ಪಿಎಸ್‌ಐ ನೇಮಕಾತಿಗೆ ಗೃಹ ಇಲಾಖೆ ರೆಡ್‌ ಸಿಗ್ನಲ್‌!

Published : Dec 23, 2025, 10:17 AM IST
Karnataka police

ಸಾರಾಂಶ

ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್‌ಪೆಕ್ಟರ್‌ ಆಗಿ ಸೇರ್ಪಡೆಗೊಂಡು ಖಾಕಿ ತೊಡುವ ಕನಸು ಕಂಡಿರುವ ಅಸಂಖ್ಯಾತ ಉದ್ಯೋಗಾಂಕ್ಷಿಗಳಿಗೆ ಭಾರೀ ನಿರಾಸೆ ಮೂಡಿಸುವ ಸುದ್ದಿ ಇದು. ನೂತನ ವರ್ಷ ಸ್ವಾಗತದ ಸಂಭ್ರಮದ ಹೊತ್ತಿನಲ್ಲೇ ಉದ್ಯೋಕಾಂಕ್ಷಿಗಳಿಗೆ ಕಹಿ ಸಂದೇಶ ಲಭಿಸಿದಂತಾಗಿದೆ

 ಗಿರೀಶ್‌ ಮಾದೇನಹಳ್ಳಿ

 ಬೆಂಗಳೂರು :  ರಾಜ್ಯ ಪೊಲೀಸ್ ಇಲಾಖೆಗೆ ಸಬ್ ಇನ್ಸ್‌ಪೆಕ್ಟರ್‌ ಆಗಿ ಸೇರ್ಪಡೆಗೊಂಡು ಖಾಕಿ ತೊಡುವ ಕನಸು ಕಂಡಿರುವ ಅಸಂಖ್ಯಾತ ಉದ್ಯೋಗಾಂಕ್ಷಿಗಳಿಗೆ ಭಾರೀ ನಿರಾಸೆ ಮೂಡಿಸುವ ಸುದ್ದಿ ಇದು.

ಸದ್ಯ ಹೊಸದಾಗಿ ಸಿವಿಲ್‌ ಪಿಎಸ್‌ಐ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಗೃಹ ಇಲಾಖೆ ಕೆಂಪು ಬಾವುಟ ತೋರಿಸಿದ್ದು, ನೂತನ ವರ್ಷ ಸ್ವಾಗತದ ಸಂಭ್ರಮದ ಹೊತ್ತಿನಲ್ಲೇ ಉದ್ಯೋಕಾಂಕ್ಷಿಗಳಿಗೆ ಕಹಿ ಸಂದೇಶ ಲಭಿಸಿದಂತಾಗಿದೆ. ಪ್ರಸುತ್ತ ಸಿವಿಎಲ್‌ ವಿಭಾಗದಲ್ಲಿ ಪಿಎಸ್‌ಐ ಹುದ್ದೆಗಳು ಲಭ್ಯವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಇಲಾಖೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.

ಇದಕ್ಕೆ ಪ್ರಮುಖ ಕಾರಣ 2021ರ 545 ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ 402 ಪಿಎಸ್‌ಐ ಹುದ್ದೆಗಳ ನೇಮಕಾತಿ ವಿಳಂಬ. ಈ ಎರಡು ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ವಿಳಂಬವಾದ ಕಾರಣ ಖಾಲಿ ಇದ್ದ ಪಿಎಸ್‌ಐ ಸ್ಥಾನಗಳಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಮುಂಬಡ್ತಿ ನೀಡಲಾಗಿದೆ. ಹೀಗಾಗಿ ಪಿಎಸ್‌ಐ ಹುದ್ದೆಗಳು ಲಭ್ಯವಿಲ್ಲ. ಖಾಲಿ ಇಲ್ಲದ ಮೇಲೆ ನೇಮಕಾತಿ ಅಸಾಧ್ಯ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಒಂದೆಡೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ವಿತ್ವಕ್ಕೆ ಬಂದ ನಂತರ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ವಿಳಂಬವಾಗಿದೆ ಎಂದು ಆರೋಪಿಸಿ ಉದ್ಯೋಗಾಂಕ್ಷಿಗಳು ಹೋರಾಟಕ್ಕಿಳಿದಿದ್ದಾರೆ. ಇನ್ನೊಂದೆಡೆ 10 ಸಾವಿರ ಪೊಲೀಸ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದರು. ಆದರೆ ಪಿಎಸ್‌ಐ ಹುದ್ದೆಗಳು ಖಾಲಿ ಇಲ್ಲ. ಆದರೆ ಹಂತ ಹಂತವಾಗಿ 6 ಸಾವಿರ ಕಾನ್‌ಸ್ಟೇಬಲ್‌ಗಳ ನೇಮಕಾತಿಗೆ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಸಿವಿಲ್‌ಗೆ ಆರ್‌ಎಸ್‌ಐ ಹುದ್ದೆಗಳು

