;Resize=(412,232))
ಬೆಂಗಳೂರು : ವಿವಾಹಿತೆ ಮೇಲಿನ ಕ್ರೌರ್ಯ (ಐಪಿಸಿ 498ಎ) ಅಪರಾಧವು ಕೇವಲ ವಿವಾಹಿತನಿಗಷ್ಟೇ ಸೀಮಿತವಾಗದೆ, ಮದುವೆಯ ಗುಣಲಕ್ಷಣಗಳನ್ನು ಹೊಂದಿರುವ ಹಾಗೂ ವಿವಾಹವಾಗದೆ ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿರುವ (ಲಿವ್-ಇನ್ ರಿಲೇಷನ್ ಹೊಂದಿರುವ) ವ್ಯಕ್ತಿಗೂ ಅನ್ವಯಿಸಲಿದೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕ್ರೌರ್ಯ ಅಪರಾಧದಡಿ ಮಹಿಳೆಯೊಬ್ಬರು (ಎರಡನೇ ಪತ್ನಿ) ತನ್ನ ವಿರುದ್ಧ ದಾಖಲಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಶಿವಮೊಗ್ಗದ ಡಾ। ಬಿ.ಎಚ್.ಲೋಕೇಶ್ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಅರ್ಜಿದಾರರು ಮತ್ತು ದೂರುದಾರರು ಒಟ್ಟಿಗೆ ವಾಸವಿದ್ದು, ಪತಿ-ಪತ್ನಿ ಎಂಬುದಾಗಿ ಗುರುತಿಸಿಕೊಂಡು ಸಾಮಾಜಿಕ ಜವಾಬ್ದಾರಿ ನಿರ್ವಹಿಸಿರುವುದು ಪ್ರಕರಣದ ದಾಖಲೆಗಳಿಂದ ಸ್ಪಷ್ಟವಾಗಿದೆ. ಹಾಗಾಗಿ, ದೂರುದಾರೆಯನ್ನು ಕಾನೂನುಬದ್ಧವಾಗಿ ವಿವಾಹವಾಗಿರದ ಕಾರಣ ಆಕೆ ಆರೋಪಿಸಿರುವ ಕ್ರೌರ್ಯ ಅಪರಾಧ ತನಗೆ ಅನ್ವಯಿಸುವುದಿಲ್ಲ ಎಂಬ ಅರ್ಜಿದಾರನ ವಾದ ಒಪ್ಪಲಾಗದು. ಮದುವೆಯಾಗಿಲ್ಲ ಎಂಬ ಕಾರಣ ನೀಡಿ ತನ್ನ ತಪ್ಪಿನಿಂದ ನುಣುಚಿಕೊಳ್ಳುವುದಕ್ಕೆ ಆತ ಮುಂದಾಗಿದ್ದಾರೆ. ಅದಕ್ಕೆ ಅವಕಾಶ ನೀಡುವುದಿಲ್ಲ. ದೂರುದಾರೆ-ಅರ್ಜಿದಾರ ಸಂಬಂಧ ಪತಿ-ಪತ್ನಿ ಸಂಬಂಧದಂತೆ ತೋರುವುದರಿಂದ ದೂರುದಾರೆಗೆ ಐಪಿಸಿ ಸೆಕ್ಷನ್ 498(ಎ) ಅಡಿ ರಕ್ಷಣೆ ದೊರೆಯಲಿದೆ. ಈ ರೀತಿಯ ಆರೋಪವಿರುವ ಪ್ರಕರಣಗಳಲ್ಲಿ ಕಾನೂನುಬದ್ಧ ಪತಿ-ಪತ್ನಿಯ ಸಂಬಂಧವನ್ನೇ ಹೊಂದಿರಬೇಕು ಎಂಬ ಅವಶ್ಯಕತೆಯೇನೂ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರು ಈ ಮೊದಲೇ ಮದುವೆಯಾಗಿದ್ದರು. ಈ ವಿಷಯ ಮರೆಮಾಚಿ ದೂರುದಾರೆಯನ್ನು 2010ರ ಅ.17ರಂದು ವಿವಾಹವಾಗಿದ್ದು, ಬೆಂಗಳೂರಿನಲ್ಲಿ ಜತೆಗೆ ನೆಲೆಸಿದ್ದರು. ಬಳಿಕ ಶಿವಮೊಗ್ಗಕ್ಕೆ ಸ್ಥಳಾಂತರಗೊಂಡು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. 2016ರಲ್ಲಿ ದೂರುದಾರೆ, ಅರ್ಜಿದಾರನ ಮೇಲೆ ದೂರು ದಾಖಲಿಸಿದ್ದರು. ಅರ್ಜಿದಾರ ಮದುವೆ ಸಂದರ್ಭದಲ್ಲಿ ಒಂದು ಕೆ.ಜಿ. ಚಿನ್ನ, 3 ಕೆ.ಜಿ. ಬೆಳ್ಳಿ ಮತ್ತು 10 ಲಕ್ಷ ನಗದು ಪಡೆದುಕೊಂಡಿದ್ದರು. ಆದರೂ ಅವರ ಕುಟುಂಬದ ಸದಸ್ಯರು ಮತ್ತಷ್ಟು ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು ಅರ್ಜಿದಾರರು ಈ ಹಿಂದೆ ಆಗಿದ್ದ ಮದುವೆಯನ್ನು ಬಹಿರಂಗಪಡಿಸಿರಲಿಲ್ಲ ಎಂದು ದೂರುದಾರೆ ಆರೋಪಿಸಿದ್ದರು.
