ಕೇಂದ್ರದ ಕಾರ್ಯಕ್ರಮದಂತೆ ವಸತಿ ಯೋಜನೇಲಿ ಮೀಸಲು ಹೆಚ್ಚಳ: ಸಿಎಂ

Published : Jun 21, 2025, 08:58 AM IST
Karnataka CM Siddaramaiah (Photo: ANI)

ಸಾರಾಂಶ

ರಾಜ್ಯ ಸರ್ಕಾರದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಮೀಸಲಾತಿ ಪ್ರಮಾಣ ಶೇ.15ಕ್ಕೆ ಹೆಚ್ಚಳ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ(2019)ದ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು :  ರಾಜ್ಯ ಸರ್ಕಾರದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಮೀಸಲಾತಿ ಪ್ರಮಾಣ ಶೇ.15ಕ್ಕೆ ಹೆಚ್ಚಳ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ(2019)ದ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ವಸತಿ ಯೋಜನೆಗಳಲ್ಲಿ ಕ್ರಿಶ್ಚಿಯನ್‌, ಮುಸ್ಲಿಂ, ಜೈನರು ಸೇರಿ ಅಲ್ಪಸಂಖ್ಯಾತ ಸಮುದಾಯಗಳ ಫಲಾನುಭವಿಗಳ ಪ್ರಮಾಣ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸಚಿವ ಸಂಪುಟ ಒಂದು ನಿರ್ಣಯ ಕೈಗೊಂಡಿದೆ. ಇದು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ (2019)ರ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಸ್ಥೆಗಳಲ್ಲಿ ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಂಡು ಅಲ್ಪಸಂಖ್ಯಾತ ಸಮುದಾಯಗಳಿಗೆ ಶೇ.15ರಷ್ಟು ಭೌತಿಕ ಹಾಗೂ ಆರ್ಥಿಕ ಗುರಿಯನ್ನು ಸಾಧಿಸಬೇಕೆಂದು ಈ ಕಾರ್ಯಕ್ರಮ ಸ್ಪಷ್ಟವಾಗಿ ನಿರ್ದೇಶಿಸುತ್ತದೆ ಎಂದು ತಿಳಿಸಿದ್ದಾರೆ.

ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ನೀಡಲಾದ ಮಾರ್ಗಸೂಚಿಗಳಾಗಿದ್ದು, ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇದೊಂದು ಅಸಂವಿಧಾನಿಕ ಅಥವಾ ತುಷ್ಟೀಕರಣದ ನೀತಿಯಾಗಿದ್ದರೆ, ಈ ನಿಯಮವನ್ನು ಪಾಲನೆ ಮಾಡುವಂತೆ ಕೇಂದ್ರ ಸರ್ಕಾರ ಯಾಕೆ ಎಲ್ಲ ರಾಜ್ಯಗಳಿಗೆ ತಿಳಿಸಿದೆ? ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಂತಹ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಯಾಕೆ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ನಮ್ಮ ನಿರ್ಣಯವು ವಸತಿ ಹಂಚಿಕೆಯಲ್ಲಿ ಹೆಚ್ಚುವರಿ ಮೀಸಲಾತಿಯನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತದ್ದಲ್ಲ, ಕೇವಲ ನಿರ್ದಿಷ್ಟ ಸವಾಲುಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಪಸಂಖ್ಯಾತ ಜನಸಂಖ್ಯೆಯು ಶೇ.10ಕ್ಕಿಂತ ಕಡಿಮೆಯಿರುವ ಹಲವು ಪಂಚಾಯತಿಗಳಲ್ಲಿ ನಿಗದಿಪಡಿಸಲಾದ ಶೇ.10ರಷ್ಟು ಮೀಸಲಾತಿಯ ಅವಕಾಶ ಸದ್ಬಳಕೆಯಾಗುತ್ತಿರಲಿಲ್ಲ. ಹೀಗಾಗಿ ನಿಗದಿಪಡಿಸಲಾದ ಗುರಿ ತಲುಪಲು ಮತ್ತು ಲೋಪದೋಷಗಳನ್ನು ತಡೆಯಲು ಇಂತಹ ಪಂಚಾಯತಿಗಳಿಂದ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿರುವ ಕಡೆಗೆ ಗರಿಷ್ಠ ಶೇ.15ರಷ್ಟು ಮಿತಿಗೆ ಒಳಪಟ್ಟು ಮರುಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಅವರು ಸ್ಪಷ್ಟಪಡಿಸಿದ್ದಾರೆ.

