ಭ್ರೂಣ ಹತ್ಯೆ ಸಹಾಯವಾಣಿಗೆ ಎರಡೇ ಕರೆ ! ಅನೇಕರಿಗೆ ಗೊತ್ತೇ ಇಲ್ಲ

Published : Nov 24, 2025, 11:52 AM IST
 pregnancy

ಸಾರಾಂಶ

ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ ಸಂಬಂಧ ರಾಜ್ಯ ಸರ್ಕಾರ ಆರಂಭಿಸಿದ್ದ ಸಹಾಯವಾಣಿಗೆ ಕಳೆದ 11 ತಿಂಗಳ ಅವಧಿಯಲ್ಲಿ ಕರೆ ಮಾಡಿದ್ದು ಕೇವಲ ಇಬ್ಬರು ಮಾತ್ರ!    ಭ್ರೂಣ ಪತ್ತೆ ಮತ್ತು ಹತ್ಯೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸಹಾಯವಾಗಲೆಂದು ‘080-23295603/05’ ಸಂಖ್ಯೆಯ ಸಹಾಯವಾಣಿ ಆರಂಭಿಸಿದೆ

ಮಂಜುನಾಥ ಕೆ.

  ಬೆಂಗಳೂರು :  ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ ಸಂಬಂಧ ರಾಜ್ಯ ಸರ್ಕಾರ ಆರಂಭಿಸಿದ್ದ ಸಹಾಯವಾಣಿಗೆ ಕಳೆದ 11 ತಿಂಗಳ ಅವಧಿಯಲ್ಲಿ ಕರೆ ಮಾಡಿದ್ದು ಕೇವಲ ಇಬ್ಬರು ಮಾತ್ರ!

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಸಹಾಯವಾಗಲೆಂದು ‘080-23295603/05’ ಸಂಖ್ಯೆಯ ಸಹಾಯವಾಣಿ ಆರಂಭಿಸಿದೆ. ಇದಕ್ಕೆ ಕಳೆದ 11 ತಿಂಗಳಿನಲ್ಲಿ ಕೇವಲ ಎರಡು ಕರೆಗಳು ಮಾತ್ರ ಬಂದಿವೆ. ಮಂಡ್ಯದಿಂದ ಪುರುಷರೊಬ್ಬರು ಮತ್ತು ಬೆಂಗಳೂರಿನಿಂದ ಮಹಿಳೆಯೊಬ್ಬರು ಕರೆ ಮಾಡಿ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನು ಹೊರತುಪಡಿಸಿ ಈವರೆಗೂ ಯಾರೊಬ್ಬರೂ ಕರೆ ಮಾಡಿಲ್ಲ ಎಂದು ತಿಳಿದು ಬಂದಿದೆ.

ಸಹಾಯವಾಣಿ ಬಗ್ಗೆ ಮತ್ತಷ್ಟು ಜಾಗೃತಿ ಅಗತ್ಯ:

ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ರಾಜ್ಯದಲ್ಲಿ ಇಂದಿಗೂ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ ಎಂಬುದಕ್ಕೆ ಇತ್ತೀಚೆಗೆ ಈ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ನಾಲ್ವರು ಬಂಧನವಾಗಿರುವುದೇ ಸಾಕ್ಷಿ. ಈ ಹಿಂದೆ ಮಂಡ್ಯದಲ್ಲಿಯೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ 18ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು. ಆ ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ. ಹೆಣ್ಣು ಭ್ರೂಣ ಹತ್ಯೆ ಪತ್ತೆ ಬಗ್ಗೆ ಸಹಾಯವಾಣಿಯೊಂದು ಇದೆ ಎಂಬ ವಿಚಾರವೇ ಎಷ್ಟೋ ಮಂದಿಗೆ ತಿಳಿದಿಲ್ಲ. ಹೀಗಾಗಿ ಈ 080-23295603/05 ಸಹಾಯವಾಣಿ ಬಗ್ಗೆ ಮತ್ತಷ್ಟು ಪ್ರಚಾರ ಮತ್ತು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹುಮಾನ ಮೊತ್ತ 1 ಲಕ್ಷಕ್ಕೆ ಏರಿಕೆ:

ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡುವ ಮಾಹಿತಿದಾರರಿಗೆ ಸರ್ಕಾರ ಮೊದಲು 50 ಸಾವಿರ ರು.ಬಹುಮಾನ ನಿಗದಿ ಮಾಡಿತ್ತು. ನಂತರ ಬಹುಮಾನ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಮಾಡಿತ್ತು. ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಚಟುವಟಿಕೆಗಳ ಬಗ್ಗೆ ಯಾರೇ ಮಾಹಿತಿ ನೀಡಿ ಆ ಕಾರ್ಯಾಚರಣೆ ಯಶಸ್ವಿಗೊಂಡರೆ ಅಂತಹ ಮಾಹಿತಿದಾರರಿಗೆ ₹1 ಲಕ್ಷ ಬಹುಮಾನ ನೀಡಲಾಗುತ್ತದೆ. ಜತೆಗೆ ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.--

 ಭ್ರೂಣ ಹತ್ಯೆ ಕಂಡರೆ ಸಹಾಯವಾಣಿ

‘080-23295603/05’ ಗೆ ಕರೆ ಮಾಡಿ

PREV
Read more Articles on

Recommended Stories

ಕಬ್ಬು ದರ ಆಯ್ತು, ಈಗ ಮೆಕ್ಕೆ ಜೋಳಕ್ಕೆ ಬಿವೈವಿ ಹೋರಾಟ
ಹಾಸ್ಟೆಲ್‌ ಸೌಲಭ್ಯ ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯಿರಿ