ್ರವೇಶ ಪತ್ರ ಇತ್ಯಾದಿಗಳ ಡೌನ್‌ ಲೋಡ್, ಹೊಸ ಪ್ರಕಟಣೆಗಳು, ನೇಮಕಾತಿ ಮುಂತಾದವುಗಳನ್ನು ತಿಳಿದುಕೊಳ್ಳಲು ಚಾಟ್-ಬಾಟ್ ಬಳಸಿಕೊಳ್ಳುತ್ತಿದ್ದಾರೆ.

ಕೆಇಎ ವಿಕಸನ ಯೂಟೂಬ್‌ ಚಾನಲ್‌:  ಅಭ್ಯರ್ಥಿಗಳಿಗೆ ಬೇಕಾದ ಮಾಹಿತಿ ಒದಗಿಸಲು ಚಾಟ್-ಬಾಟ್ ಜೊತೆಗೆ ‘ಕೆಇಎ ವಿಕಸನ’ ಎನ್ನುವ ಯೂಟ್ಯೂಬ್ ಚಾನಲ್ ಕೂಡ ಆರಂಭಿಸಲಾಗಿದೆ. ಇದರಲ್ಲಿ ಅಪ್‌ ಲೋಡ್‌ ಮಾಡುವ ವಿಡಿಯೊಗಳನ್ನು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸುತ್ತಿದ್ದಾರೆ. 48 ಸಾವಿರ ಮಂದಿ ಚಂದಾದಾರರಾಗಿದ್ದಾರೆ. ಇನ್ನು ಕೆಇಎ ನೀಡುವ ಕ್ಷಣದ ಅಪ್‌ಡೇಟ್‌ಗಾಗಿ ಕೆಇಎ ಎಕ್ಸ್‌ (@KEA_karnataka) ಸಾಮಾಜಿಕ ಜಾಲತಾಣವೂ ಜನಪ್ರಿಯವಾಗಿದ್ದು, 35,700 ಮಂದಿ ಚಂದಾದಾರರಾಗಿದ್ದಾರೆ ಎಂದು ತಿಳಿಸಲಾಗಿದೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