ಬೆಂಗಳೂರು : 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಸುಲಿಗೆ ಹಣ ಹೂಡಿಕೆ

Published : Jun 18, 2025, 09:20 AM IST
money

ಸಾರಾಂಶ

ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಸುಲಿಗೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿ ನಿಂಗಪ್ಪ 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣ ಹೂಡಿಕೆ ಮಾಡಿರುವುದು   ಬೆಳಕಿಗೆ  

  ಬೆಂಗಳೂರು :  ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಸುಲಿಗೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರೋಪಿ ನಿಂಗಪ್ಪ 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣ ಹೂಡಿಕೆ ಮಾಡಿರುವುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಆರೋಪಿ ನಿಂಗಪ್ಪ ಅಬಕಾರಿ ಇಲಾಖೆಯ ಹಲವು ಅಧಿಕಾರಿಗಳಿಂದ ಕಳೆದ ಆರು ತಿಂಗಳಿಂದ ಹಣ ವಸೂಲಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ರೀತಿ ವಸೂಲಿ ಮಾಡಿದ ಹಣವನ್ನು ತನ್ನ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.

ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ 13 ಕ್ರಿಪ್ಟೋ ವ್ಯಾಲೆಟ್‌ಗಳಲ್ಲಿ ಹಣ ಹೂಡಿಕೆ ಮಾಡಿರುವುದು ಕಂಡು ಬಂದಿದೆ. ಈ ಹಣದ ಮೂಲ ಪತ್ತೆಗೆ ಇಳಿದಿರುವ ಲೋಕಾಯುಕ್ತ ಪೊಲೀಸರು, ಆ 13 ಕ್ರಿಪ್ಟೋ ವ್ಯಾಲೆಟ್‌ಗಳನ್ನು ಫ್ರೀಜ್‌ ಮಾಡಿದ್ದಾರೆ. ಆರೋಪಿ ನಿಂಗಪ್ಪನಿಗೆ ಅಬಕಾರಿ ಇಲಾಖೆಯ ಯಾವ ಅಧಿಕಾರಿಗಳು ಎಷ್ಟು ಹಣ ನೀಡಿದ್ದಾರೆ ಎಂಬುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ಆರೋಪಿ ನಿಂಗಪ್ಪನ ಈ ಸುಲಿಗೆ ಕೃತ್ಯದಲ್ಲಿ ಬೇರೆ ಅಧಿಕಾರಿಗಳು ಶಾಮೀಲಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಆರೋಪಿಯ ಮೊಬೈಲ್‌ಗಳ ಕರೆಗಳ ವಿವರ, ವಾಟ್ಸಾಪ್‌ ಸಂದೇಶಗಳು, ವಾಟ್ಸಾಪ್‌ ಕರೆಗಳ ವಿವರಗಳನ್ನು ಕಲೆ ಹಾಕಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ.

ಪ್ರಕರಣದ ಹಿನ್ನೆಲೆ:

ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ನಿಮ್ಮ ವಿರುದ್ಧ ದೂರು ದಾಖಲಾಗಿದ್ದು, ದಾಳಿ ಮಾಡುವ ಸಂಭವವಿದೆ. ದಾಳಿಯಿಂದ ಪಾರು ಮಾಡಲು ಹಣ ನೀಡುವಂತೆ ಬೇಡಿಕೆ ಇರಿಸಿ, ಸುಲಿಗೆ ಮಾಡಿದ ಆರೋಪದಡಿ ಲೋಕಾಯುಕ್ತಕ್ಕೆ ದೂರು ಬಂದಿತ್ತು. ಈ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲೂಕಿನ ವಿಜಯನಗರ ನಿವಾಸಿ ಜಿ.ನಿಂಗಪ್ಪ ಅಲಿಯಾಸ್‌ ಸಾವಂತ್‌(46) ಎಂಬುವವನ್ನು ಜೂ.2ರಂದು ಬಂಧಿಸಿದ್ದರು.

ಈ ನಿಂಗಪ್ಪ ಚಿತ್ರದುರ್ಗದಲ್ಲಿ ಹೆಡ್‌ಕಾನ್ಸ್‌ಟೇಬಲ್‌ ಆಗಿದ್ದ. ಅನುಮತಿ ಪಡೆಯದೆ ದೀರ್ಘಕಾಲ ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ನಿಂಗಪ್ಪನನ್ನು ಐದು ವರ್ಷಗಳ ಹಿಂದೆ ಕರ್ತವ್ಯದಿಂದ ವಜಾಗೊಳಿಸಲಾಗಿತ್ತು. ಬಳಿಕ ನಿಂಗಪ್ಪ ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ಸುಲಿಗೆಗೆ ಇಳಿದಿದ್ದ ಎಂಬುದು ಲೋಕಾಯುಕ್ತ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬೆದರಿಕೆ, ಆಮಿಷದ ಕರೆ ಬಂದರೆ ಮಾಹಿತಿ ನೀಡಿ

