;Resize=(412,232))
ಮಯೂರ್ ಹೆಗಡೆ
ಬೆಂಗಳೂರು : ನಮ್ಮ ಮೆಟ್ರೋ 3ನೇ ಹಂತದ ಕಿತ್ತಳೆ ಮಾರ್ಗದಲ್ಲಿ ನಿರ್ಮಾಣ ಆಗಲಿರುವ 37.121 ಕಿ.ಮೀ. ಡಬಲ್ ಡೆಕ್ಕರ್‌ಗೆ ಪ್ರವೇಶ, ನಿರ್ಗಮನಕ್ಕೆ 5 ಕಡೆ ಅವಕಾಶ ಕಲ್ಪಿಸಲು (ರ್ಯಾಂಪ್ ನಿರ್ಮಿಸಲು) ಉದ್ದೇಶಿಸಲಾಗಿದೆ. ಜತೆಗೆ ವಿವಿಧ 9ಕಡೆ ಕೆಳರಸ್ತೆ ಸಂಪರ್ಕಿಸಲು (ಲೂಪ್ಸ್) ಸಾಧ್ಯವಿರಲಿದೆ.
ಕಿತ್ತಳೆ ಮಾರ್ಗವು ಎರಡು ಹಂತದಲ್ಲಿ ಒಟ್ಟೂ 44.65ಕಿಮೀ ಇದೆ. ಮೊದಲ ಹಂತ ಜೆ.ಪಿ.ನಗರದಿಂದ ಕೆಂಪಾಪುರ (32ಕಿಮೀ) ಸಂಪರ್ಕಿಸಲಿದ್ದು, ಇದರಲ್ಲಿ ದಾಲ್ಮಿಯಾ ಸರ್ಕಲ್‌ನಿಂದ ಹೆಬ್ಬಾಳದವರೆಗೆ (28.486 ಕಿಮೀ) ಡಬಲ್ ಡೆಕ್ಕರ್ ಇರಲಿದೆ. ಇದು ಬೆಂಗಳೂರಿನ ಅತೀ ಉದ್ದದ ಡಬಲ್‌ಡೆಕ್ಕರ್ ಎನ್ನಿಸಿಕೊಳ್ಳಲಿದೆ. ಇನ್ನು 2ನೇ ಹಂತ ಹೊಸಹಳ್ಳಿಯಿಂದ ಕಡಬಗೆರೆ (13ಕಿಮೀ) ಸಂಪರ್ಕಿಸಲಿದ್ದು ಇದರಲ್ಲಿ ಕೆಎಚ್‌ಬಿ ಕಾಲನಿಯಿಂದ ಕಡಬಗೆರೆವರೆಗೆ (8ಕಿಮೀ) ಡಬಲ್ ಡೆಕ್ಕರ್ ನಿರ್ಮಾಣ ಆಗಲಿದೆ.
ಎರಡು ಹಂತ ಸೇರಿ ಒಟ್ಟೂ 37.121 ಕಿಮೀ ಉದ್ದದ ಡಬಲ್ ಡೆಕ್ಕರ್ ನಿರ್ಮಾಣ ಆಗಲಿದೆ. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮವು ಕಾರ್ಯಸಾಧ್ಯತಾ ವರದಿ ಜತೆಗೆ ಡಿಪಿಆರ್ ಸಿದ್ಧಪಡಿಸಿದ್ದು, ಡಬಲ್‌ಡೆಕ್ಕರ್‌ಗೆ ಬರೋಬ್ಬರಿ ₹9,692.33 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರ ಭರಿಸಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪೈಕಿ ರಾಜ್ಯ ಸರ್ಕಾರ ನೇರವಾಗಿ ಶೇ.50ರಷ್ಟು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಶೇ.10ರಷ್ಟು ಹಾಗೂ ಶೇ.40ರಷ್ಟು ಸಾಲ ಎತ್ತಲು ತೀರ್ಮಾನಿಸಲಾಗಿದೆ.
ಈಗಾಗಲೇ ಬಿಎಂಆರ್‌ಸಿಎಲ್ ನಿರ್ಮಿಸಿರುವ ರಾಗಿಗುಡ್ಡ - ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ 3ಕಿಮೀ ಡಬಲ್ ಡೆಕ್ಕರ್ ರೀತಿಯೆ ಇದು ಕೂಡ ಕೆಳಭಾಗದಲ್ಲಿ ರಸ್ತೆ ಫ್ಲೈಓವರ್ ಹಾಗೂ ಮೇಲ್ಭಾಗದಲ್ಲಿ ಎಲಿವೆಟೆಡ್ ಮೆಟ್ರೋ ಮಾರ್ಗ ಹೊಂದಿರಲಿದೆ.