ಇದು ಕೇವಲ ಆಡಳಿತಾತ್ಮಕ ದೃಷ್ಟಿಯಿಂದ ಸಾಮಾನ್ಯ ವರ್ಗದಲ್ಲಿ ಮಾಡಿಕೊಂಡ ಹೊಂದಾಣಿಕೆಯಾಗಿದ್ದು, ಇದರಿಂದ ಎಸ್ಸಿ, ಎಸ್ಟಿ ಅಥವಾ ಒಬಿಸಿ ವರ್ಗಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದು ಕಾನೂನು ಇಲಾಖೆಯ ವಿಸ್ತೃತ ಪರಾಮರ್ಷೆಯ ನಂತರ ಕೈಗೊಂಡ ತೀರ್ಮಾನವಾಗಿದ್ದು, ಕಾನೂನಾತ್ಮಕವಾಗಿಯೂ ಸಮರ್ಪಕವಾಗಿದೆ. ಬಿಜೆಪಿಯವರ ಟೀಕೆಗಳು ಕೇವಲ ದುರುದ್ದೇಶದ ಹಾಗೂ ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದಾರೆ.

ಈ ರೀತಿಯ ವ್ಯವಸ್ಥಿತ ಅಪಪ್ರಚಾರದ ಹಿಂದೆ ಕೋಮು ವಿವಾದವನ್ನು ಸೃಷ್ಟಿಸುವ ಹುನ್ನಾರವಲ್ಲದೆ ಬೇರೇನೂ ಇಲ್ಲ. ಇದು ರಾಜ್ಯದ ಬಡವರು ಮತ್ತು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವ ಪ್ರಯತ್ನದ ದಿಕ್ಕು ತಪ್ಪಿಸುವ ಕುತಂತ್ರ ಎಂದು ಮುಖ್ಯಮಂತ್ರಿಯವರು ತಿರುಗೇಟು ನೀಡಿದ್ದಾರೆ.

34 ಸಾವಿರ ಅಲ್ಪಸಂಖ್ಯಾತ ಕುಟುಂಬಕ್ಕೆ ಲಾಭ:

ನಮ್ಮ ಈ ನಿರ್ಧಾರದಿಂದ ಪ್ರಸಕ್ತ ವರ್ಷ ಒಂದರಲ್ಲೇ ಸುಮಾರು 34,000 ಅಲ್ಪಸಂಖ್ಯಾತ ಕುಟುಂಬಗಳಿಗೆ ಲಾಭವಾಗಲಿದೆ. ಆ ಪೈಕಿ ಹೆಚ್ಚಿನವರು ಭೂರಹಿತರು ಮತ್ತು ಮನೆಗಳ ತುರ್ತು ಅಗತ್ಯತೆ ಇರುವವರಾಗಿದ್ದಾರೆ. ಅಲ್ಪಸಂಖ್ಯಾತ ಅರ್ಜಿದಾರರು ಇಲ್ಲದ ಪಂಚಾಯತಿಗಳಲ್ಲಿನ ಉಪಯೋಗವಾಗದೆ ಉಳಿದ ವಸತಿ ಹಂಚಿಕೆಗಳನ್ನು ಅತಿ ಅಗತ್ಯವಿರುವೆಡೆಗೆ ಮರುಹಂಚಿಕೆ ಮಾಡುವ ಕ್ರಮ ಇದಾಗಿದೆ.

ಜಾತಿ ಅಥವಾ ಧರ್ಮದ ಭೇದವಿಲ್ಲದೆ ಪ್ರತಿಯೊಂದು ಬಡ ಕುಟುಂಬಕ್ಕೆ ತಲುಪುವಂತಹ ಯೋಜನೆಗಳನ್ನು ಜಾರಿ ಮಾಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