ಅಲ್ಲದೆ, ಅರ್ಜಿದಾರ ಒಂದು ದಿನ ನಡೆದ ಗಲಾಟೆ ವೇಳೆ ದೂರುದಾರೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ದೂರುದಾರರನ್ನು ಮಲ್ಲೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮಾಹಿತಿ ಮೇರೆಗೆ ಸ್ಥಳೀಯ ಠಾಣೆಯಲ್ಲಿ ಕೊಲೆ ಯತ್ನ, ವರದಕ್ಷಿಣೆ ಕಿರುಕುಳ ಆರೋಪದಲ್ಲಿ ದೂರು ದಾಖಲಿಸಿದ್ದರು.
ಈ ಎರಡು ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ, ಪ್ರಕರಣದ ದೂರುದಾರೆಯೊಂದಿಗೆ ತಾನು ವಿವಾಹವಾಗಿಲ್ಲ. ಹೀಗಾಗಿ ಈ ಸಂಬಂಧಕ್ಕೆ ಕಾನೂನು ಪಾವಿತ್ರ್ಯತೆ ಇಲ್ಲ. ಆದ ಕಾರಣ ತನ್ನ ವಿರುದ್ಧ ಕ್ರೌರ್ಯದ ಆರೋಪ ಮಾಡಲು ಅವಕಾಶವಿಲ್ಲ ಎಂದು ವಾದಿಸಿದ್ದ.
ಈ ವಾದ ತಿರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರ ಅದಾಗಲೇ ಮತ್ತೊಂದು ಮಹಿಳೆ ಜೊತೆ ಮದುವೆಯಾಗಿ ಮಗು ಇತ್ತು. ಈ ಸಂಗತಿ ಮರೆಮಾಚಿ ದೂರುದಾರೆಯೊಂದಿಗೆ ಒಂದೇ ಮನೆಯಲ್ಲಿ ನೆಲೆಸಿದ್ದರು. ಪ್ರಕರಣದಲ್ಲಿ ದೂರುದಾರೆ-ಅರ್ಜಿದಾರನ ಸಂಬಂಧ ಕಾನೂನುಬದ್ಧವಲ್ಲ ಎಂದರೂ ಅವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಕಾನೂನುಬದ್ಧವಲ್ಲದ ಮದುವೆ ಎಂಬ ಕಾರಣದಿಂದ ಕ್ರೌರ್ಯ ಅಪರಾಧದ ಆರೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅರ್ಜಿದಾರರ ವಿರುದ್ಧದ ಆರೋಪಗಳು ಕ್ರೌರ್ಯ ಅಪರಾಧದಡಿಗೆ ಬರಲಿದೆ. ಅರ್ಜಿದಾರರು ದೂರುದಾರರನ್ನು ಕಾನೂನುಬದ್ಧವಾಗಿ ವಿವಾಹವಾಗಿಲ್ಲ ಎಂಬ ವಾದ ಅಂಗೀಕರಿಸಿದರೆ, ಅದು ನ್ಯಾಯಸಮ್ಮತವಾಗುವುದಿಲ್ಲ ಎಂದು ನುಡಿದಿದೆ.