ಖಾಸಗಿ ವ್ಯಕ್ತಿಗಳು ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳ ಇತ್ಯರ್ಥಕ್ಕಾಗಿ ಹಣಕ್ಕಾಗಿ ಪೀಡಿಸುವುದು ಮತ್ತು ಆಮಿಷವೊಡ್ಡುತ್ತಿರುವುದು ಲೋಕಾಯುಕ್ತ ಸಂಸ್ಥೆಯ ಗಮನಕ್ಕೆ ಬಂದಿದೆ. ಅಂತಹ ಕರೆಗಳು ಬಂದಾಗ ಸರ್ಕಾರಿ ನೌಕರರು ಯಾವುದೇ ಅಮಿಷಕ್ಕೆ ಒಳಗಾಗಬಾರದು. ಅಂತಹ ಕರೆ ಮಾಡಿದ ವ್ಯಕ್ತಿಗಳ ಹೆಸರು ಮತ್ತು ಮೊಬೈಲ್‌ ಸಂಖ್ಯೆಗಳನ್ನು ಲೋಕಾಯುಕ್ತ ಕಚೇರಿಯ ದೂರವಾಣಿ ಸಂಖ್ಯೆ 080-22011205 ಅಥವಾ 080-22011273 ಮತ್ತು ಇ-ಮೇಲ್‌ ವಿಳಾಸ kla-citysp-ka@nic.in ಅಥವಾ kla.citysp2-ka@nic.inಗೆ ಮಾಹಿತಿ ನೀಡುವಂತೆ ಲೋಕಾಯುಕ್ತ ಸಂಸ್ಥೆ ಮನವಿ ಮಾಡಿದೆ.

ರಾಜ್ಯದಲ್ಲಿ 35 ಪ್ರಕರಣ ದಾಖಲು

ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಸೋಗಿನಲ್ಲಿ ಅನಾಮಧೇಯ ವ್ಯಕ್ತಿಗಳು, ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆವೊಡ್ಡಿ ಹಣ ವಸೂಲಿಗೆ ಯತ್ನಿಸಿದ ಆರೋಪದಡಿ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 35 ಪ್ರಕರಣಗಳು ದಾಖಲಾಗಿವೆ.

 ಲೋಕಾ ಮಾಜಿ ಎಸ್ಪಿ ಮೇಲೇ ಲೋಕಾ ರೇಡ್‌! 

ಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಸುಲಿಗೆ ಪ್ರಕರಣ ಸಂಬಂಧ ಲೋಕಾಯುಕ್ತ ಮಾಜಿ ಎಸ್‌ಪಿ ಶ್ರೀನಾಥ್ ಜೋಶಿ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.

ಲೋಕಾಯುಕ್ತ ಪೊಲೀಸರು ಸೋಮವಾರ ಕೋರಮಂಗಲದ ಶ್ರೀನಾಥ್‌ ಜೋಶಿ ನಿವಾಸದ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಶ್ರೀನಾಥ ಜೋಶಿ ಅವರು ಇರಲಿಲ್ಲ. ಇನ್ನು ತಪಾಸಣೆ ವೇಳೆ ಮನೆಯಲ್ಲಿ ಸುಮಾರು 32 ಸಾವಿರ ರು. ನಗದು, ಚಿನ್ನಾಭರಣ ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಶ್ರೀನಾಥ್‌ ಜೋಶಿಗೆ ಲೋಕಾಯುಕ್ತ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೊಬೈಲ್‌ ಪರಿಶೀಲನೆ ವೇಳೆ ಸಂಪರ್ಕ ಬೆಳಕಿಗೆ:

ಸರ್ಕಾರಿ ಅಧಿಕಾರಿಗಳ ಸುಲಿಗೆ ಆರೋಪದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿರುವ ಮಾಜಿ ಹೆಡ್‌ಕಾನ್ಸ್‌ಟೇಬಲ್‌ ನಿಂಗಪ್ಪನ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ. ಆರೋಪಿಯ ಮೊಬೈಲ್ ಪರಿಶೀಲನೆ ವೇಳೆ ಕೆಲ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಲೋಕಾಯುಕ್ತ ಎಸ್ಪಿಯಾಗಿದ್ದ ಶ್ರೀನಾಥ ಜೋಶಿ ಜತೆಗೂ ಕಳೆದ ಎರಡು ವರ್ಷಗಳಿಂದ ಆರೋಪಿ ನಿಂಗಪ್ಪ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಇಬ್ಬರ ನಡುವೆ ಹಣಕಾಸು ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು, ಶ್ರೀನಾಥ ಜೋಶಿ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

ಈ ಸುಲಿಗೆ ಪ್ರಕರಣದಲ್ಲಿ ಮಾಜಿ ಹೆಡ್‌ ಕಾನ್ಸ್‌ಟೇಬಲ್‌ ನಿಂಗಪ್ಪನ ಬಂಧನದ ಬೆನ್ನಲ್ಲೇ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಅವರು ಲೋಕಾಯುಕ್ತ ಎಸ್‌ಪಿ ಹುದ್ದೆಯಿಂದ ಬಿಡುಗಡೆಯಾಗಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ನಾಲ್ಕೈದು ದಿನಗಳಿಂದ ಜೋಶಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಪಾಕ್‌ ಜತೆ ರಾಜ್ಯ ಕಾಂಗ್ರೆಸ್‌ ಕೈಜೋಡಿಸಿದೆಯೇ? : ಬಿಜೆಪಿ
ಜಿ-ರಾಮ್‌ಜಿಯಿಂದ ದುರ್ಬಲರ ಹಕ್ಕಿಗೆ ಕುತ್ತು: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