ಮೊದಲ ಹಂತದಲ್ಲಿ ದಾಲ್ಮಿಯಾ ಸರ್ಕಲ್‌ನಿಂದ ಡಬಲ್‌ಡೆಕ್ಕರ್ ಆರಂಭವಾಗಲಿದೆ. ಇಲ್ಲಿ ಈಗಾಗಲೇ ಇರುವ ಫ್ಲೈಓವರ್‌ನ್ನು ಡಬಲ್‌ಡೆಕ್ಕರ್‌ಗಾಗಿ ನೆಲಸಮಗೊಳಿಸಲು ನಿರ್ಧಾರವಾಗಿದೆ. ಇಲ್ಲಿ 631 ಮೀ. ಉದ್ದದ ಪ್ರವೇಶ- ನಿರ್ಗಮನದ ರ್ಯಾಂಪ್ ನಿರ್ಮಾಣ ಮಾಡಲಾಗುವುದು. ಮುಂದೆ ಹೆಬ್ಬಾಳದಲ್ಲಿ ಕೂಡ ಪ್ರವೇಶ, ತೆರ್ಗಡೆಗೆ ರ್ಯಾಂಪ್ ಇರಲಿದೆ. ಇಲ್ಲಿಂದ ಮುಂದೆ ಫ್ಲೈಓವರ್ ಕವಲೊಡೆದು ವಿಮಾನ ನಿಲ್ದಾಣದ ಕಡೆಗೆ ಮುಂದುವರಿದರೆ ಮೆಟ್ರೋ ಮಾರ್ಗ ಕೆಂಪಾಪುರ ಮೆಟ್ರೋ ಟರ್ಮಿನಲ್‌ಗೆ ಹೋಗಲಿದೆ.
ಎರಡನೇ ಹಂತದಲ್ಲಿ ಮೆಟ್ರೋ ಕೆಎಚ್‌ಬಿ ಕಾಲನಿ ಮತ್ತು ಕಡಬಗೆರೆವರೆಯಲ್ಲಿ ಪ್ರವೇಶ- ನಿರ್ಗಮನದ ರ್ಯಾಂಪ್ ನಿರ್ಮಾಣ ಅಗಲಿದೆ.
ಮೊದಲ ಹಂತದಲ್ಲಿ ಏಳು ಕಡೆ ಕೆಳರಸ್ತೆ ಸಂಪರ್ಕಿಸಲು ಒಟ್ಟು 6ಕಿಮೀ ಲೂಪ್ ನಿರ್ಮಾಣ ಆಗಲಿದೆ. ಕನಕಪುರ ರಸ್ತೆ ಸಂಪರ್ಕಿಸಲು ಸಾರಕ್ಕಿ ಜಂಕ್ಷನ್ ಬಳಿ ಸೇರಿದಂತೆ ಮೈಸೂರು ರಸ್ತೆ, ವಿನಾಯಕ ಲೇಔಟ್, ಮಾಗಡಿ ರಸ್ತೆ ಸಂಪರ್ಕಿಸಲು ಸುಮನಹಳ್ಳಿ ಜಂಕ್ಷನ್, ತುಮಕೂರು ರಸ್ತೆ ಸಂಪರ್ಕಿಸಲು ಗೊರಗುಂಟೆಪಾಳ್ಯ ಹಾಗೂ ವಿಮಾನ ನಿಲ್ದಾಣದತ್ತ ತೆರಳಲು ಹೆಬ್ಬಾಳದಲ್ಲಿ ಲೂಪ್ ನಿರ್ಮಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು, ಕೆಎಚ್‌ಬಿ ಕಾಲನಿಯಿಂದ ಕಡಬಗೆರೆವರೆಗಿನ ಡಬಲ್‌ಡೆಕ್ಕರ್‌ನಲ್ಲಿ ಸುಮನಹಳ್ಳಿ ಹಾಗೂ ನೈಸ್ ರೋಡ್ ಸಂಪರ್ಕಿಸಲು ಎರಡು ಸೇರಿ 3ಕಿಮೀ ಲೂಪ್ ನಿರ್ಮಾಣ ಆಗಲಿದೆ.
ಫ್ಲೈಓವರಲ್ಲಿ ಓಡಾಡಲು ಟೋಲ್ ಕಟ್ಟಬೇಕು
ಡಬಲ್‌ಡೆಕ್ಕರ್‌ನ ಫ್ಲೈಓವರ್‌ನಲ್ಲಿ ಓಡಾಡಲು ಟೋಲ್ ಇರಲಿದ್ದು, ದರವನ್ನು ಸರ್ಕಾರ, ಬಿಎಂಆರ್‌ಸಿಎಲ್ ಈವರೆಗೆ ನಿರ್ಧರಿಸಿಲ್ಲ. ಕೇಂದ್ರ ಸರ್ಕಾರ 2024 ರಲ್ಲೇ 3ನೇ ಹಂತದ ಮೆಟ್ರೋಗೆ ಚಾಲನೆ ನೀಡಿದೆ. ಆದರೆ ಬಳಿಕ ರಾಜ್ಯ ಸರ್ಕಾರ ಡಬಲ್ ಡೆಕ್ಕರ್ ನಿರ್ಮಿಸಲು ಉದ್ದೇಶಿಸಿ ಪುನಃ ಪರಿಷ್ಕೃತ ಡಿಪಿಆರ್ ತಯಾರಿಸಿದೆ.