ರಾಜ್ಯ ಪೊಲೀಸ್ ಇಲಾಖೆಯಲ್ಲಿ 103 ಪೊಲೀಸ್ ಠಾಣೆಗಳಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಪಿಎಸ್‌ಐ ಹುದ್ದೆಗಳಿವೆ. ಇವುಗಳ ಪೈಕಿ ಶೇ.70ರಷ್ಟು ನೇರ ನೇಮಕಾತಿ ಹಾಗೂ ಶೇ.30 ರಷ್ಟು ಸೇವಾ ಹಿರಿತನ ಆಧಾರದ ಮೇರೆಗೆ ನೇಮಕವಾಗಲಿದೆ. ಆದರೆ ಕೋವಿಡ್‌ ಅವಧಿಯ ಬಳಿಕ ಈ ಅನುಪಾತದಲ್ಲಿ ಏರು ಪೇರಾಗಿದೆ. ಅದೇ ಹೊತ್ತಿಗೆ ನೇಮಕಾತಿ ಹಗರಣ ಬಯಲಾದ ಪರಿಣಾಮ ಉದ್ಯೋಗಾಂಕ್ಷಿಗಳ ಕನಸೂ ಭಂಗಗೊಂಡಿದೆ ಎಂದು ಮೂಲಗಳು ಹೇಳಿವೆ.

ನಾಲ್ಕು ವರ್ಷಗಳಲ್ಲಿ ಇಲಾಖೆಗೆ 545 ಹಾಗೂ 402 ಹೀಗೆ ಒಟ್ಟು 947 ಹೊಸದಾಗಿ ಪಿಎಸ್‌ಐಗಳು ಸೇರಬೇಕಿತ್ತು. ಆದರೆ ನೇಮಕಾತಿ ಅಕ್ರಮದ ಕಾರಣಕ್ಕೆ ಪಿಎಸ್‌ಐ ಆಯ್ಕೆ ಪ್ರಕ್ರಿಯೆ ವಿಳಂಬವಾಯಿತು. ಆಗ ಖಾಲಿ ಹುದ್ದೆಗಳಿಗೆ ಸೇವಾ ಹಿರಿತನ ಆಧಾರದ ಮೇರೆಗೆ ಸಹಾಯಕ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಮುಂಬಡ್ತಿ ನೀಡಲಾಯಿತು. ಇಲಾಖೆಗೆ ಕಾನ್‌ಸ್ಚೇಬಲ್‌ಗಳಾಗಿ ಸೇರಿ ಮೂರು ದಶಕಗಳ ಸುದೀರ್ಘ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ ಪದನ್ನೋತಿ ಲಭಿಸಿದ್ದು ಸಂತಸ ತಂದಿತ್ತು. ಆದರೆ ಹೊಸದಾಗಿ ಸೇರುವವರಿಗೆ ನಿರಾಸೆ ಮೂಡಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೇವಾ ಹಿರಿತನದಡಿ ಮುಂಬಡ್ತಿ ಪಡೆಯಲು ಸಿವಿಲ್‌ ಎಎಸ್‌ಐಗಳು ಅಧಿಕ ಸಂಖ್ಯೆಯಲ್ಲಿದ್ದರು. ಆಗ ಕೆಲ ತಿಂಗಳ ಹಿಂದೆ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯ ಸುಮಾರು 70 ಆರ್‌ಎಸ್‌ಐ ಹುದ್ದೆಗಳಿಗೆ ಸಿವಿಎಲ್‌ ಎಎಸ್‌ಐಗಳಿಗೆ ಮುಂಬಡ್ತಿ ನೀಡಿ ಬಳಿಕ ಅವರನ್ನು ಮಾತೃ ವಿಭಾಗದ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಎಎಸ್‌ಐಗಳ ಬಡ್ತಿಗೆ ಬ್ರೇಕ್ ನೀಡಿದ್ದ ಹಿಂದಿನ ಸರ್ಕಾರ

ಹಿಂದಿನ ಬಿಜೆಪಿ ಸರ್ಕಾರದ ಅ‍ವಧಿಯಲ್ಲಿ ಎರಡು ಹಂತದಲ್ಲಿ 945 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ಆರಂಭಿಸಲಾಗಿತ್ತು. ಆಗ ಸೇವಾ ಹಿರಿತನದ ಆಧಾರದ ಮೇರೆಗೆ ಎಎಸ್‌ಐಗಳಿಗೆ ಮುಂಬಡ್ತಿ ನೀಡದಂತೆ ಅಂದು ಡಿಜಿಪಿ ಸುತ್ತೋಲೆ ಹೊರಡಿಸಿದ್ದರು. ಇದರಿಂದ ನೂರಾರು ಎಎಸ್‌ಐಗಳು ನಿರಾಸೆಗೊಂಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ 6675 ಏಕೋಪಾಧ್ಯಾಯ ಶಾಲೆ!
ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್