ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ಡ್ರಗ್ಸ್ ಮುಕ್ತ ಕರ್ನಾಟಕ ಶೀರ್ಷಿಕೆಯಡಿ 5 ಕಿ.ಮೀ ಮ್ಯಾರಥಾನ್ ಓಟ ಆಯೋಜಿಸಲಾಗಿತ್ತು.ಇಲ್ಲಿನ ಪ್ರವಾಸಿ ಮಂದಿರ ವೃತ್ತದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್‌ ಮ್ಯಾರಾಥಾನ್‌ಗೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಹಾಗೂ ಪೊಲೀಸ್ ಸಿಬ್ಬಂದಿಯೊಂದಿಗೆ ಹಿರಿಯ ಅಧಿಕಾರಿಗಳೂ ಮ್ಯಾರಥಾನ್ ನಲ್ಲಿ ಭಾಗವಹಿಸಿದರು.

ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದ ಎಸ್ಪಿ ಚಂದ್ರಕಾಂತ್‌, ನಮಗೆ ಗರಿಷ್ಠ ಗುರಿಗಳಿರಬೇಕು, ಕನಿಷ್ಠ ಗುರಿಗಳಿದ್ದರೆ ಸಾಧಿಸಲಾಗದೆ ಅದರಿಂದ ವಿಮುಕ್ತರಾಗುತ್ತೇವೆ. ಆದ್ದರಿಂದ ನಮ್ಮ ಗುರಿ ಎತ್ತರದ ಸಾಧನೆಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಾದಕ ವಸ್ತುಗಳ ಮಾರಾಟಗಾರರು 15 ರಿಂದ 35 ವರ್ಷ ವಯಸ್ಸಿನ ಯುವಜನರನ್ನು ಆಕರ್ಷಿಸಿ ಅವರ ಜೀವನವನ್ನು ಹಾಳು ಮಾಡುತ್ತಿದ್ದಾರೆ. ಇಂದು ನಾವು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗುವುದಿಲ್ಲ, ನಮ್ಮ ನೆರೆ-ಹೊರೆಯವರು ಬಲಿಯಾಗಲು ಬಿಡುವುದಿಲ್ಲ, ಮಾದಕ ವಸ್ತು ಸಂಗ್ರಹ ಮತ್ತು ಮಾರಾಟ ಮಾಡುವ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಆ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತೇವೆ ಎಂದು ಶಪಥ ಮಾಡೋಣ ಎಂದು ಕರೆಕೊಟ್ಟರು.

ಈ ವೇಳೆ ಡಿವೈಎಸ್ಪಿ ಪಾಂಡುರಂಗ, ನಗರ ಠಾಣೆ ಇನ್ಸ್‌ಪೆಕ್ಟರ್ ಅಮರೇಶ್ ಗೌಡ, ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷ, ಮಹಿಳಾ ಠಾಣೆ ಇನ್ಸ್ಪೆಕ್ಟರ್ ನವೀನ್, ದೊಡ್ಡಬೆಳವಂಗಲ ಠಾಣೆಯ ಕಲ್ಲಪ್ಪ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.ಫೋಟೋ-1ಕೆಡಿಬಿಪಿ5- ದೊಡ್ಡಬಳ್ಳಾಪುರದಲ್ಲಿ ಪೊಲೀಸ್‌ ಇಲಾಖೆಯಿಂದ ಆಯೋಜಿಸಲಾಗಿದ್ದ ಡ್ರಗ್ಸ್‌ ಮುಕ್ತ ಕರ್ನಾಟಕ ಮ್ಯಾರಾಥಾನ್‌ಗೆ ಪ್ರವಾಸಿ ಮಂದಿರ ವೃತ್ತದಲ್ಲಿ ಚಾಲನೆ ನೀಡಲಾಯಿತು.