ಬೆಂಗಳೂರು : ನಗರದ ಹನುಮಂತನಗರದಲ್ಲಿ ಮರದ ಬೃಹತ್ ಕೊಂಬೆ ಬಿದ್ದು ಗಾಯಗೊಂಡಿರುವ ದ್ವಿಚಕ್ರ ವಾಹನ ಸವಾರ ಅಕ್ಷಯ್ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಗರದ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಶ್ರೀದತ್, ಗಾಯಾಳು ಅಕ್ಷಯ್ ಅವರನ್ನು ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ತಲೆ, ಮೆದುಳಿಗೆ ತೀವ್ರ ಪೆಟ್ಟಾಗಿರುವುದು ಕಂಡು ಬಂದಿದೆ. ಹೀಗಾಗಿ, ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ವೆಂಟಿಲೇಟರ್ ನೆರವಿನಲ್ಲಿ ತೀವ್ರ ನಿಗಾ ಘಟಕದಲ್ಲಿರುವ ಅವರ ಸ್ಥಿತಿ ಗಂಭೀರವಾಗಿದೆ. ಅಗತ್ಯ ಔಷದೋಪಚಾರ ಮಾಡಲಾಗುತ್ತಿದ್ದು, ಸಾಧ್ಯವಾದ ಅತ್ಯುತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದೇವೆ. ಈಗಲೇ ಏನನ್ನೂ ಹೇಳಲಾಗದು ಎಂದರು.
ಆರಂಭದಲ್ಲಿ ನಾವೇ ಅಕ್ಷಯ್ ಚಿಕಿತ್ಸಾ ವೆಚ್ಚ ಭರಿಸಿದ್ದೇವೆ. ಅದಾದ ನಂತರ ಬಿಬಿಎಂಪಿಯಿಂದ ವೈದ್ಯಕೀಯ ವೆಚ್ಚ ಭರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಸೋಮವಾರ ರಾತ್ರಿ ಬಿಬಿಎಂಪಿಯವರು ಬಂದು ಶುಲ್ಕ ಪಾವತಿಸುತ್ತೇವೆ ಎಂದು ಹೇಳಿದ್ದರು. ಆದರೆ, ಈವರೆಗೂ ಯಾವುದೇ ರೀತಿಯಿಂದ ನೆರವು ಸಿಕ್ಕಿಲ್ಲ ಎಂದು ಅಕ್ಷಯ್ ಸಹೋದರ ಬೆನಕರಾಜ್ ಹೇಳಿದ್ದಾರೆ.
ಶ್ರೀನಿವಾಸ ನಗರ ನಿವಾಸಿ ಅಕ್ಷಯ್ ಅವರು ಭಾನುವಾರ ಹೊರಗೆ ಹೋಗಿದ್ದು, ವಾಪಸ್ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದಾಗ ಬ್ರಹ್ಮ ಚೈತನ್ಯ ಮಂದಿರದ ಬಳಿ ಮರದ ಕೊಂಬೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಮರದ ಕೊಂಬೆ ಅಕ್ಷಯ್ ಮೇಲೆ ಬೀಳುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.